ರಾಮನಗರ: ಕುರಿಗಳ ಮೈ ಕೊಳೆಯಾಗಿದೆ ಎಂದು ಕೆರೆಯಲ್ಲಿ ತೊಳೆಯಲು ಹೋದ ತಂದೆ ಮತ್ತು ಮಗ ನೀರು ಪಾಲಾದ ದಾರುಣ ಘಟನೆ ಕನಕಪುರ ತಾಲೂಕಿನ ಸಾತನೂರು ಸಮೀಪದ ಕುರುಬಳ್ಳಿ ಗ್ರಾಮದಲ್ಲಿ ಶುಕ್ರವಾರ ನಡಿದಿದೆ.
ನೀರಿನಲ್ಲಿ ಮುಳುಗಿ ಸಾವನಪ್ಪಿದವರನ್ನು ತಾಲೂಕಿನ ಸಾತನೂರು ಹೋಬಳಿ ಕುರುಬಳ್ಳಿ ಗ್ರಾಮದ ರಾಜು (50) ಮತ್ತು ಅವರ ಮಗ ಪ್ರಸನ್ನ (23) ಎಂದು ಗುರುತಿಸಲಾಗಿದೆ. ರಾಜು ಅವರಿಗೆ ಪತ್ನಿ ಹಾಗೂ ಇನ್ನೊಬ್ಬ ಮಗ ಇದ್ದಾನೆ.
ಇವರು ಮೂಲತಃ ಕುರಿ ಸಾಕಾಣಿಕೆಯನ್ನೇ ಕಸುಬಾಗಿಸಿಕೊಂಡು ಬಂದಿದ್ದವರು. ಈಗಲೂ ಕುರಿಗಳನ್ನು ಸಾಕಿದ್ದು ಅವುಗಳನ್ನು ಮೇಯಿಸಲು ಹೋಗಿದ್ದಾಗ ತಂದೆ ಮತ್ತು ಮಗ ಇಬ್ಬರು ಸೇರಿ ಕುರುಬಳ್ಳಿ ಗೇಟ್ ಬಳಿಯಿರುವ ಕುರುಬಳ್ಳಿ ಹಳೆ ಕೆರೆಯಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆ ಕುರಿಗಳ ಮೈ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಒಬ್ಬರು ಕಾಲು ಜಾರಿನಲ್ಲಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ಕಾಪಾಡಲು ಮತ್ತೊಬ್ಬರು ಹೋಗಿದ್ದು ಇಬ್ಬರೂ ಮುಳುಗಿ ಸಾವನಪ್ಪಿದ್ದಾರೆ ಎನ್ನಲಾಗಿದೆ. ಯಾರು ಮೊದಲು ನೀರಿನಲ್ಲಿ ಮುಳುಗಿದರು ಎಂದು ತಿಳಿದು ಬಂದಿಲ್ಲ.
ಘಟನೆ ಆದ ಸ್ವಲ್ಪ ಸಮಯದ ನಂತರ ಅಕ್ಕಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವರು ಅನುಮಾನಗೊಂಡು ನೋಡಿದಾಗ ತಂದೆ ಮತ್ತು ಮಗ ನೀರಿನಲ್ಲಿ ಮುಳುಗಿರುವುದು ಗೊತ್ತಾಗಿದೆ. ತತ್ ಕ್ಷಣವೇ ಗ್ರಾಮದ ಜನತೆಗೆ ಮತ್ತು ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರು ತೆಪ್ಪ ಮತ್ತು ಬಲೆಯನ್ನು ಬಳಸಿ ಕೆರೆಯಲ್ಲಿ ಶೋಧ ನಡೆಸಿ, ಮುಳುಗಿದ್ದ ತಂದೆ ಮತ್ತು ಮಗನ ಶವವನ್ನು ಹೊರತೆಗೆದಿದ್ದಾರೆ. ಮೃತರ ಪತ್ನಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರ ಅಂತ್ಯ ಸಂಸ್ಕಾರವನ್ನು ಕುರುಬಳ್ಳಿ ಗ್ರಾಮದಲ್ಲಿ ಶನಿವಾರ ನೆರವೇರಿಸುವುದಾಗಿ ಕುಟುಂದವರು ತಿಳಿಸಿದ್ದಾರೆ.