ಹುಬ್ಬಳ್ಳಿ: ಸಚಿವ ಶ್ರೀರಾಮುಲು ಅವರಲ್ಲಿ ಡಿಸಿಎಂ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ. ಪ್ರತಿಕ್ರಿಯಿಸಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಅವರು ಸಚಿವ ಸಂಪುಟ ಸಭೆಗೆ ಹಾಜರಾಗಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಮುಂದಿನ ಮೂರೂವರೆ ವರ್ಷ ಸುಭದ್ರವಾಗಿರಲಿದೆ. ಡಿಸಿಎಂ ಸ್ಥಾನದ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಸೋತ ಅನರ್ಹ ಶಾಸಕರಿಗೆ ಸ್ಥಾನಮಾನ ನೀಡುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಉಪ ಚುನಾವಣೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಗೌರವಯುತವಾಗಿ ನಿಮ್ಮ ಪಕ್ಷದ ಅಭ್ಯರ್ಥಿಗಳ ಡಿಪಾಸಿಟ್ ಉಳಿಸಿಕೊಳ್ಳಿ.
ಬೇರೆ ಪಕ್ಷದವರನ್ನು ಸೋಲಿಸುವ ವಿಚಾರ ಬಿಡಿ ಎಂದಿದ್ದೆ. ಅವರ ಸಾಧನೆ ಶೂನ್ಯ. ಅದೇ ರೀತಿ ಕಾಂಗ್ರೆಸ್‌ನವರು 10-12 ಸ್ಥಾನ ಗೆಲ್ಲುತ್ತೇವೆ. ಮುಂದಿನ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಎಂದು ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದರು ಎಂಬಂತೆ ಆಶಯಗಳನ್ನು ಆರಂಭಿಸಿದ್ದರು ಎಂದು ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿಶ್ವದಲ್ಲೇ ಅಪ್ರಬುದ್ಧ ನಾಯಕ ಎಂದರು.
ಜನವರಿಯಲ್ಲಿ ಇನ್ವೆಸ್ಟರ್ ಮೀಟ್: ಹುಬ್ಬಳ್ಳಿಯಲ್ಲಿ ಜನವರಿಯಲ್ಲಿ ಬಂಡವಾಳ ಹೂಡಿಕೆದಾರರ (ಇನ್‌ವೆಸ್ಟರ್ ಮೀಟ್) ಸಮಾವೇಶ ಆಯೋಜಿಸಲಾಗುವುದು. ಆ ನಿಟ್ಟಿನಲ್ಲಿ ಡಿ.16ರಂದು ಪೂರ್ವಭಾವಿ ಸಭೆ ನಡೆಸಲಾಗುವುದು. ಇದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೈಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು, ಹು-ಧಾ ಕೈಗಾರಿಕಾ ಸಂಸ್ಥೆಗಳು, ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಯವರು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಡಿ.23ರಂದು ಕೇಂದ್ರ ಸಚಿವ ಜೋಶಿ ಅವರೊಂದಿಗೆ ಮುಂಬೈಗೆ ತೆರಳಿ ಕೆಲ ಉದ್ಯಮದಾರರನ್ನು ಭೇಟಿ ಮಾಡಲಾಗುವುದು. ಇಲಾಖೆಯಿಂದ ದೊಡ್ಡ ದೊಡ್ಡ ಉದ್ಯಮದಾರರನ್ನು ಭೇಟಿ ಮಾಡಿ ಅವರೊಂದಿಗೆ ಸಮಾಲೋಚನೆ, ರೋಡ್ ಶೋ ಮಾಡಲಾಗುವುದು ಎಂದರು. ಈ ಹಿನ್ನೆಲೆಯಲ್ಲಿ ಕಲಬುರಗಿ, ಬೆಳಗಾವಿ, ಬಳ್ಳಾರಿ, ಮೈಸೂರು ಸೇರಿದಂತೆ ಇನ್ನಿತರೆ ನಗರಗಳಲ್ಲಿ ಸಮಾವೇಶ ನಡೆಸಲಾಗುವುದು ಎಂದರು.