Advertisement

ರಾಮನಗರ ಜಿಲ್ಲೆಯಾಗಿಯೇ ಉಳಿಯುತ್ತಾ…?

01:05 AM Oct 26, 2023 | Team Udayavani |

18 ವರ್ಷಗಳ ಹಿಂದೆ ಸ್ಥಾಪನೆಯಾದ ನೂತನ ರಾಮನಗರ ಜಿಲ್ಲೆ ಮತ್ತೆ ಬೆಂಗಳೂರಿನಲ್ಲಿ ಲೀನವಾ­ಗುತ್ತಾ..? ಜಿಲ್ಲೆ ಹೆಸರು ಬದಲಾವಣೆಯಾಗು­ತ್ತಾ ಅಥವಾ ಇಲ್ಲವಾ? ಇದು ಬಿಸಿಬಿಸಿ ಚರ್ಚೆಗೆ ಕಾರಣವಾಗಿರುವ ಸಂಗತಿ.

Advertisement

ಬ್ರಾಂಡ್‌ ಬೆಂಗಳೂರು ನಿರ್ಮಾಣದ ಉಮೇದಿನಲ್ಲಿರುವ ಡಿಸಿಎಂ ಡಿ.ಕೆ.ಶಿವ ಕುಮಾರ್‌ ವಿಜಯದಶವಿ­ಯಂದು ಸ್ವಕ್ಷೇತ್ರ ಕನಕಪುರದಲ್ಲಿ ನಾವು ರಾಮನಗರ ದವರಲ್ಲ, ಬೆಂಗಳೂರಿನವರು ಎಂದು ನೀಡಿದ ಹೇಳಿಕೆ ಇಂತಹ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಖಾರವಾಗಿ ಟ್ವೀಟ್‌ ಮಾಡಿರುವುದು ಇಬ್ಬರು ಘಟಾನುಘಟಿ ರಾಜಕಾರಣಿಗಳ ನಡುವಿನ ರಾಜಕೀಯ ದಂಗಲ್‌ಗೆ ಎಡೆ ಮಾಡಿಕೊಡುವ ಮೂಲಕ ಬಹುಚರ್ಚಿತ ವಿಷಯವಾಗಿ ಪರಿಣಮಿಸಿದೆ.

ರಾಮನಗರ ಜಿಲ್ಲೆ ಇತಿಹಾಸ

ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ವಾಸ್ತವ್ಯ ಹೂಡಿದ್ದ ಕಾರಣಕ್ಕೆ ರಾಮನಗರ ಎಂಬ ಹೆಸರು ಬಂದಿದ್ದು, ಇಲ್ಲಿ ಪ್ರಸಿದ್ದ ರಾಮದೇವರ ಬೆಟ್ಟ ಇದೆ. ಇಂಗ್ಲಿಷ್‌ ಅಧಿಕಾರಿ ಬ್ಯಾರಿಕ್ಲೋಸ್‌ ಹೆಸರಿನ ಸ್ಮರಣಾರ್ಥ ಇದನ್ನು ಕೆಲವು ಕಾಲ ಕ್ಲೋಸ್‌ ಪೇಟೆ ಎಂದು ಕರೆಯಲಾಗುತಿತ್ತು. ಬಳಿಕ ರಾಮನಗರ ಎಂಬ ಹೆಸರು ಖಾಯಂ ಆಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳು 1986ರ ವರೆಗೆ ಬೆಂಗಳೂರು ಜಿಲ್ಲೆಗೆ ಸೇರಿದ್ದವು. 1986ರಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ವಿಭಜನೆ ಮಾಡಿದಾಗ ಅಲ್ಲಿಗೆ ಸೇರಿದ್ದವು. 2007ರಲ್ಲಿ ರಾಮನಗರವನ್ನು ನೂತನ ಜಿಲ್ಲೆಯಾಗಿ ಅಂದಿನ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಘೋಷಿಸಿದರು. ಈಗ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲೂಕುಗಳಿವೆ.

ಡಿಕೆಶಿ ವಾದ ಏನು?

Advertisement

ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಬೆಂಗಳೂರಿನ ಹೆಸರು ನಮ್ಮ ಭಾಗಕ್ಕೆ ಇದ್ದರೆ, ಇಲ್ಲಿನ ಭೂಮಿಗೆ ಹೆಚ್ಚು ಬೆಲೆ ಬರುತ್ತದೆ, ಬೃಹತ್‌ ಉದ್ಯಮಗಳು ಇಲ್ಲಿ ಆರಂಭಗೊಳ್ಳುತ್ತವೆ. ಈ ಭಾಗದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೆಂಪೇ ಗೌಡರು ಬೆಂಗಳೂರು ಕಟ್ಟಿದವರು, ಅವರ ನೆಲ ವೆಲ್ಲ ಬೆಂಗಳೂರು. ರಾಮನಗರ ಜಿಲ್ಲೆಯ 4 ತಾಲೂಕು ಬೆಂಗಳೂರಿಗೆ ಸೇರಿದ್ದು ಎಂಬುದು ಡಿ.ಕೆ.ಶಿವಕುಮಾರ್‌ ಪ್ರಬಲ ವಾದ. ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.

ಎಚ್‌ಡಿಕೆ ವಿರೋಧ ಯಾಕೆ?

ರಾಮನಗರಕ್ಕೆ ಜಿಲ್ಲೆಯ ಸ್ಥಾನಮಾನ ನೀಡಿದ್ದು ಎಚ್‌.ಡಿ. ಕುಮಾರಸ್ವಾಮಿ. ಜನತೆಗೆ ಆಡಳಿತ ಹತ್ತಿರವಾಗಬೇಕು ಎಂಬ ಕಾರಣದಿಂದ ಹೊಸ ಜಿಲ್ಲೆಯನ್ನು ರಚಿಸಿದ್ದೇವೆ. ಜಿಲ್ಲೆ ಅಭಿವೃದ್ಧಿ ಹೊಂದುತ್ತಿದೆ. ಡಿ.ಕೆ.ಶಿವಕುಮಾರ್‌ಗೆ ಜಿಲ್ಲೆಯ ಜನತೆ ಬಗ್ಗೆ ಕಾಳಜಿ ಇಲ್ಲ, ಅವರ ಅಕ್ರಮ ಆಸ್ತಿಯ ಬೆಲೆ ಹೆಚ್ಚಿಸಿಕೊಳ್ಳಲು ಬ್ರಾಂಡ್‌ ಬೆಂಗಳೂರು ಜಪ ಮಾಡುತ್ತಿ ದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಮನಗರ ಜಿಲ್ಲೆ ಯನ್ನು ವಿಭಜನೆ ಮಾಡುವುದಕ್ಕಾಗಲಿ, ಹೆಸರು ಬದಲಾ ವಣೆ ಮಾಡುವುದಕ್ಕಾಗಲಿ ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಎಚ್‌ಡಿಕೆ ವಾದಕ್ಕೆ ಬಿಜೆಪಿ ಎಂಎಲ್‌ಸಿ ಯೋಗೇಶ್ವರ್‌, ಮಾಜಿ ಶಾಸಕ ಎ.ಮಂಜುನಾಥ್‌ ಸಾಥ್‌ ನೀಡಿದ್ದಾರೆ. ಇವರಿಬ್ಬರ ನಡುವಿನ ಜಟಾಪಟಿಯಲ್ಲಿ ರಾಮನಗರ ಜಿಲ್ಲೆಯಾಗಿಯೇ ಉಳಿಯುತ್ತಾ ಎಂಬ ಜಿಜ್ಞಾಸೆ ಕಾಡುತ್ತಿದೆ.

ಸು.ನಾ.ನಂದಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next