Advertisement

ರಾಮಜನ್ಮಭೂಮಿ ವಿವಾದ: “ಮಧ್ಯವರ್ತಿ’ನೇಮಕಕ್ಕೆ ಚಿಂತನೆ

12:30 AM Feb 27, 2019 | Team Udayavani |

ಹೊಸದಿಲ್ಲಿ: ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ಭೂಮಿ ವಿವಾದ ಬಗೆಹರಿಸಲು ಸಂಧಾನವೇ ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌, ಇದಕ್ಕಾಗಿ ಮಧ್ಯವರ್ತಿಯೊಬ್ಬರನ್ನು ನೇಮಕ ಮಾಡುವ ಬಗ್ಗೆ ಪರಿಶೀಲನೆ ನಡೆಸಲು ನಿರ್ಧರಿಸಿದೆ.

Advertisement

ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸಂವಿಧಾನ ಪೀಠ, ಮಾರ್ಚ್‌ 5ರಂದು ನಡೆಯುವ ವಿಚಾರಣೆ ವೇಳೆ ಮಧ್ಯವರ್ತಿಯನ್ನು ನೇಮಕ ಮಾಡುವುದೇ, ಬೇಡವೇ ಎಂಬ ಬಗ್ಗೆ ಕೋರ್ಟ್‌ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ. ಈ ವಿವಾದವನ್ನು ಸಂಧಾನ ಮೂಲಕ ಉತ್ತಮ ರೀತಿಯಲ್ಲಿ ಬಗೆಹರಿಸುವ ಕುರಿತು ಚಿಂತನೆ ನಡೆಸುತ್ತಿರುವುದಾಗಿ ಪೀಠ ಹೇಳಿದೆ. 

ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಭೂ ವಿವಾದವಾದ ಇದನ್ನು ಮಧ್ಯಸ್ಥಿಕೆಯಿಂದ ಪರಿಹರಿಸುವ ಕೇವಲ ಶೇ.1ರಷ್ಟು ಅವಕಾಶ ಇದ್ದರೂ, ಆ ಅವಕಾಶವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದ ನ್ಯಾಯಾಲಯ, ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಅನು ವಾದಿತ ದಾಖಲೆಗಳನ್ನು 6 ವಾರಗಳಲ್ಲಿ ಕೋರ್ಟ್‌ಗೆ ಸಲ್ಲಿಸಲು ದೂರುದಾರರಿಗೆ ನಿರ್ದೇಶಿಸಿದೆ. ಜೊತೆಗೆ ದಾಖಲೆಗಳನ್ನು ಅಭ್ಯಸಿಸಿ ಏನಾದರೂ ಆಕ್ಷೇಪಣೆಗಳಿದ್ದರೆ ತಿಳಿಸುವಂತೆಯೂ ಸೂಚಿಸಿದೆ. 

ಕೆಲವು ಮುಸ್ಲಿಂ ಅರ್ಜಿದಾರರು ಸುಪ್ರೀಂ ಕೋರ್ಟ್‌ ನೀಡಿರುವ ಮಧ್ಯಸ್ಥಿಕೆ ಆಯ್ಕೆಯನ್ನು ಒಪ್ಪಿಕೊಂಡಿವೆ. ಆದರೆ ರಾಮ್‌ಲಲ್ಲಾ ವಿರಾಜ್‌ಮಾನ್‌ ಸೇರಿದಂತೆ ಕೆಲ ಹಿಂದೂ ಅರ್ಜಿದಾರರಾರು ಮಧ್ಯಸ್ಥಿಕೆ ವಿಚಾರವನ್ನು ಒಪ್ಪಿಲ್ಲ ಎಂದು ಹೇಳಲಾಗಿದೆ. ಈ ಹಿಂದೆಯೂ ಮಧ್ಯಸ್ಥಿಕೆ ಪ್ರಸ್ತಾಪ ವಿಫ‌ಲವಾಗಿತ್ತು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next