Advertisement

ರಾಂಪುರಹಳ್ಳಿ-ಶಾಂಪುರಹಳ್ಳಿ 8 ಸ್ಥಾನಗಳಿಗೆ ಚುನಾವಣೆ

09:55 AM Jun 07, 2018 | Team Udayavani |

ವಾಡಿ: ತಮ್ಮೂರಿಗೆ ಗ್ರಾಪಂ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿ ಚುನಾವಣೆ ಬಹಿಷ್ಕಾರ ನಿರ್ಧಾ ಮುಂದುವರಿಸಿರುವ ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮಸ್ಥರು, ಗ್ರಾಪಂ ಚುನಾವಣೆ ಬಹಿಷ್ಕರಿಸುವ ಮೂಲಕ
ಸರಕಾರಕ್ಕೆ ಸವಾಲು ಹಾಕಿದ್ದಾರೆ.

Advertisement

ಕೊಲ್ಲೂರ ಗ್ರಾಪಂ 15 ಸ್ಥಾನಗಳಿಗೆ ಹಾಗೂ ಶಾಂಪುರಹಳ್ಳಿ ಗ್ರಾಪಂ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಗೆ ಜೂ.2 ಕೊನೆ ದಿನವಾಗಿತ್ತು. ತರ್ಕಸ್‌ಪೇಟೆಯಿಂದ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.

ರಾಂಪುರಹಳ್ಳಿ ಗ್ರಾಪಂ ಚುನಾವಣೆಯಿಂದ ತರ್ಕಸ್‌ಪೇಟೆ ಹೊರಗುಳಿದಂತಾಗಿದ್ದು, ರಾಂಪುರಹಳ್ಳಿ ಹಾಗೂ ಶಾಂಪುರಹಳ್ಳಿ ಗ್ರಾಮಗಳ 8 ಸ್ಥಾನಗಳಿಗೆ ಮಾತ್ರ ಜೂ.14 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಕರಬಸಯ್ಯ ಮಠ ತಿಳಿಸಿದ್ದಾರೆ. 

ವಿಧಾನಸಭೆ ಚುನಾವಣೆ ಬಹಿಷ್ಕರಿಸಿ ಅಸಮಾಧಾನ ಹೊರಹಾಕಿದ್ದ ಗ್ರಾಮಸ್ಥರು, ಗ್ರಾಪಂ ಚುನಾವಣೆಯಲ್ಲೂ ಬಹಿಷ್ಕಾರ ನಿರ್ಧಾರ ಮುಂದುವರಿಸಿ ಆಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮಸ್ಥರು ಹೀಗೆ ಪದೇಪದೆ ಚುನಾವಣೆ ಬಹಿಷ್ಕರಿಸುತ್ತಿದ್ದರೂ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಕೊಲ್ಲೂರ ಗ್ರಾಪಂ ವಿಂಗಡಣೆಯಾಗಿ ರಾಂಪುರಹಳ್ಳಿ ಗ್ರಾಮಕ್ಕೆ ನೂತನ ಗ್ರಾಪಂ ಸ್ಥಾನಮಾನ ದಕ್ಕಿಸಿರುವುದೇ ತರ್ಕಸ್‌ಪೇಟೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲ್ಲೂರ ಗ್ರಾಪಂ ವಿಂಗಡಿಸಿ ರಾಂಪುರಹಳ್ಳಿಗೆ ಗ್ರಾಪಂ ಸ್ಥಾನ ಕೊಡುವ ಮೂಲಕ ಶಾಂಪುರಹಳ್ಳಿ ಹಾಗೂ ತರ್ಕಸ್‌ಪೇಟೆ ಸೇರ್ಪಡೆ ಮಾಡಿರುವುದು ಅನ್ಯಾಯದಿಂದ ಕೂಡಿದೆ. ಗ್ರಾಪಂ ಸ್ಥಾನಮಾನ ಹೊಂದಲು ತರ್ಕಸ್‌ಪೇಟೆ ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದಿದೆ. ಈ ಕುರಿತು ಪ್ರಕರಣ
ನ್ಯಾಯಾಲಯದಲ್ಲಿ ಇರುವಾಗಲೇ ಚುನಾವಣೆ ಘೋಷಣೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ತರ್ಕಸ್‌ಪೇಟೆ ಗ್ರಾಮ ಕೊಲ್ಲೂರ ಗ್ರಾಪಂ ಅಧೀನದಲ್ಲಿದ್ದಾಗ ಒಟ್ಟು 6 ಜನರು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗುತ್ತಿದ್ದರು. ಈಗ ಅದರಲ್ಲಿ ಎರಡು ಸ್ಥಾನಗಳನ್ನು ಕಡಿತಗೊಳಿಸಿ ನಾಲ್ಕು ಸ್ಥಾನಕ್ಕೆ ಇಳಿಸಲಾಗಿದೆ. ತರ್ಕಸ್‌ಪೇಟೆಯನ್ನು ರಾಂಪುರಹಳ್ಳಿಗೆ ಸೇರಿಸುವುದಕ್ಕೆ ತಕರಾರಿದೆ.

ಸರಕಾರ ನಮ್ಮೂರಿಗೆ ಗ್ರಾಪಂ ಸ್ಥಾನಮಾನ ಕಲ್ಪಿಸಲಿ ಅಥವಾ ಕೊಲ್ಲೂರು ಗ್ರಾಪಂಗೆ ಸೇರ್ಪಡೆ ಮಾಡಲಿ. ಯಾವುದೇ ಕಾರಣಕ್ಕೂ ನಾವು ರಾಂಪುರಹಳ್ಳಿಗೆ ಸೇರ್ಪಡೆಯಾಗುವುದಿಲ್ಲ. ಈಗಾಗಲೇ ವಿಧಾನಸಭೆ ಚುನಾವಣೆ ಬಹಿಷ್ಕರಿಸಿದ್ದೇವೆ. ಸದ್ಯ ನಡೆಯುತ್ತಿರುವ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ. ಗ್ರಾಮಸ್ಥರೆಲ್ಲ ಸಂಘಟಿತರಾಗಿದ್ದೇವೆ. 

ನ್ಯಾಯ ಸಿಗದಿದ್ದರೆ ಮುಂದೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಮುಖಂಡರಾದ ದಾನಪ್ಪಗೌಡ ನೀಲಗಲ್‌, ಶಾಂತಯ್ಯ ಗುತ್ತೇದಾರ, ಬಸವರಾಜ ದಂಡಗಿ, ಹಾಜಿಸಾಬ ರಾಜಾಪುರ ಎಚ್ಚರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next