ರಾಮನಗರ: ರಾಷ್ಟ್ರ-ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಕ್ಷೇತ್ರವೆಂದರೆ ರಾಮನಗರ. ಈ ಕ್ಷೇತ್ರ ಮೂವರು ಮುಖ್ಯಮಂತ್ರಿ, ಓರ್ವ ಪ್ರಧಾನಿಯನ್ನು ಕೊಡುಗೆ ನೀಡಿದೆ. 2023ರ ವಿಧಾನಸಭೆ ಚುನಾವಣೆ ಹಿನ್ನೆಲೆ ಕ್ಷೇತ್ರದಲ್ಲಿ ಘಟಾನುಘಟಿಗಳು ಅಖಾಡಕ್ಕಿಳಿದಿದ್ದಾರೆ. ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ.
ದೇವೇಗೌಡರ ಕುಟುಂಬಕ್ಕೆ ಹೇಳಿ ಕೇಳಿ ಇದು ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ. ಚುನಾವಣೆಯಲ್ಲಿ ದೇವೇಗೌಡರು ಸೋಲುಂಡು ಸಂಕಷ್ಟದ ಕಾಲಘಟ್ಟ ಮುಗಿದೇ ಹೋಯ್ತು ಎನ್ನುವ ಸಂದರ್ಭದಲ್ಲಿ ದಿಢೀರ್ ಎಂದು ದೇವೇಗೌಡರ ಚಿತ್ತ ಬಿದ್ದಿದ್ದು ರಾಮನಗರದತ್ತ.
ದೇವೇಗೌಡರಿಗೆ ಜಯ: 1994ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಜನತಾ ದಳದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅಂದು ಗೆದ್ದ ದೇವೇಗೌಡರು, ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅದಾದ ನಂತರ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದಕ್ಕದ ಕಾರಣಕ್ಕೆ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಸರ್ಕಾರ ರಚನೆ ನೇತೃತ್ವವಹಿಸಿತ್ತು. ಅದು ದೇವೇಗೌಡರ ಹೆಗಲಿಗೆ ಬಿದ್ದು ಕನ್ನಡಿಗನೊಬ್ಬ ರಾಷ್ಟ್ರದ ಪ್ರಧಾನಿಯಾದರು.
ಸೋಲು: ಬಳಿಕ ಅವರ ರಾಜೀನಾಮೆಯಿಂದ ತೆರ ವಾದ ಸ್ಥಾನಕ್ಕೆ ರೆಬಲ್ ಸ್ಟಾರ್ ಅಂಬರೀಶ್‌ರನ್ನು ಕರೆ ತಂದು ಚುನಾವಣೆಗೆ ನಿಲ್ಲಿಸಲಾಗಿತ್ತು. ದುರಾದೃಷ್ಟ ವೆಂದರೆ, ಕೇಂದ್ರದಲ್ಲಿ ದೇವೇಗೌಡರು ಪ್ರಧಾನಿ, ರಾಜ್ಯ ದಲ್ಲಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಗಳಾಗಿದ್ದರೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರೆಬಲ್ ಸ್ಟಾರ್ ಅಂಬರೀಶ್ ಉರುಫ್ ಎಂ.ಎಚ್.ಅಮರನಾಥ್ ಸೋಲಿನ ರುಚಿ ನೋಡಬೇಕಾಯಿತು. ಅಷ್ಟಕ್ಕೂ ಅವರೇನು ದೇವೇಗೌಡರಿಗಿಂತ ಕಡಿಮೆ ಮತ ಪಡೆದಿರಲಿಲ್ಲ. ಆದರೂ, ಸೋಲೊಪ್ಪಿಕೊಳ್ಳ ಬೇಕಾಯಿತು. ದೇವೇಗೌಡರು ಗೆದ್ದಾಗ ಪಡೆದದ್ದು 47,986 ಮತ, ಅದೇ 1997ರಲ್ಲಿ ಅಂಬರೀಷ್ ಸೋ ತಾಗ ಪಡೆದ ಮತ 50,314 ಮತ.
ಅಂಬರೀಷ್ ಬಣ್ಣದ ಲೋಕದವರು, ಕೈಗೆ ಸಿಗೋದಿಲ್ಲ ಎಂಬೆಲ್ಲಾ ಮಾತು ಸಿಎಂ ಲಿಂಗಪ್ಪನವರ ಕೈಹಿಡಿದಿದ್ದವು. ಮತ್ತೆ 1999ರ ಚುನಾವಣೆಯಲ್ಲಿ ಸ್ವಾಭಿಮಾನ ಸೋಲಿನ ಪೆಟ್ಟಿನಿಂದ ಚೇತರಿಸಿಕೊಳ್ಳದ ಜನತಾದಳ ಸಿ.ಹೊನ್ನಪ್ಪ ನವರನ್ನು ಅಭ್ಯರ್ಥಿಯನ್ನಾಗಿಸುತ್ತೆ ಆಗಲೂ ಸೋಲು ಅನುಭವಿಸಿತು. ಒಟ್ಟಾರೆ ಪ್ರತಿ ಚುನಾವಣೆಯಲ್ಲಿ ಸರಿ ಸುಮಾರು 25 ಸಾವಿರ ಮತಗಳ ಅಂತರ ನಿರಂತರವಾಗಿದ್ದು ಈಗ ಮತ್ತೆ ಚುನಾವಣೆ ಬಂದಿದೆ ಈ ಭಾರಿ ಕೂಡ ದ್ವಿತೀಯ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿ ಮಾಡಬೇಕಿದೆ.
2004ರಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಹಾದಿ: 2004ರಲ್ಲಿ ಎಚ್‌ಡಿಕೆ ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯು ತ್ತಾರೆ. ಅಲ್ಲಿಂದ ಆರಂಭವಾದ ಜೆಡಿಎಸ್ ನಾಗಾ ಲೋಟಕ್ಕೆ ಕಡಿವಾಣವೇ ಬಿದ್ದಿಲ್ಲ. ನಂತರ 2006 ಕರ್ನಾಟಕದಲ್ಲಿ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ ಜತೆಗೆ ಕೈ ಜೋಡಿಸಿದ ಜೆಡಿಎಸ್, ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿ ಅಧಿಕಾರಕ್ಕೇರಿ ದರು. ಆ ನಂತರದ ಬೆಳವಣಿಗೆಯಲ್ಲಿ ಸರ್ಕಾರ ಬಿದ್ದು ಹೋಗುತ್ತದೆ. ನಂತರ ಎಚ್‌ಡಿಕೆ ಮತ್ತು ಬಿಜೆಪಿ ಜತೆಗೆ ಕೈ ಜೋಡಿಸಿ ಮುಖ್ಯಮಂತ್ರಿಗಾದಿ ಗೇರಿದರು. ಮುಂದುವರಿದು ರಾಮನಗರ ಕ್ಷೇತ್ರದಲ್ಲಿ ನಡೆದ ಪ್ರತಿ ಚುನಾವಣೆಯಲ್ಲಿಯೂ ಚೇತರಿಸಿಕೊಳ್ಳುತ್ತಿರುವ ಜೆಡಿಎಸ್ ಕ್ಷೇತ್ರದಲ್ಲಿ ಹಿಡಿತ ತಪ್ಪಿದ್ದೇ ಇಲ್ಲ. ಒಟ್ಟಾರೆ ಅಷ್ಟೂ ಚುನಾವಣೆಗಳನ್ನು ಗಮನಿಸಿದರೆ ಪ್ರತಿ ಚುನಾವಣೆಯಲ್ಲಿಯೂ ಜೆಡಿಎಸ್ ಮತ ಗಳಿಕೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಪ್ರತಿ ಸ್ಪರ್ಧಿಗಳ ಏರಿಳಿತದ ನಡುವೆ ಮತಗಳ ಗರಿಷ್ಠ ಗಳಿಕೆಯಲ್ಲೂ ಜೆಡಿಎಸ್ ಮುಂದಿದೆ. ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು 2008ರಲ್ಲಿ. ಆಗ ಕಾಂಗ್ರೆಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಆಗ ಪಡೆದ ಗರಿಷ್ಠ ಮತವೇ 24440. ಹೀಗಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಪ್ರತಿ ಚುನಾವಣೆಯಲ್ಲೂ ಮತಗಳ ಜಂಪಿಂಗ್ ಪ್ರಕ್ರಿಯೆ ನಡೆಯುತ್ತಲೇ ಇದೆ. ಇನ್ನು ಮರಿದೇವರು 2013ರಲ್ಲಿ ಒಟ್ಟುಗೂಡಿಸಿದ್ದ ಮತ 58049 ಆದರೂ, ಜೆಡಿಎಸ್ ಅಭ್ಯರ್ಥಿ ಆ ಚುನಾವಣೆಯಲ್ಲಿಯೂ 25398 ಅತ್ಯಧಿಕ ಮತಗಳಿಸಿ ಗೆಲುವು ಸಾಧಿಸಿದ್ದರು.
– ಎಂ.ಎಚ್.ಪ್ರಕಾಶ್. ರಾಮನಗರ