ದೇಶದ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ವಿವಾದವನ್ನು ಮಾತುಕತೆ-ಸಂಧಾನದ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಆದಾಗ್ಯೂ ಎರಡೂ ಪಕ್ಷಗಳೂ ಪರಸ್ಪರ ಮಾತುಕತೆಯ ಮೂಲಕ ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಇದೇ ಮೊದಲೇನೂ ಅಲ್ಲ. ಹಿಂದೆಯೂ ಸಂಧಾನ ಪ್ರಕ್ರಿಯೆಗಳು ನಡೆದಿದ್ದವಾದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಈಗ ಮಧ್ಯಸ್ಥಿಕೆಯ ವಿಚಾರಕ್ಕಾಗಿ ಸುಪ್ರೀಂ ಕೋರ್ಟ್ ಆರು ವಾರಗಳ ಸಮಯ ಕೊಟ್ಟಿದೆ.
ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿಯು ಅಯೋಧ್ಯೆ ರಾಮಮಂದಿರ ವಿವಾದದಲ್ಲಿನ ಎಲ್ಲಾ ಅರ್ಜಿದಾರರನ್ನು ಭೇಟಿಯಾಗಲಿದೆ. ಈ ತ್ರಿಸದಸ್ಯ ಮಧ್ಯಸ್ಥಿಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ಎಫ್ಎಂ ಇಬ್ರಾಹಿಂ ಕಲೀಫುಲ್ಲಾ, ಹಿರಿಯ ನ್ಯಾಯವಾದಿ ಶ್ರೀರಾಂ ಪಂಚು ಮತ್ತು ಶ್ರೀ ಶ್ರೀ ರವಿಶಂಕರ ಗುರೂಜಿ ಇರಲಿದ್ದಾರೆ.
ಆದರೆ ಈ ವಿವಾದವು ಮಾತುಕಥೆ ಅಥವಾ ಮಧ್ಯಸ್ಥಿಕೆಯಿಂದ ಪರಿಹಾರವಾಗುವಂಥದ್ದಲ್ಲ ಎಂದು ರಾಮ ಮಂದಿರ ನಿರ್ಮಾಣಕ್ಕಾಗಿ ಆಂದೋಲನ ಮಾಡುತ್ತಿರುವ ಸಂಘಟನೆಗಳು ಹೇಳುತ್ತಿವೆ. ಇದೇನೇ ಇದ್ದರೂ, ಅಯೋಧ್ಯೆ ವಿಚಾರ ಮಾತುಕತೆಯ ಮೂಲಕವಾಗಲಿ ಅಥವಾ ಕೋರ್ಟಿನ ತೀರ್ಪಿನ ಮೂಲಕವಾಗಲಿ, ಹೇಗಾದರೂ ಆಗಲಿ ಬೇಗನೇ ಪರಿಹಾರವಾದರೆ ಒಳ್ಳೆಯದು.
ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ದೊಡ್ಡ ಅಡ್ಡಿಯಿರುವುದು ಅಲ್ಲಿನ ಜಾಗದ ಕುರಿತು. ಆ ಜಮೀನಿನಲ್ಲಿ ಕೆಲ ಭಾಗ ತನ್ನದೆಂದು ಸುನ್ನಿ ವಕ್ಫ್ ಬೋರ್ಡ್ ಹೇಳಿದರೆ, ಇನ್ನಷ್ಟು ಭಾಗ ನಿರ್ಮೋಹಿ ಅಖಾಡಕ್ಕೆ ಸಂಬಂಧಿಸಿದ್ದು. ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳು ಆ ಇಡೀ ಜಮೀನು ರಾಮಮಂದಿರ ನಿರ್ಮಾಣಕ್ಕೆ ಸಿಗಬೇಕು ಎನ್ನುತ್ತವೆ. ಜಮೀನಿಗೆ ಸಂಬಂಧಿಸಿದ ವಿವಾದವನ್ನು ಪರಿಹರಿಸಲು ಅಲಹಾಬಾದ್ ಹೈಕೋರ್ಟ್‌ನಲ್ಲಿ ದೀರ್ಘ ಸಮಯದಿಂದ ಹೋರಾಟ ನಡೆದೇ ಇದೆ. ಒಟ್ಟಲ್ಲಿ ಅಂತಿಮ ನಿರ್ಣಯಕ್ಕೆ ಬರುವ ವಿಚಾರದಲ್ಲಿ ಅನೇಕ ಅಡ್ಡಿಗಳು ಎದುರಿವೆ. ಈ ಕಾರಣಕ್ಕಾಗಿಯೇ ಸರ್ವೋಚ್ಚ ನ್ಯಾಯಾಲಯ ಮಾತುಕತೆಯೇ ಉತ್ತಮ ಮಾರ್ಗ ಎನ್ನುತ್ತಿರುವುದು. ಆದರೆ ಮೊದಲೇ ಹೇಳಿದಂತೆ, ಮಧ್ಯಸ್ಥಿಕೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಇದು ಮೊದಲ ಪ್ರಯತ್ನವೇನೂ ಅಲ್ಲ. ಅಲಹಾಬಾದ್ ಹೈಕೋರ್ಟ್ ಮೂರು ಬಾರಿ ಈ ಹಾದಿಯಲ್ಲಿ ಸಾಗಲು ಪ್ರಯತ್ನಿಸಿದೆ. ಮೂರು ಬಾರಿಯೂ ಸಂಧಾನ ವಿಫಲವಾಗಿದೆ. ಈ ಬಾರಿ ಏನಾಗುತ್ತದೋ ನೋಡಬೇಕು.
ಮಧ್ಯಸ್ಥಿಕೆಯ ಮೂಲಕ ಒಂದು ನಿರ್ಣಯಕ್ಕೆ ಬರುವುದರಲ್ಲಿ ಇರುವ ಒಂದು ಸವಾಲೇನೆಂದರೆ, ಕೆಲವೇ ಕೆಲವರ ಮಾತುಕತೆಯ ಮೂಲಕ ಎರಡೂ ಸಮುದಾಯಗಳಲ್ಲಿನ ಬೃಹತ್ ವರ್ಗದ ಭಾವನೆಗಗಳನ್ನೇನೂ ಅವು ಸಫಲವಾಗಿ ಪ್ರತಿನಿಧಿಸಲಾರವು ಎನ್ನುವುದು. ಹಿಂದೆಯೂ ಕೆಲವು ಮುಸ್ಲಿಂ ಪ್ರತಿನಿಧಿಗಳು, ಸುನ್ನಿ ವಕ್ಫ್ ಬೋರ್ಡ್ ಪಾಲಿನ ಜಮೀನನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಟ್ಟು, ತಮಗೆ ಬೇರೆಡೆ ಮಸೀದಿ ಕಟ್ಟಲು ಜಾಗ ಕೊಟ್ಟರೆ ಅಡ್ಡಿಯಿಲ್ಲ ಎಂದರೆ, ಇನ್ನಷ್ಟು ಪ್ರತಿನಿಧಿಗಳು ಈ ವಾದವನ್ನು ಒಪ್ಪಲಿಲ್ಲ. ಇದೇ ರೀತಿಯಲ್ಲೇ ಹಿಂದೂ ಸಂಘಟನೆಯಲ್ಲೂ ಏಕಾಭಿಪ್ರಾಯ ಸಾಧ್ಯವಾಗಿಲ್ಲ. ಹೀಗಾಗಿ, ಮಾತುಕತೆಯಲ್ಲಿ ಭಾಗವಹಿಸುವ ನಾಲ್ಕೈದು ಜನರ ಮಾತನ್ನೇ ಅವರ ಸಮುದಾಯದ ಮಾತೆಂದು ಹೇಳಲಿಕ್ಕೆ ಆಗುವುದಿಲ್ಲ. ಆದಾಗ್ಯೂ, ಸದ್ಯಕ್ಕಂತೂ ಸರ್ವೋಚ್ಚ ನ್ಯಾಯಾಲಯ ಮಧ್ಯಸ್ಥಿಕೆದಾರರ ನಿರ್ಣಯದ ಆಧಾರದಲ್ಲಿ ತಾನು ತೀರ್ಪು ನೀಡುವುದಾಗಿ ಹೇಳಿಲ್ಲ. ಮಾತುಕತೆಯಿಂದ ಸಮಸ್ಯೆ ಬಗೆಹರಿಯಬಹುದೇ ಎನ್ನುವುದನ್ನಷ್ಟೇ ಅದು ನೋಡಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಾಮಮಂದಿರ ವಿವಾದಕ್ಕೆ ರಾಜಕೀಯ ಬಣ್ಣ ಹತ್ತಿದ ಸಮಯದಿಂದಲೇ ಈ ಸಮಸ್ಯೆ ಬಗೆಹರಿಯಲಾರದ ಕಗ್ಗಂಟಾಗಿ ಬದಲಾಗಿಬಿಟ್ಟಿತು. ಈ ಕಾರಣಕ್ಕಾಗಿಯೇ ವಿವಾದ ಬಗೆಹರಿಯುವುದಕ್ಕೆ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯವಿದೆ ಎನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈಗ ಸಂಧಾನ ಸಮಿತಿ ಬಗ್ಗೆಯೂ ಭಿನ್ನಾಭಿಪ್ರಾಯ ಬಂದಿರುವುದರಿಂದ ಸಂಧಾನ ಸೂತ್ರದ ಮೇಲೆ ಕರಿನೆರಳು ಬೀಳುವ ಸಾಧ್ಯತೆ ಇದೆ.