Advertisement

ರೇಷ್ಮೆ ನಾಡಲ್ಲಿ ಹೊಂದಾಣಿಕೆಯ ವಾಸನೆ!

02:30 PM Apr 17, 2023 | Team Udayavani |

ರಾಮನಗರ: ರಾಜ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆಕಾಂಕ್ಷಿಗಳು ಟಿಕೆಟ್‌ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡು ಪಕ್ಷಾಂತರ ಪರ್ವ ಕೂಡ ಎಗ್ಗಿಲ್ಲದೆ ಸಾಗುತ್ತಿದೆ. ಅಷ್ಟೇ ಅಲ್ಲದೆ, ಈ ಬಾರಿ ಚುನಾವಣೆ ತತ್ವ ಸಿದ್ಧಾಂತಗಳಿಗಿಂತ ಆಸೆ ಆಮಿಷಗಳು ಸ್ವಹಿತಾಸಕ್ತಿಯ ಮೇಲೆಯೇ ನಡೆಯು ತ್ತಿವೆ ಎಂಬುದಕ್ಕೆ ಈ ಪಕ್ಷಾಂತರ ಪರ್ವ ಸಾಕ್ಷಿಯಾಗಿದೆ.

Advertisement

ಇದೆಲ್ಲದರ ನಡುವೆಯೂ ಜೆಡಿಎಸ್‌ ಜೊತೆಗಿನ ಸಖ್ಯ ಬಿಟ್ಟು ಕೊಡದ ಬಿಜೆಪಿ ಮತ್ತು ಕಾಂಗ್ರೆಸ್‌ ಮೇಲ್ನೋಟಕ್ಕೆ ಭಾಷಣದಲ್ಲಿ ಮಾತ್ರ ತೀವ್ರ ವಿರೋಧಕ್ಕೆ ಮುಂದಾಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಜೆಡಿಎಸ್‌ ಸಖ್ಯದ ಬಗ್ಗೆ ಚಿಂತಿಸಿ ಸಾಫ್ಟ್‌ ಕಾರ್ನರ್‌ ತೋರುತ್ತಿವೆಯಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೌದು.. ರಾಜ್ಯದ ಗದ್ದುಗೆಗೇರಲು ಹಪಹಪಿ ಸುತ್ತಿರುವ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಇನ್ನಿಲ್ಲದ ಕಸರತ್ತು ಮಾಡ್ತಿವೆ. ಜೆಡಿಎಸ್‌ ಪಂಚರತ್ನ ಯಾತ್ರೆ ಮಾಡಿದ್ರೆ, ಬಿಜೆಪಿ ಸಂಕಲ್ಪ ಯಾತ್ರೆ ಮಾಡಿದೆ. ಇದಕ್ಕೆ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಕಾಂಗ್ರೆಸ್‌ ಕೂಡಾ ಪ್ರಜಾ ಧ್ವನಿಯಾತ್ರೆ ಮಾಡಿದ್ದು ವಿಶೇಷವಾಗಿತ್ತು. ರಾಜ್ಯದ ಗದ್ದುಗೆ ಈ ಬಾರಿ ಬಿಜೆಪಿ ಅಲಂಕರಿಸಬೇಕೆಂದು ರಾಷ್ಟ್ರ ನಾಯಕರು ಜಿದ್ದಿಗೆ ಬಿದ್ದಿದ್ದು, ಪ್ರಧಾನಿ ಮೋದಿ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶೇಷ ಗಮನಹರಿಸಿ ಬೆಂಗಳೂರಲ್ಲೇ ವಾಸ್ತವ್ಯ ಹೂಡಿ ಪಕ್ಷ ಅಧಿಕಾರಕ್ಕೆ ತಂದೇ ತೀರುವ ಹಠಕ್ಕೆ ಬಿದ್ದಿದ್ದಾರೆ.

ದೂರ ಸರಿದ ಅಶ್ವತ್ಥ್  ನಾರಾಯಣ್‌: ರಾಮನಗರದ ಮಟ್ಟಿಗೆ ಹೇಳ್ಳೋದಾದ್ರೆ ಜಿಲ್ಲಾ ಉಸ್ತುವಾರಿ ಮಂತ್ರಿಯನ್ನೇ ಕಣಕ್ಕಿಳಿಸಿ ಟಾಂಗ್‌ ನೀಡುವ ಚಿಂತನೆಯಲ್ಲಿದ್ದ ಬಿಜೆಪಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಕಾಂಗ್ರೆಸ್‌ಗೆ ಲಾಭವಾಗಬಹುದೆಂಬ ನಿರೀಕ್ಷೇಯಿಂದ ಡಾ. ಅಶ್ವತ್ಥ್ನಾರಾಯಣ್‌ ಅವರು ಕಣಕ್ಕಿಳಿಯಲಿಲ್ಲ ಎನ್ನಲಾಗುತ್ತಿದೆ. ಅಲ್ಲದೆ, ಡಿ.ಕೆ. ಬ್ರದರ್ ಬಳಗದಲ್ಲಿ ಗುರುತಿಸಿಕೊಂಡಿರುವ ಇಕ್ಬಾಲ್‌ ಹುಸೇನ್‌ ಅವರು ಎರಡನೇ ಬಾರಿ ಸ್ಪರ್ಧೆ ಮಾಡುತ್ತಿದ್ದು, ಕಳೆದ ಬಾರಿ ಅಲ್ಪಸಂಖ್ಯಾತರ ಒಟ್ಟು ಮತ ತನ್ನದಾಗಿಸಿಕೊಂಡು ಸಮುದಾಯದ ಒಗ್ಗಟ್ಟು ಪ್ರದರ್ಶಿಸಿದ್ದರು. ಅದು ಈ ಬಾರಿ ಚುನಾವಣೆಯಲ್ಲಿ ಹಿಂದೂ ಮತಗಳ ಒಗ್ಗೂಡುವಿಕೆಗೆ ದಾರಿ ಮಾಡಿ ಕೊಡಲಿದೆ ಎನ್ನಲಾಗುತ್ತಿದೆ.

ಯಾರು ಹಿತವರು ಮೂವರೊಳಗೆ: ಈ ಎಲ್ಲಾ ತಂತ್ರ, ರಣತಂತ್ರಗಳ ನಡುವೆ ಜೆಡಿಎಸ್‌ ಗೆದ್ದರೂ ಪರವಾಗಿಲ್ಲ ಮುಸ್ಲಿಂ ಸಮುದಾಯದವರು ಶಾಸಕರಾ ಗುವುದು ಬಿಜೆಪಿ ಸಹಿಸೋಲ್ಲ ಎನ್ನುವ ಸಂದೇಶ ರವಾನೆ ಮಾಡಲಾಗುತ್ತಿದೆಯಾ ಎನ್ನುವ ಮಾತುಗಳು ಕೂಡ ಹರಿದಾಡುತ್ತಿವೆ. ಒಟ್ಟಾರೆ ಮತದಾರ ಪ್ರಭು ಯಾರು ಹಿತವರು ಈ ಮೂವರೊಳಗೆ ಎಂಬ ತೀರ್ಮಾನ ಮಾಡುವ ತವಕದಲ್ಲಿದ್ದು, ಇದಕ್ಕೆಲ್ಲಾ ಉತ್ತರ ಮೇ 10ರ ಚುನಾವಣೆ ನಂತರ ಕಾದು ನೋಡಬೇಕಿದೆ.

Advertisement

ಸಿಪಿವೈ ಹೆಸರು ಅನಿವಾರ್ಯ: ಅದಕ್ಕೆ ಪುಷ್ಠಿ ನೀಡುವಂತೆ ವರುಣಾ ಕ್ಷೇತ್ರಕ್ಕೆ ವಿ.ಸೋಮಣ್ಣ ಹೆಸರು ಹಾಗೂ ಕನಕಪುರಕ್ಕೆ ಆರ್‌. ಅಶೋಕ್‌ ಅವರನ್ನು ಘೋಷಣೆ ಮಾಡುವ ಮೂಲಕ ಅಚ್ಚರಿ ಜೊತೆಗೆ ವಿಶೇಷ ಟಾಸ್ಕ್ ಕೂಡ ನೀಡಿದೆ. ಆದರ ಜೊತೆಗೆ ರಾಮನಗರಕ್ಕೂ ಡಾ. ಅಶ್ವತ್ಥ್ನಾರಯಣ ಅಭ್ಯರ್ಥಿಯಾಗ್ತಾರೆ ಎನ್ನವ ಮಾತು ಹರಿದಾಡುತ್ತಿದ್ದವು. ಆದರೆ, ಅದ್ಯಾಕೋ ಬಿಜೆಪಿ ಹೈ ಕಮಾಂಡ್‌ ಮಾತ್ರ ಇತ್ತ ಗಮನಹರಿಸಿಲ್ಲ. ಇನ್ನು ಚನ್ನಪಟ್ಟಣಕ್ಕೆ ಸಿಪಿವೈ ಹೆಸರು ಅನಿವಾರ್ಯ ಎನ್ನುವಂತೆ ಘೋಷಣೆ ಆಗಿದೆಯಾದರೂ, ಎಚ್‌ಡಿಕೆ ಬಗ್ಗೆ ಟಾಂಗ್‌ ನೀಡುವ ಮಟ್ಟಕ್ಕೆ ಮುಂದಾಗಿಲ್ಲ ಎನ್ನುವ ಮಾತು ಕೇಳಿ ಬರುತ್ತಿವೆ.

ರಾಮನಗರ: ಹೋರಾಟಕ್ಕೆ ಸಜ್ಜಾಗದ ಕಾಂಗ್ರೆಸ್‌ : ಜೆಡಿಎಸ್‌ ಜೊತೆಗಿನ ಸಾಫ್ಟ್‌ ಕಾರ್ನರ್‌ ರಾಮನಗರ ಜಿಲ್ಲೆಯ ಮಟ್ಟಿಗೆ ಇದೆ ಎಂಬುದಕ್ಕೆ ಕಾಂಗ್ರೆಸ್‌ ಕೂಡ ಅನಿರೀಕ್ಷಿತ ಹಾಗೂ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ನಡೆಸಿತ್ತು. ಆದರೆ, ನಂತರದ ಬೆಳವಣಿಗೆಯಲ್ಲಿ ಆಕಾಂಕ್ಷಿತರಲ್ಲದೆ, ಟಿಕೆಟ್‌ಗಾಗಿ ಅರ್ಜಿಯನ್ನೂ ಹಾಕದ ಗಂಗಾಧರ್‌ ಅವರಿಗೆ ಟಿಕೆಟ್‌ ನೀಡುವ ಮೂಲಕ ಇಬ್ಬರ ನಡುವೆ ಹೋರಾಟಕ್ಕೆ ಸಜ್ಜಾಗಲೇ ಇಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ.

ಸಿಎಂ ರೇಸ್‌ನಲ್ಲಿರುವ ನಾಯಕರ ಸೋಲಿಸಲು ಬಿಜೆಪಿ ತಂತ್ರ : ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಜಿದ್ದಾಜಿದ್ದಿನ ನಡುವೆ ಕಾಂಗ್ರೆಸ್‌ನವರು ಬಿಜೆಪಿ ಮುಕ್ತ ಕರ್ನಾಟಕ ಮಾಡ್ತೇವೆ ಅಂತಾರೆ. ಬಿಜೆಪಿಗರು ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡ್ತೇವೆನ್ನುವ ಭರಾಟೆಯಲ್ಲಿ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇಬ್ಬರಿಗೂ ಇದೆ ಎಂಬುದನ್ನ ಸದ್ದಿಲ್ಲದೆ ಒಪ್ಪಿಕೊಂಡಂತಿದೆ. ಅದಕ್ಕೆ ಇಂಬು ನೀಡುವಂತೆ ಘಟಾನುಘಟಿ ಕಾಂಗ್ರೆಸ್‌ ನಾಯಕರ ವಿರುದ್ಧ ರಾಜ್ಯ ನಾಯಕರನ್ನು ಕಣಕ್ಕಿಳಿಸಿರುವ ಬಿಜೆಪಿ. ಮುಖ್ಯಮಂತ್ರಿ ಹುದ್ದೆಗೆ ಹತ್ತಿರವಾಗಬೇಕಾದರೆ ಕಾಂಗ್ರೆಸ್‌ನ ಸಿಎಂ ರೇಸ್‌ನಲ್ಲಿರುವ ನಾಯಕರನ್ನು ಸೋಲಿಸಿಯೇ ತೀರಬೇಕೆನ್ನುವ ತೀರ್ಮಾನಕ್ಕೆ ಬಂದಿದೆ.

ಬಿಜೆಪಿ ನಾಯಕರದ್ದು ಕಾದು ನೋಡುವ ತಂತ್ರ : ಹೊಂದಾಣಿಕೆ ರಾಜಕಾರಣ ಅನ್ನೋದು ಹೇಳಿ ಕೇಳಿ ಆಂತರಿಕವಾಗಿ ನಡೆಯುತ್ತೆ. ಇಲ್ಲಿ ಬಿಜೆಪಿ ಕೂಡ ಮೈಂಡ್‌ ಗೇಮ್‌ ಮಾಡ್ತಿದೆ ಎನ್ನಲಾಗುತ್ತಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಎಚ್‌ಡಿಕೆಗೆ ಪ್ರಬಲ ಸ್ಪರ್ಧಿಯಾಗಿರುವ ಸಿಪಿವೈಗೆ ಬಿಜೆಪಿ ಟಿಕೆಟ್‌ ನೀಡುವುದರ ಮೂಲಕ ಡಬಲ್‌ ಚಾನ್ಸ್‌ ತೆಗೆದುಕೊಂಡಿದೆ. ಅಕಸ್ಮಾತ್‌ ಟಿಕೆಟ್‌ ನೀಡದೆ ಹೋದರೆ ಕಾಂಗ್ರೆಸ್‌ ಅವರನ್ನ ಸೆಳೆಯುವ ಎಲ್ಲಾ ಪ್ರಯತ್ನ ಮಾಡುತ್ತಿತ್ತು. ಅದು ಅಸಾಧ್ಯ ಎನ್ನಿಸಿದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಚಿಂತನೆ ಇತ್ತು. ಆಗ ಸಿಪಿವೈ ಸಾಂಪ್ರದಾಯಿಕ ಮತಗಳ ಜೊತೆಗೆ ಅಲ್ಪಸಂಖ್ಯಾತರ ಬಹುತೇಕ ಮತ ಸೇರಿಕೊಂಡು ಕುಮಾರಸ್ವಾಮಿ ಅವರಿಗೆ ಟಫ್‌ ಫೈಟ್‌ ನೀಡುವ ಸಾಧ್ಯತೆ ಇತ್ತು. ಆದರೆ, ಈಗ ಎಡಗೈಲಿ ಕೊಟ್ಟಂಗೆ ಕೊಟ್ಟು ಕಿರುಗಣ್ಣಲ್ಲಿ ಕಾದು ನೋಡುವ ತಂತ್ರ ಬಿಜೆಪಿಯದ್ದು ಎನ್ನಲಾಗುತ್ತಿದೆ.

ಈಗ ಗೆದ್ದರೆ ಆಡೋಕೆ ಬಂದಿದ್ದೆ. ಸೋತರೆ ನೋಡೋಕೆ ಬಂದಿದ್ದೆ ಎನ್ನುವ ಮಟ್ಟಕ್ಕೆ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ನಾಯಕರು ಮುಂದಾಗಿದ್ದಾರಾ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ರಾಷ್ಟ್ರಮಟ್ಟದ ನಾಯಕರು ಈವರೆಗೆ ಕಳೆದು ಕಳೆದ ಎರಡು ವರ್ಷದ ಅವಧಿಯಲ್ಲಿ ಚನ್ನಪಟ್ಟಣದ ಒಂದೇ ಒಂದು ಕಾರ್ಯಕ್ರಮಕ್ಕೂ ಬಾರದೆ, ನಡೆಸದೇ ಇರೋದು ಈ ಎಲ್ಲಾ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.

ಎಂ ಎಚ್‌. ಪ್ರಕಾಶ ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next