Advertisement

ಮೊಳಕಾಲ್ಮೂರಲ್ಲಿ ರಾಮುಲು ಶಕ್ತಿ ಪ್ರದರ್ಶನ

06:00 AM Apr 22, 2018 | Team Udayavani |

ಶನಿವಾರವೂ ವಿವಿಧ ಪಕ್ಷಗಳ ಮುಖಂಡರು ಭಾರೀ ಮೆರವಣಿಗೆ, ಕಾರ್ಯಕರ್ತರ ಜೈಕಾರದೊಂದಿಗೆ ಉಮೇದುವಾರಿಕೆ ಸಲ್ಲಿಸಿದರು. ಮೊಳಕಾಲ್ಮೂರಲ್ಲಿ ಶ್ರೀರಾಮುಲು ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕರ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದರೆ, ಹೊಳೆನರಸೀಪುರದಲ್ಲಿ ಎಚ್‌.ಡಿ.ರೇವಣ್ಣ ಶನಿವಾರ ಮತ್ತೂಂದು ನಾಮ ಪತ್ರ ಸಲ್ಲಿಸಿದರು. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ.ರಾಮದಾಸ್‌, ಬಳ್ಳಾರಿ ನಗರ ಕ್ಷೇತ್ರದಿಂದ ಸೋಮಶೇಖರ ರೆಡ್ಡಿ, ಹೊಸದುರ್ಗ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ನಟ ಶಶಿಕುಮಾರ್‌ ಉಮೇದುವಾರಿಕೆ ಸಲ್ಲಿಸಿದರು.

Advertisement

ಮೊಳಕಾಲ್ಮೂರು: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಶನಿವಾರ ನಾಮಪತ್ರ ಸಲ್ಲಿಸಿದರು. ಟಿಕೆಟ್‌ ಘೋಷಣೆ ಸಂದರ್ಭದಿಂದಲೂ ರಾಜ್ಯದ ಗಮನ ಸೆಳೆದ ಈ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯಂದೇ ರಾಮುಲು ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ಸುಮಾರು 25-30 ಸಾವಿರಕ್ಕೂ ಅಧಿಕ ಕಾರ್ಯಕರ್ತರಿದ್ದ
ಅದೂಟಛಿರಿ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್‌, ಶಾಸಕ ಎನ್‌.ವೈ. ಗೋಪಾಲಕೃಷ್ಣ ಹಾಗೂ ಇತರೆ ಪ್ರಮುಖರು 
ಶ್ರೀರಾಮುಲು ಅವರಿಗೆ ಸಾಥ್‌ ನೀಡಿದರು. ಮೆರವಣಿಗೆಗೆ ನಂತರ ಬಿ. ಶ್ರೀರಾಮುಲು ನಾಲ್ವರೊಂದಿಗೆ ತೆರಳಿ ಚುನಾವಣಾಧಿ ಕಾರಿ ಲಕ್ಷ್ಮಣ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಸೋಮಶೇಖರ್‌ ರೆಡ್ಡಿ ಉಮೇದುವಾರಿಕೆ
ಬಳ್ಳಾರಿ: ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಶನಿವಾರ ನಾಮಪತ್ರ ಸಲ್ಲಿಸಿದರು. ನಗರದ ಎಸ್‌ಪಿ ವೃತ್ತದಿಂದ ನೂರಾರು ಕಾರ್ಯಕರ್ತ ರೊಂದಿಗೆ ತೆರೆದ ವಾಹನದಲ್ಲಿ ಬೃಹತ್‌ ಮೆರವಣಿಗೆ ಮೂಲಕ ಆಗಮಿಸಿದ ಸೋಮಶೇಖರರೆಡ್ಡಿ, ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಾನಗರ ಪಾಲಿಕೆ ಕಚೇರಿಗೆ ತೆರಳಿದರು. ಬಳಿಕ ಚುನಾವಣಾಧಿಕಾರಿ ಎಚ್‌.ನಾರಾ ಯಣಪ್ಪ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.  ಸೋಮಶೇಖರರೆಡ್ಡಿ ಆಂಜನೇಯ ಸ್ವಾಮಿಯ ಪರಮಭಕ್ತ. ಅವರು ಏನೇ ಕಾರ್ಯಕ್ರಮ ಮಾಡಿದರೂ, ಆಂಜನೇಯ ಸ್ವಾಮಿ ನೆನೆಯದೆ ಇರಲಾರರು. ಹೀಗಾಗಿ ಅವರು ಆಂಜನೇಯ ಫೋಟೋ ಸಹಿತ ತಮ್ಮ ಉಮೇದುವಾರಿಕೆ ಸಲ್ಲಿಸಿ, ಬಳಿಕ ವಾಪಸ್‌ ಪಡೆದಿದ್ದು ಗಮನ ಸೆಳೆಯಿತು.

ಎಚ್‌.ಡಿ.ರೇವಣ್ಣ ಎರಡನೇ ಬಾರಿ ನಾಮಪತ್ರ ಸಲ್ಲಿಕೆ
ಬೆಂಗಳೂರು: ಮಾವ ಶ್ರೀನಿವಾಸ್‌ ಪ್ರಸಾದ್‌ ಎರಡು ಬಾರಿ ಪ್ರತಿನಿಧಿಸಿದ್ದ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ ಶನಿವಾರ ಮೆರವಣಿಗೆಯೊಂದಿಗೆ ನಂಜನಗೂಡು ತಾಲೂಕು ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಕೊಳ್ಳೇಗಾಲ ವಿಧಾನಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎ.ಆರ್‌.ಕೃಷ್ಣಮೂರ್ತಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಕುಂದಾಪುರದ ಕಾಂಗ್ರೆಸ್‌ ಅಭ್ಯರ್ಥಿ ರಾಕೇಶ್‌  ಮಲ್ಲಿ ಚುನಾವಣಾಧಿಕಾರಿ ಟಿ. ಭೂಬಾಲನ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಮಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಕೊಲ್ಲೂರು ದೇವಿಯ ದರ್ಶನ ಪಡೆದರು.  

Advertisement

ಶುಕ್ರವಾರ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದ ಹೊಳೆನರಸೀಪುರದ ಹಾಲಿ ಶಾಸಕ ಎಚ್‌.ಡಿ.ರೇವಣ್ಣ ಅವರು ಶನಿವಾರ ಮತ್ತೂಂದು ನಾಮಪತ್ರ ಸಲ್ಲಿಸಿದರು. ಶುಕ್ರವಾರ  ಮಧ್ಯಾಹ್ನ 2.26 ರಲ್ಲಿ ತಮ್ಮ ಕುಟುಂಬ ಸಮೇತ ಆಗಮಿಸಿ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದರು.

ಠೇವಣಿಗೆ 20 ಸಾವಿರ ಮೊತ್ತದ 1ರೂ. ನಾಣ್ಯ ಕೊಟ್ಟ ರಾಮದಾಸ್‌
ಮೈಸೂರು: ಭಾರೀ ಪೈಪೋಟಿಯ ನಡುವೆಯೂ 3ನೇ ಪಟ್ಟಿಯಲ್ಲಿ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾದ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಾರ್ಯಕರ್ತರ ಜತೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ಠೇವಣಿಗೆ 1ರೂ. ನಾಣ್ಯ: ರಾಮದಾಸ್‌ ಕಚೇರಿಯಿಂದ ಕೆ.ಆರ್‌. ಕ್ಷೇತ್ರದ 56 ಸಾವಿರ ಕುಟುಂಬಗಳಿಗೆ ಒಂದು ರೂ. ನಾಣ್ಯ ಕೊಟ್ಟು ಆಶೀರ್ವಾದ ಮಾಡುವಂತೆ ಬರೆದಿದ್ದ ಪತ್ರಕ್ಕೆ ಸ್ಪಂದಿಸಿ 36 ಸಾವಿರ ಮನೆಗಳಿಂದ 36 ಸಾವಿರ ರೂ. ಸಂಗ್ರಹವಾಗಿತ್ತು. ಎರಡು ಡಬ್ಬಗಳಲ್ಲಿ ಈ ನಾಣ್ಯವನ್ನು ತಂದ ರಾಮದಾಸ್‌, ಚುನಾವಣಾಧಿಕಾರಿಗೆ ಠೇವಣಿ ಹಣವಾಗಿ 20 ಸಾವಿರ ರೂ. ಮೊತ್ತದ ನಾಣ್ಯವನ್ನು ಪಾವತಿಸಿ ಗಮನಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next