“ನನಗೆ ಇದು ಬಹಳ ಮೆಮೋರಬಲ್ ಜಾಗ. ಯಾಕೆ ಗೊತ್ತಾ? ನಾನು ಮೊದಲ ಪತ್ರಿಕಾಗೋಷ್ಠಿ ಎದುರಿಸಿದ್ದು ಅದೇ ವೇದಿಕೆಯಲ್ಲಿ …’
ದೂರದಲ್ಲಿದ್ದ ಒಂದು ವೇದಿಕೆಯನ್ನು ತೋರಿಸಿ ಹೇಳಿದರು ರಚಿತಾ ರಾಮ್. ಅದು ಸಿಟಾಡೆಲ್ ಹೋಟೆಲ್‌ನಲ್ಲಿರುವ ಸಭಾಂಗಣ ಮತ್ತು ವೇದಿಕೆ. “ಬುಲ್‌ಬುಲ್’ ಚಿತ್ರದ ಪತ್ರಿಕಾಗೋಷ್ಠಿಯಾಗಿದ್ದೂ ಅದೇ ಸಭಾಂಗಣದಲ್ಲಿ ಮತ್ತು ವೇದಿಕೆಯ ಮೇಲೆ. “ಪುಷ್ಪಕ ವಿಮಾನ’ದ ಪತ್ರಿಕಾಗೋಷ್ಠಿಯೂ ಅಲ್ಲೇ. ಎರಡೂ ಚಿತ್ರಗಳ ಮಧ್ಯೆ ಸಾಕಷ್ಟು ಸಮಯವಾಗಿದೆ. ಈ ಸಮಯದಲ್ಲಿ ರಚಿತಾ ಸಹ ಸಾಕಷ್ಟು ಬೆಳೆದಿದ್ದಾರೆ. ಅದನ್ನೆಲ್ಲಾ ಅದೇ ವೇದಿಕೆಯ ಎದುರಿಗೆ ಕೂತು ನೆನಪಿಸಿಕೊಂಡರು ರಚಿತಾ. “ಪುಷ್ಟಕ ವಿಮಾನ’ ಚಿತ್ರದ ಪತ್ರಿಕಾಗೋಷ್ಠಿಯೂ ಮುಗಿದಿತ್ತು. ಒಂದಿಷ್ಟು ಸಮಯವೂ ಇತ್ತು. ಸರಿ, ಮಾತು ಶುರುವಾಯಿತು. ರಚಿತಾ ರಾಮ್ ಮಾತಾಡುತ್ತಾ ಹೋದರು …
“ಚೆನ್ನಾಗಿ ಮಾತಾಡಿದ್ರಿ …’ ಅಂತ ಯಾರೋ ಕಾಂಪ್ಲಿಮೆಂಟ್ ಕೊಟ್ಟರು. ಥ್ಯಾಂಕ್ಸ್ ಹೇಳಿದರು ರಚಿತಾ.
ಆಗಷ್ಟೇ “ಪುಷ್ಪಕ ವಿಮಾನ’ ಚಿತ್ರದ ಪತ್ರಿಕಾಗೋಷ್ಠಿ ಮುಗಿದಿತ್ತು. ಹಾಗಂತ ಚಿತ್ರತಂಡದವರು ಮಾತು ಮುಗಿದಿರಲಿಲ್ಲ. ಒಂದೊಂದು ಚಾನಲ್‌ನವರು, ಒಬ್ಬೊಬ್ಬರನ್ನು ಎತ್ತಾಕಿಕೊಂಡು, ಬೈಟ್ ತೆಗೆದುಕೊಳ್ಳುತ್ತಿದ್ದರು. ರಚಿತಾ ಮೊದಲು ಆ ಮೈಕು, ನಂತರ ಈ ಕ್ಯಾಮೆರಾ ಅಂತ ಆ ಸಭಾಂಗಣದ ಮೂಲೆಮೂಲೆಯಲ್ಲಿ ನಿಂತು ಬೈಟ್ ಕೊಡುತ್ತಲೇ ಇದ್ದರು. ಸುಮಾರು 10-12 ಚಾನಲ್‌ಗಳ ಕ್ಯಾಮೆರಾಗಳಿಗೆ ಮುಖ ಕೊಟ್ಟು ಚಿತ್ರದ ಬಗ್ಗೆ ಮಾತಾಡಿ, ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಷಯಗಳನ್ನು ಹೇಳಿ, ಬಂದು ಕೂರುವ ಹೊತ್ತಿಗೆ ಸಾಕಷ್ಟು ಹೊತ್ತಾಗಿತ್ತು. ಆದರೂ ದೂರದ ವೇದಿಕೆ ನೋಡಿ ಅವರ ಮುಖದಲ್ಲೊಂದು ಖುಷಿ ಕಂಡಿತು. ಆ ವೇದಿಕೆಯನ್ನು ತೋರಿಸಿಯೇ “ನನಗೆ ಇದು ಬಹಳ ಮೆಮೋರಬಲ್ ಜಾಗ. ಯಾಕೆ ಗೊತ್ತಾ? ನಾನು ಮೊದಲ ಪತ್ರಿಕಾಗೋಷ್ಠಿ ಎದುರಿಸಿದ್ದು ಅದೇ ವೇದಿಕೆಯಲ್ಲಿ …’ ಎಂದರು.
ಹೀಗೆ ಒಂದೇ ಸಮನೆ ಮಾತಾಡೋದು ಕಷ್ಟವಲ್ಲವಾ? ಮೊದಲ ಪ್ರಶ್ನೆ ಬಂದಿತು. ರಚಿತಾ ನಕ್ಕರು. ಮಾತಾಡುವಾಗ ಎಷ್ಟು ಹುಷಾರಾಗಿರಬೇಕು ಎಂಬುದು ಬಹುಶಃ ರಚಿತಾಗೆ ಅರ್ಥವಾಗಿದೆಯೇನೋ? ಅದಕ್ಕೆ ಹೀಗೆ ಹೇಳಿದರು. “ಯಾವುದೇ ವಿಷಯದ ಬಗ್ಗೆ ವೈವಿಧ್ಯಮಯ ಸ್ಟೇಟ್‌ಮೆಂಟ್‌ಗಳನ್ನು ನೀಡುವ ಮುನ್ನ ಎರಡು ಬಾರಿ ಯೋಚಿಸಬೇಕು. ನೆಗೆಟಿವ್ ಆಗಿದ್ದರೂ ಪಾಸಿಟಿವ್ ತರಹ ಹೇಳಬೇಕು. ಅದೊಂದು ಕಷ್ಟದ ಕೆಲಸ. ಹೇಳಿಬಿಟ್ಟು, ಆ ನಂತರ ಎಕ್ಸ್‌ಕ್ಲೂಸಿವ್ ಅಥವಾ ಬ್ರೇಕಿಂಗ್ ನ್ಯೂಸ್ ಆಗೋದು ನನಗೆ ಇಷ್ಟವಿಲ್ಲ. ಹಾಗಂತ ಪ್ಲಾನ್ ಮಾಡಿಕೊಂಡು ಮಾತಾಡೋಕು ನನಗೆ ಇಷ್ಟವಿಲ್ಲ. ಏನೇ ಹೇಳಿದರೂ ಸ್ಪಾಂಟೇನಿಯಸ್ ಆಗಿ ಹೇಳುವುದರ ಜೊತೆಗೆ ವಿಶ್ವಾಸದಿಂದ ಹೇಳಬೇಕು. ಅದು ಮುಖ್ಯ’ ಎಂದು ವಿಶ್ವಾಸದಿಂದಲೇ ಹೇಳಿದರು ಅವರು.
ಇತ್ತೀಚೆಗೆ ರಚಿತಾ ಸ್ವಲ್ಪ ಎಮೋಷನಲ್ ಆಗುತ್ತಿದ್ದಾರೆ. “ಪುಷ್ಪಕ ವಿಮಾನ’ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಅವರು ಕಣ್ಣೀರು ಸುರಿಸಿದ್ದರು. ಮಾತು ಮಾತಿಗೂ ಎಮೋಷನಲ್ ಆಗುತ್ತಿದ್ದರು. “ಚಿತ್ರದ ಬಗ್ಗೆ ಮಾತು ಶುರು ಮಾಡಿದರೆ ಹಾಗೊಮ್ಮೆ ಭಾವುಗಳಾಗಿಬಿಡುತ್ತೇನೆ. ಯಾಕೋ ಗೊತ್ತಿಲ್ಲ. ಈಗಲೂ ಕಣ್ತುಂಬಿಕೊಳ್ಳುತ್ತಿವೆ …’ ಎಂದು ಅವರು ಕಣ್ಣೀರು ಹಾಕಿದ್ದರು. ಯಾಕೆ ರಚಿತಾ ಕಣ್ಣಲ್ಲಿ ಅಷ್ಟು ಬೇಗ ನೀರು ತುಂಬಿಕೊಳ್ಳುತ್ತದೆ? ಹಾಗೊಂದು ಪ್ರಶ್ನೆ ಎದುರಾಯಿತು.
Related Articles
“ಮುಂಚೆ ಹೀಗಿರಲಿಲ್ಲ. ನಮ್ಮದು ದೊಡ್ಡ ಫ್ಯಾಮಿಲಿ. ಕೆಲವು ಘಟನೆಗಳಿಂದ ಎಲ್ಲರೂ ದೂರಾದರು. ಈಗ ನಾವು ನಾಲ್ಕೇ ಜನ. ಅಪ್ಪ, ಅಮ್ಮ, ಅಕ್ಕ ಮತ್ತು ನಾನು ನಾಲ್ಕೇ ಜನ. ನನಗೆ ಫ್ರೆಂಡೂÕ ಕಡಿಮೆ. ನಾನು ಯಾರ ಜೊತೆಗೆ ಬಹಳ ಈಸಿಯಾಗಿ ಮೂವ್ ಮಾಡುವುದಿಲ್ಲ. ಹಾಗಾಗಿ ನಾನಗೆ ಫ್ಯಾಮಿಲಿಯೇ ಎಲ್ಲ. ಏನೇನಾಗುತ್ತೋ ಡೈಲಿ ಅಪ್ಪಂಗೆ ಅಪ್‌ಡೇಟ್ ಮಾಡುತ್ತೀನಿ. ಪ್ರತಿ ದಿನ ನಾವೆಲ್ಲಾ ಕೂತು ಒಂದು ಗಂಟೆ ಮಾತಾಡ್ತೀವಿ. ಹಾಗಾಗಿ ಯಾವುದೇ ಸಂಬಂಧದ ಬಗ್ಗೆ ಸಿನಿಮಾ ಬಂದರೂ ಅಳು ಬರುತ್ತೆ. ಅದರಲ್ಲೂ ಅಜ್ಜಿ, ತಾತ, ಅಪ್ಪ ಅಂದರೆ ತುಂಬಾ ಎಮೋಷನಲ್ ಆಗುತ್ತೀನಿ’ ಎನ್ನುತ್ತಾರೆ ರಚಿತಾ.
ಹಾಗೆ ಅತ್ತರೂ, ತಾವು ಮಾನಸಿಕವಾಗಿ ಬಹಳ ಗಟ್ಟಿ ಎನ್ನುತ್ತಾರೆ ಅವರು. “ನಾನು ಅಳಬಹುದು. ಬಟ್ ನಾನು ಗಟ್ಟಿ. ಸಿಲ್ಲಿ ಸಿಲ್ಲಿ ಕಾರಣಗಳಿಗೆಲ್ಲಾ ನಾನು ಅಳುವುದಿಲ್ಲ. ತುಂಬಾ ನೋವಿದ್ದಾಗ ಮಾತ್ರ ಅಳುತ್ತೀನಿ’ ನಾನು’ ಎಂದರು. ಕಳೆದ ವರ್ಷ ರಚಿತಾ ರಾಮ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಮೂರು ಚಿತ್ರಗಳ ಪೈಕಿ ಒಂದರಲ್ಲಿ ನಾಯಕಿ, ಇನ್ನೆರೆಡು ಗೆಸ್ಟ್ ಅಪಿಯರೆನ್ಸ್. ಈ ವರ್ಷ “ಪುಷ್ಪಕ ವಿಮಾನ’ ಚಿತ್ರದ ಮೂಲಕ ವರ್ಷ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ “ಭರ್ಜರಿ’, “ಉಪ್ಪಿ-ರುಪಿ’ ಮುಂತಾದ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಬೇರೆ ಭಾಷೆಗಳು, ಅದರಲ್ಲೂ ಬಾಲಿವುಡ್‌ನಲ್ಲಿ ನಟನೆ ಏನಾದರೂ ಯೋಚನೆ ಇದೆಯಾ ಎಂಬ ಪ್ರಶ್ನೆಯೂ ಬಂತು.
“ನನಗೆ ಅತೀ ಆಸೆ ಇಲ್ಲ. ನಾನು ದಕ್ಷಿಣ ಭಾರತದ ನಟಿಯಾದರೆ ಸಾಕು. ನನಗೆ ಬಾಲಿವುಡ್ ಇಷ್ಟವಿಲ್ಲ. ಹಾಗಂತ ಅದು ಸರಿ ಇಲ್ಲ ಅಂತ ಹೇಳುತ್ತಿಲ್ಲ. ನನಗೆ ಬಾಲಿವುಡ್‌ಗಿಂತ, ದಕ್ಷಿಣ ಭಾರತದ ಚಿತ್ರರಂಗಗಳೇ ಸಾಕು ಎಂಬ ಭಾವನೆ ಇದೆ. ಇಲ್ಲಿ ಅಲ್ಲಿಗೆ ಹೋಗಿರುವ ದೀಪಿಕಾ ಪಡುಕೋಣೆ, ರೇಖ, ವಿದ್ಯಾ ಬಾಲನ್, ಶ್ರೀದೇವಿ ಮುಂತಾದವರು ನಮಗೆಲ್ಲಾ ರೋಲ್ ಮಾಡಲ್‌ಗಳ ತರಹ. ಆದರೂ ನನ್ನ ಭಾವನೆ ಏನು ಅಂದರೆ am not for Bollywood ಅಂತ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ರಚಿತಾ. ಹಾಗಾದರೆ, ಅವರಿಗೆ ಸಾಗರ ದಾಟುವುದು ಬೇಡವಾ? “ಬೇಡ, ನದಿಯೇ ಸಾಕು’ ಎಂದು ನಕ್ಕರು ರಚಿತಾ.
ರಚಿತಾಗೆ ಅನೂಷ್ಕಾ ಶೆಟ್ಟಿ ಅಭಿನಯದ “ಅರುಂಧತಿ’ ತರಹದ ಚಿತ್ರ ಮಾಡುವಾಸೆ. “ನನಗೂ “ಅರುಂಧತಿ’ ತರಹದ ಸಿನಿಮಾ ಮಾಡೋಕೆ ಇಷ್ಟ. ಕನ್ನಡದಲ್ಲಿ ಆ ತರಹ ಅಥವಾ ನಾಯಕಿ ಪ್ರಧಾನ ಸಿನಿಮಾಗಳು ಕಡಿಮೆಯೇ. ನಮ್ಮಲ್ಲೂ ಆ ತರಹದ ಸಿನಿಮಾಗಳಲ್ಲಿ ಮಾಡುವಂತಾಗಬೇಕು. ಹಾಗಂತ ನನಗೆ ಬೇಸರ ಅಂತಲ್ಲ. ಸದ್ಯಕ್ಕೆ ನಾನು ಮಾಡುತ್ತಿರುವ ಪಾತ್ರಗಳ ಬಗ್ಗೆ ನನಗೆ ಖುಷಿ ಇದ್ದೇ ಇದೆ. ಆದರೂ ಈ ತರಹ ಪಾತ್ರಗಳು ಬಂದರೆ ಇನ್ನೂ ಹೆಚ್ಚು ಖುಷಿಯಾಗುತ್ತದೆ’ ಎಂದರು ರಚಿತಾ.
ರಚಿತಾ ಇನ್ನೂ ಮಾತಾಡುತ್ತಿದ್ದರೇನೋ? ಆದರೆ, ಅವರು ಒಂದೇ ಜಾಗದಲ್ಲಿ ಅಷ್ಟು ಹೊತ್ತು ಕೂರುವಂತಿರಲಿಲ್ಲ. ಕೂರುವುದಕ್ಕೆ ಚಾನಲ್‌ನವರು ಬಿಡುತ್ತಲೂ ಇರಲಿಲ್ಲ. ಒಬ್ಬರ ಹಿಂದೊಬ್ಬರು ಬೈಟ್, ಮೇಡಂ ಬೈಟ್ ಎಂದು ಕರೆಯುತ್ತಲೇ ಇದ್ದರು. ರಚಿತಾ ಸಹ ಒಂದ್ನಿಮಿಷ ಎಂದು ಸಾಗಹಾಕುತ್ತಲೇ ಇದ್ದರು. ಕೊನೆಗೆ ಒಂದ್ನಿಮಿಷ ಹೋಗಿ ಬರಲಾ ಎಂದು ಬೈಟ್ ಕೊಡುವುದಕ್ಕೆ ಎದ್ದು ಹೊರಟರು.
ಬರಹ: ಶ್ರೀಪತಿ; ಚಿತ್ರಗಳು: ಮನು ಮತ್ತು ಸಂಗ್ರಹ