Advertisement

Ramanagar Politics: ಕಾದಾಟದ ಅಖಾಡವಾಗಲಿದೆಯಾ ಜಿಲ್ಲೆ?

05:16 PM Sep 06, 2023 | Team Udayavani |

ರಾಮನಗರ: ಜಿದ್ದಾಜಿದ್ದಿ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ರಾಮನಗರ ಮಾಜಿ ಸಿಎಂ ಎಚ್‌ಡಿಕೆ ಮತ್ತು ಹಾಲಿ ಡಿಸಿಎಂ ಡಿಕೆಶಿ ನಡುವಿನ ಶಕ್ತಿಪ್ರದರ್ಶನದ ಭೂಮಿಕೆಯಾಗಲಿದೆಯಾ..? ಕೆಲದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗಳು ಇಂತಹುದೊಂದು ಸುಳಿವನ್ನಿತ್ತಿವೆ. ಚುನಾವಣೆ ಮುಗಿದು ಮೂರು ತಿಂಗಳು ಕಳೆದ ಬೆನ್ನಲ್ಲೇ ಕಾಂಗ್ರೆಸ್‌-ಜೆಡಿಎಸ್‌-ಬಿಜೆಪಿ ಪಕ್ಷಗಳಲ್ಲಿ ಜಿಲ್ಲೆಯಲ್ಲಿ ಚುರುಕುಗೊಂಡಿದೆ.

Advertisement

ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತವರು ಜಿಲ್ಲೆಯಲ್ಲಿ ಟಾಂಗ್‌ ನೀಡಲು ವಿಪಕ್ಷ ಗಳು ಸಜ್ಜಾಗಿವೆ. ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್‌ ಸಹ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಈ ಬೆಳವಣಿಗೆ ರಾಜಕೀಯ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿದೆ.

ಕಾಲ್ನಡಿಗೆ ವರ್ಸಸ್‌ ಬಂದ್‌: ರಾಮನಗರದ ಅರ್ಚಕರ ಹಳ್ಳಿ ಬಳಿ ನಿರ್ಮಾಣವಾಗಬೇಕಿರುವ ರಾಜೀವ್‌ ಗಾಂಧಿ ಆರೋಗ್ಯವಿವಿ ಅಂಗಳದಲ್ಲಿ ಇರಬೇಕಾದ ಮೆಡಿಕಲ್‌ ಕಾಲೇಜನ್ನು ಡಿ.ಕೆ.ಶಿವಕುಮಾರ್‌ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌, ಬಿಜೆಪಿ ಹಾಗೂ ಕೆಲ ಸಂಘಟನೆಗಳು ಒಗ್ಗೂಡಿ ಸೆ.8ರಂದು ರಾಮನಗರ ಬಂದ್‌ಗೆ ಕರೆ ನೀಡಿವೆ. ಬಂದ್‌ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಅವರ ತವರು ಜಿಲ್ಲೆಯಲ್ಲಿ ಜನಾಭಿಪ್ರಾಯ ಮೂಡಿಸಲು ಸಜ್ಜಾಗಿವೆ. ವಿಪಕ್ಷಗಳ ಈ ತಂತ್ರಕ್ಕೆ ಡಿಕೆಶಿ ಪ್ರತಿತಂತ್ರ ರೂಪಿಸಿದ್ದು, ಬಂದ್‌ ಮುನ್ನಾ ದಿನದಂದು ರಾಮನಗರದಲ್ಲಿ ಭಾರತ್‌ಜೋಡೋ ಯಾತ್ರೆ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲೆಗೆ ಕರೆಸಿ ಕಾರ್ಯಕರ್ತರ ಜೊತೆಗೂಡಿ ನಡಿಗೆಯ ಕಾರ್ಯಕ್ರಮವನ್ನು ಸೆ.7 ರಂದು ಹಮ್ಮಿ ಕೊಂಡಿದ್ದಾರೆ.

ಇದರೊಂದಿಗೆ ತವರು ಜಿಲ್ಲೆಯಲ್ಲಿ ಡಿಕೆಶಿಸಹ ಶಕ್ತಿಪ್ರದರ್ಶನಕ್ಕಿಳಿದಿದ್ದಾರೆ. ಭಾರತ್‌ ಜೊಡೋ ನಡಿಗೆಯ ಕಾರ್ಯಕ್ರಮದಲ್ಲಿ ಹೆಚ್ಚು ಮಂದಿಯನ್ನು ಸೇರಿಸುವ ಮೂಲಕ ವಿರೋಧಿಗಳಿಗೆ ಸಂದೇಶ ರವಾನಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಬಿಜೆಪಿ ಸಹಾ ಅಖಾಡಕ್ಕೆ: ರಾಮನಗರ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ವಿಸ್ತರಣೆಗೆ ಬಿಜೆಪಿ ಸಹ ಮುಂದಾಗಿದೆ. ಸೆ.6 ರಂದು ರಾಮನಗರದಲ್ಲಿ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಎಕ್ಸಾಮಿ ನೇಷನ್‌ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರ ಡಾ.ಅಶ್ವತ್ಥ್ನಾರಾಯಣ್‌ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಇದರೊಂದಿಗೆ ಜಿಲ್ಲೆಯ ಬಿರುಸಿನ ರಾಜಕೀಯ ಅಖಾಡಕ್ಕೆ ಬಿಜೆಪಿ ಸಹ ಎಂಟ್ರಿ ಕೊಟ್ಟಿದೆ. ಹಿಂದೆ ಸಂಸದ ಡಿ.ಕೆ.ಸುರೇಶ್‌ ಮತ್ತು ಡಾ.ಅಶ್ವತ್ಥ್ ನಾರಾಯಣ್‌ ನಡುವೆ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳ ನಡೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

Advertisement

ಸಿಎಂ ಕಾರ್ಯಕ್ರಮದತ್ತ ಎಲ್ಲರ ಚಿತ್ತ.. : ರಾಮನಗರ ಬಂದ್‌ಗೆ ಕರೆ ನೀಡಿರುವ ಮುನ್ನಾ ದಿನ ಜಿಲ್ಲೆಗೆ ಸಿಎಂ ಮತ್ತು ಡಿಸಿಎಂ ಆಗಮಿಸುತ್ತಿದ್ದು, ಎಲ್ಲರ ಚಿತ್ತ ಜಿಲ್ಲೆಗೆ ಸಿಎಂ ಕಾರ್ಯಕ್ರಮದತ್ತ ನೆಟ್ಟಿದೆ. ಭಾರತ್‌ ಜೊಡೋ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರಾಮನಗರದಲ್ಲಿ 1 ತಾಸುಗಳ ಕಾಲ ಸಿಎಂ ಕಾಲ್ನಡಿಗೆ ಮೂಲಕ ಸಂಚರಿಸಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕೆಂಗಲ್‌ ಹನುಮಂತಯ್ಯ ಮೆಡಿಕಲ್‌ ಕಾಲೇಜು ಹೋರಾಟ ಸಮಿತಿಯ ಸದಸ್ಯರು ಸ್ಥಳಾಂತರ ಖಚಿತವಾಗುತ್ತಿದ್ದಂತೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿ ಸಿಎಂ ಹಾಗೂ ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಜಿಲ್ಲೆಗೆ ಆಗಮಿಸುತ್ತಿರುವ ಸಮಯದಲ್ಲಿ ಹೋರಾಟ ಸಮಿತಿ ಏನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದ್ದು, ಎಲ್ಲರ ಚಿತ್ತ ಇದೀಗ ಸಿಎಂ ಕಾರ್ಯಕ್ರಮದತ್ತ ನೆಟ್ಟಿದೆ.

ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಹೈ ಅಲರ್ಟ್‌: ರಾಜಕೀಯ ಪಕ್ಷಗಳು ಪ್ರತಿಷ್ಟೆಯ ಕಾಳಗಕ್ಕೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲೇ ಪೊಲೀಸ್‌ ಇಲಾಖೆ ಸಹ ಎಚ್ಚೆತ್ತುಕೊಂಡಿದೆ. ಈಗಾಗಲೇ ಪೊಲೀಸ್‌ ಇಲಾಖೆಯ ಸಿಬ್ಬಂದಿ ಗುಪ್ತಮಾಹಿತಿ ಸಂಗ್ರಹಿಸುತ್ತಿದ್ದು, ಸಿಎಂ ಜಿಲ್ಲೆಗ ಆಗಮಿಸುತ್ತಿರುವ ವೇಳೆ ವಿಪಕ್ಷಗಳು ಮೆಡಿಕಲ್‌ ಕಾಲೇಜು ಪ್ರಕರಣವನ್ನು ಮುಂದುಮಾಡಿ ಪ್ರತಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದ್ದು, ಯಾವುದೇ ಅನಾಹುತಕಾರಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸ ಲಾಗಿದೆ. ಇನ್ನು ಭದ್ರತೆಗೆ ಹೆಚ್ಚಿವರಿ ಸಿಬ್ಬಂದಿಯನ್ನು ನಿಯೋಜಿಸಲು ಮುಂದಾಗಿರುವ ಜಿಲ್ಲಾ ಪೊಲೀಸರು ಇದಕ್ಕಾಗಿ ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಲು ಮುಂದಾಗಿದ್ದಾರೆ.

ರಾಮನಗರದಲ್ಲಿ ಸ್ಥಾಪನೆಯಾಗಬೇಕಿದ್ದ ಮೆಡಿಕಲ್‌ ಕಾಲೇಜನ್ನು ಸಿಎಂ ಮತ್ತು ಡಿಸಿಎಂ ಅಧಿಕಾರ ಬಳಸಿ ಕನಕಪುರಕ್ಕೆ ವರ್ಗಾವಣೆ ಮಾಡುವ ಮೂಲಕ ಇಡೀ ಜಿಲ್ಲೆಯ ಜನತೆಗೆ ವಂಚಿಸಿದ್ದಾರೆ. ಸೆ.8 ರಂದು ಬಂದ್‌ಗೆ ಕರೆ ನೀಡಲಾಗಿದೆ. ಸೆ.7 ರಂದು ನಮ್ಮ ನಿಲುವು ಏನು ಎಂಬುದನ್ನು ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಸಭೆ ನಡೆಸಿ ನಿರ್ಧರಿಸುತ್ತೇವೆ. – ಜಯಕುಮಾರ್‌, ಮೆಡಿಕಲ್‌ ಕಾಲೇಜು ಹೋರಾಟ ಸಮಿತಿ ಸದಸ ಸೆ.7ಕ್ಕೆ ಭಾರತ್‌ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದೇ ನೆನಪಿಗೆ ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎನ್ನುವ ಯೋಚನೆ ಇತ್ತ., ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ರಾಮ ನಗರದಲ್ಲಿ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಅಂದು ನಮ್ಮ ಜೊತೆ ಹೆಜ್ಜೆ ಹಾಕಲಿದ್ದಾರೆ. – ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next