Advertisement

ರಾಮುಲುಗೆ ಕೈತಪ್ಪುತ್ತಾ ಡಿಸಿಎಂ ಸ್ಥಾನ ?

11:37 PM Dec 11, 2019 | Lakshmi GovindaRaj |

ಬಳ್ಳಾರಿ: ಬದಲಾದ ರಾಜಕೀಯ ಸ್ಥಿತಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೈ ತಪ್ಪಲಿದೆಯೇ? ರಾಜಕೀಯ ಪಡಸಾಲೆಯಲ್ಲಿ ಈ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿವೆ. 2018ರ ವಿಧಾನ ಸಭಾ ಚುನಾವಣೆ ಸಂದರ್ಭದಿಂದಲೂ ಶ್ರೀರಾಮುಲು ಅವರಿಗೆ ಡಿಸಿಎಂ ಹುದ್ದೆ ನೀಡುವ ವಿಚಾರ ಕೇಳಿ ಬರುತ್ತಿದೆ. ಈಗ ಉಪಚುನಾವಣೆ ಮುಗಿದು ಬಿಜೆಪಿ ಸರಕಾರಕ್ಕೆ ಬಹುಮತ ಸಿಕ್ಕಿದೆ.

Advertisement

ಹೀಗಾಗಿ, ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಮೈತ್ರಿ ಸರಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ್‌ ಸಾಹುಕಾರ, ವಾಲ್ಮೀಕಿ ಸಮುದಾಯದವರೇ ಆದ ರಮೇಶ್‌ ಜಾರಕಿಹೊಳಿಯವರಿಂದ ಶ್ರೀರಾಮುಲು ಅವರ ಡಿಸಿಎಂ ಕನಸಿಗೆ ಬಹುತೇಕ ಎಳ್ಳುನೀರು ಬಿಟ್ಟಂತಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಶ್ರೀರಾಮುಲು ಅವರು ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಕಾರಣಕ್ಕಾಗಿಯೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಎರಡು ಕ್ಷೇತ್ರ ಗಳಲ್ಲಿ ಕಣಕ್ಕಿಳಿಸಲಾಗಿತ್ತು. ಜತೆಗೆ, ರಾಜ್ಯದ ಬಹುತೇಕ ವಿಧಾನಸಭೆ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಕಳುಹಿಸ ಲಾಗಿತ್ತು. ಲೋಕಸಭೆ ಚುನಾವಣೆಯಲ್ಲೂ ರಾಜ್ಯದ ವಿವಿಧ ಲೋಕಸಭೆ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಕಳುಹಿಸಲಾಗಿತ್ತು. ಆ ಮೂಲಕ ಪಕ್ಷದ ರಾಜ್ಯ ಮುಖಂಡರನ್ನಾಗಿಯೂ ಬಿಂಬಿಸಲಾಗಿತ್ತು.

ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದಾಗ ಸಚಿವ ಸಂಪುಟ ವಿಸ್ತರಣೆ ವೇಳೆ ಪರಿಶಿಷ್ಟ ಜಾತಿ, ಒಕ್ಕಲಿಗ, ಲಿಂಗಾಯತ ಸಮುದಾ ಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದ ಸಿಎಂ ಯಡಿಯೂರಪ್ಪ ಅವರು, ರಮೇಶ್‌ ಜಾರಕಿಹೊಳಿ ಯವರಿಗಾಗಿಯೇ ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದನ್ನು ತಡೆ ಹಿಡಿದಿದ್ದರು ಎನ್ನಲಾಗುತ್ತಿದೆ. ಇದೀಗ, ರಮೇಶ್‌ ಜಾರಕಿಹೊಳಿ ಜಯಗಳಿಸಿದ್ದು ಸಂಪುಟ ವಿಸ್ತರಣೆ ವೇಳೆ ಅವರಿಗೆ ಡಿಸಿಎಂ ಸ್ಥಾನ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇಬ್ಬರೂ ಪ್ರಭಾವಿ ಮುಖಂಡರು: ಶ್ರೀರಾಮುಲು ಹಾಗೂ ರಮೇಶ್‌ ಜಾರಕಿಹೊಳಿ ಇಬ್ಬರೂ ಪ್ರಭಾವಿ ಮುಖಂಡರು. ಇಬ್ಬರೂ ವಾಲ್ಮೀಕಿ ಸಮುದಾಯದವರಾದ ಹಿನ್ನೆಲೆಯಲ್ಲಿ ಒಬ್ಬರಿಗೆ ಡಿಸಿಎಂ ಸ್ಥಾನ ನೀಡಬಹುದು. ಒಂದು ವೇಳೆ ರಮೇಶ್‌ ಜಾರಕಿಹೊಳಿ ಅವರಿಗೆ ಆ ಹುದ್ದೆ ನೀಡಿದಲ್ಲಿ ಶ್ರೀರಾಮುಲುಗೆ ದೊಡ್ಡ ಹಿನ್ನಡೆಯಾಗಲಿದೆ. ಈ ಕಾರಣದಿಂದಲೇ ಅವರು ಉಪಚುನಾವಣೆಯಲ್ಲಿ ಒಮ್ಮೆಯೂ ಬೆಳಗಾವಿ ಕಡೆ ಪ್ರಚಾರಕ್ಕೆ ಹೋಗಲಿಲ್ಲ ಎನ್ನಲಾಗುತ್ತಿದೆ.

Advertisement

ಒಂದು ವೇಳೆ, ವಾಲ್ಮೀಕಿ ಸಮುದಾಯಕ್ಕೂ ಉಪಮುಖ್ಯಮಂತ್ರಿ ಸ್ಥಾನ ನೀಡಿದಲ್ಲಿ ನೆರೆಯ ಆಂಧ್ರಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಜಾತಿಗೊಂದು ಉಪಮುಖ್ಯಮಂತ್ರಿ ಸ್ಥಾನ ನೀಡಿದಂತಾಗುತ್ತದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯಕ್ಕಾಗಿ ನಾಲ್ಕನೇ ಡಿಸಿಎಂ ಸ್ಥಾನ ಸೃಷ್ಟಿಸಲಿದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.

* ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next