ಮಂಗಳೂರು: ದೇವ ಋಣದಿಂದ ವಿಮುಕ್ತರಾಗಲು ಧರ್ಮ ಕರ್ಮದಿಂದ ಸಾಧ್ಯ. ಸಂಧ್ಯಾಕಾಲದಲ್ಲಿ ಪೂಜೆ, ಯಜ್ಞ-ಯಾಗ, ಹೋಮಗಳನ್ನು ಮಾಡುವುದರಿಂದ ಸುಖ ಅನುಭವಿಸಲು ಸಾಧ್ಯವೆಂದು ಋಷಿಮುನಿಗಳು ಹೇಳಿದ್ದಾರೆ ಎಂದು ಬಾಲಂಭಟ್ ಮನೆತನದ ಗಿರಿಧರ ಭಟ್ ತಿಳಿಸಿದರು.
ನಗರದ ವಿಶ್ವ ಹಿಂದೂ ಪರಿಷತ್, ಬಜರಂಗದಳ-ಮಾತೃ ಶಕ್ತಿ-ದುರ್ಗಾವಾಹಿನಿ ಮತ್ತು ರಾಮೋತ್ಸವ ಸಮಿತಿ ಮಂಗಳೂರು ವತಿಯಿಂದ ನಗರದ ಕೇಂದ್ರ ಮೈದಾನದಲ್ಲಿ ನಡೆದ ಶ್ರೀ ರಾಮೋತ್ಸವದ ರವಿವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದುಃಖವಾದಾಗ ದೇವರನ್ನು ಸ್ಮರಿಸುವುದು ಅನಾದಿಕಾಲದಿಂದಲೂ ಬಂದಂತಹ ಪದ್ಧತಿ. ರಾಮ ಮತ್ತು ಕೃಷ್ಣ ಜಗತ್ತಿನಲ್ಲಿರುವ ಸುಂದರ ಹೆಸರುಗಳು. ಯಾವುದೇ ರೀತಿಯ ಸತ್ಕಾರ್ಯ ಮಾಡುವಾಗ ಭಜಕರು ಪೂಜೆ ಮಾಡುತ್ತಾರೆ. ಭಕ್ತರು ಬಂದರೆ ಮಾತ್ರವೇ ಮೂಲ ಚೈತನ್ಯದ ಅಭಿವೃದ್ಧಿಯಾಗುತ್ತದೆ. ಗಳಿಸಿದ ಸಂಪತ್ತನ್ನು ಧರ್ಮ ಕಾರ್ಯಕ್ಕೆ, ಸ್ವ ಕಾರ್ಯಕ್ಕೆ, ತಂದೆ ತಾಯಿ ಯೋಗ ಕ್ಷೇಮಕ್ಕೆ ಮತ್ತು ಆಪತ್ಕಾಲಕ್ಕೆ ಎಂದು ವಿಂಗಡಿಸಿ ವಿನಿಯೋಗಿಸಬೇಕು ಎಂದು ವಿವರಿಸಿದರು.
ಶ್ರೀ ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಪ್ರಾಂತ ಗೋರಕ್ಷ ಸಹ ಪ್ರಮುಖ್ ಜಗದೀಶ್ ಶೇಣವ ಪ್ರಸ್ತಾವನೆಗೈದರು.
ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಗಣ್ಯರಾದ ವಿನೋದ್ ಶೆಟ್ಟಿ ಬೋಳ್ಯಗುತ್ತು, ಮುರಳಿಕೃಷ್ಣ ಹಂಸತ್ತಡ್ಕ, ರಾಘವೇಂದ್ರ ರಾವ್, ರವೀಂದ್ರ ಮುನ್ನಿಪ್ಪಾಡಿ, ವಿವೇಕ್ ತಂತ್ರಿ, ಮಮತಾ ಅಣ್ಣಯ್ಯ ಕುಲಾಲ್, ಜಗದೀಶ್ ಶೆಣೈ, ಗೋಪಾಲಕೃಷ್ಣ ಶೆಣೈ, ಸುನಿಲ್ ಕುಮಾರ್, ಮನೋಹರ್ ಸುವರ್ಣ, ಗುರುದತ್ ಶೆಣೈ, ಶ್ರೀಧರ್ ಭಟ್, ಕೃಷ್ಣಮೂರ್ತಿ, ಮನೋಹರ್ ಮೊದಲಾದವರು ಉಪಸ್ಥಿತರಿದ್ದರು.
ರಾವಣ ದಹನ
ರಾಮೋತ್ಸವದ ಕೊನೆಯ ದಿನವಾದ ರವಿವಾರದಂದು ರಾವಣ ದಹನವನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು. ರಾವಣ ಮೂರ್ತಿ ಹೊತ್ತಿ ಉರಿಯುವ ದೃಶ್ಯವನ್ನು ಸಾವಿರಾರು ಜನ ನೋಡಿ ಸಂಭ್ರಮಿಸಿದರು. ಇದೇ ವೇಳೆ ಸುಡುಮದ್ದುಗಳ ಪ್ರದರ್ಶನ ನಡೆಯಿತು.