ರಾಂಪುರ: ಸಮೀಪದ ಬೇವೂರಿನಲ್ಲಿ ಭೂ ಸೇನಾ ನಿಗಮದ ವತಿಯಿಂದ ಎಸ್.ಸಿ ಕಾಲೋನಿಯಲ್ಲಿ 12 ಲಕ್ಷರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ| ಬಾಬು ಜಗಜೀವನರಾಮ್ ಸಮುದಾಯ ಭವನದ ಮುಖ್ಯದ್ವಾರದ ದಿಕ್ಕು ಬದಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಭವನದ ಮುಖ್ಯ ದ್ವಾರವನ್ನು ಪೂರ್ವ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ನಿರ್ಮಿಸಿದ್ದಾರೆ.
ಸಮುದಾಯ ಭವನದ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಎಸ್‌ಸಿ ಸಮಾಜದ ಬಾಂಧವರು ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಇಕ್ಕಟ್ಟಾದ ಜಾಗದಲ್ಲಿ ಬಾಗಿಲು ನಿರ್ಮಾಣ ಮಾಡಬೇಡಿ, ದಕ್ಷಿಣ ದಿಕ್ಕಿಗೆ ಬಾಗಿಲು ನಿರ್ಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಭೂಸೇನಾ ನಿಗಮದ ಅಧಿಕಾರಿಗಳಿಗೆ ಲಿಖೀತವಾಗಿ ಮನವಿ ಸಲ್ಲಿಸಿದರೂ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಕೂಗಿ ಪೂರ್ವ ದಿಕ್ಕಿನ ಬಾಗಿಲು ಒಡೆದು ಹಾಕಿ ದಕ್ಷಿಣ ದಿಕ್ಕಿನೆಡೆಗೆ ಬದಲಾಯಿಸಿದರು.
ಸಮುದಾಯ ಭವನಕ್ಕೆ 12 ಲಕ್ಷ ರೂ. ಮಂಜೂರು ಆಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪ್ಲಾÂನಿಂಗ್ ರಿಪೋರ್ಟ್ ಕೇಳಿದರೇ ಹಾರಿಕೆ ಉತ್ತರ ನೀಡಿ ಹೋಗುತ್ತಿದ್ದಾರೆ. ಕಟ್ಟಡ ತಳಪಾಯವು ಕಳಪೆ ಕಾಮಗಾರಿಯಿಂದ ಕೂಡಿದ್ದು, ಇದು ಹೀಗೆ ಮುಂದುವರಿದರೆ ಅಧಿಕಾರಿಗಳ ವಿರುದ್ದ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ಈರಪ್ಪ ಕಡೇಮನಿ ಎಚ್ಚರಿಸಿದ್ದಾರೆ.
ರಾಜಕೀಯ ಕುತಂತ್ರ: ಸಮುದಾಯ ಭವನ ನಿರ್ಮಾಣದಲ್ಲಿ ರಾಜಕೀಯ ಕುತಂತ್ರಿಗಳು ಸೇರಿದ್ದು, ತಮಗೆ ಬೇಕಾದಂತೆ ಕಟ್ಟಡ ನಿರ್ಮಾಣ ಮಾಡುವ ಯೋಚನೆ ಮಾಡುತ್ತಿದ್ದಾರೆ. ಆದರೆ, ಅಭಿವಧಿ ಕಾರ್ಯ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇದನ್ನು ತಕ್ಷಣ ನಿಲ್ಲಿಸಿ ಸ್ಥಳೀಯರ ಆದೇಶ ಪಾಲಿಸಿ ನಿರ್ಮಿಸಬೇಕೆಂದು ಸ್ಥಳೀಯ ಚಿದಾನಂದ ಹೊಸಮನಿ ಆಗ್ರಹಿಸಿದ್ದಾರೆ.
ಶಿಸ್ತುಕ್ರಮಕ್ಕೂ ಬದ್ಧ: ಸಮುದಾಯ ಭವನದ ದಿಕ್ಕು ಬದಲಿಸುವುದರಿಂದ ಮುಖ್ಯ ಬಾಗಿಲು ದ್ವಾರದ ಮುಂದೆ ಖಾಲಿ ಜಾಗ ಹೆಚ್ಚಿಗೆ ಸಿಗುತ್ತದೆ. ಮೇಲಾಗಿ ವಾಸ್ತು ಕೂಡ ಚೆನ್ನಾಗಿದೆ. ಸಮಾಜದವರು ಯಾವುದೇ ಕಾರ್ಯಕ್ರಮ ನಡೆಸಿದರು ಉಪಯೋಗವಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ಇಲಾಖೆಯವರು ನಮ್ಮ ವಿರುದ್ಧ ಯಾವುದೇ ಕ್ರಮ ಜರುಗಿಸಿದರು ಬದ್ಧರಾಗಿದ್ದೇವೆ ಎಂದು ಸ್ಥಳೀಯ ಇದೇ ಸಂದರ್ಭದಲ್ಲಿ ಹೇಳಿದರು.