ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರನ ಪತ್ತೆಗೆ ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದು, ಶಂಕಿತ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಆತನನ್ನು ಹಿಡಿಯುವ ಕೆಲಸವಷ್ಟೇ ಆಗಬೇಕಿದೆ ಎಂದು ತಿಳಿದು ಬಂದಿದೆ.
ರಾಮೇಶ್ವರಂ ಕೆಫೆ ಬಾಂಬರ್ ಕಾರ್ಯಾಚರಣೆ ವೇಳೆ ಆತನ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಹೋದ ಸಂದರ್ಭದಲ್ಲಿ ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ. ಕಲಬುರಗಿ ಹಾಗೂ ಯಾದಗಿರಿಯ ಸಿಸಿ ಕೆಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆತನ ಚಲನವಲನ ಪತ್ತೆಯಾಗಿದೆ. ಎನ್‌ಐಎ ತಂಡ ಆತನನ್ನು ಹುಡುಕಾಡುತ್ತಿರುವುದನ್ನು ಅರಿತು ಹೊರ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸಿಸಿಬಿ ಪೊಲೀಸರು ಎನ್‌ಐಎಗೆ ಸಹಕಾರ ನೀಡುತ್ತಿದ್ದು ಎರಡೂ ತನಿಖಾ ತಂಡಗಳಿಗೂ ಶಂಕಿತ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಆದರೆ ಅದು ಬಾಂಬರ್ ಎಂಬುದು ದೃಢಪಡಬೇಕಿದೆ. ಶಂಕಿತ ಪ್ರಯಾಣಿಸಿರುವ ಜಾಗದಲ್ಲಿ ಕೆಲವೊಂದು ಹೆಗ್ಗುರುತು ಬಿಟ್ಟು ಹೋಗಿದ್ದು ಅದರ ಆಧಾರದ ಮೇಲೆ ಜಾಡು ಹಿಡಿಯಲಾಗುತ್ತಿದೆ. ಆತ ಹಿಂದಿ ಭಾಷೆಯ ಜತೆಗೆ ಎಷ್ಟು ಭಾಷೆ ಬಲ್ಲವನಾಗಿದ್ದಾನೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಹೈದರಾಬಾದ್ ಕರ್ನಾಟಕದ ಎಲ್ಲ ಭಾಗಗಳಲ್ಲೂ ಶೋಧ ನಡೆಸುತ್ತಿವೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಈ ಕುರಿತು ಪತ್ರಕರ್ತರೊಂದಿಗೆ ಗೃಹ ಸಚಿವ ಡಾ| ಜಿ.ಪರಮೇಶ್ವರ್ ಸಹ ಮಾಹಿತಿ ಹಂಚಿಕೊಂಡಿದ್ದು, ಬಾಂಬರ್ ಬಗ್ಗೆ ಸುಳಿವು ಸಿಕ್ಕಿದೆ. ಒಂದು ರೀತಿಯಲ್ಲಿ ಬಾಂಬರ್ ಯಾರು ಎಂಬ ಗುರುತು ಸಿಕ್ಕಿದೆ. ಅದನ್ನು ದೃಢಪಡಿಸಿ ಆತನನ್ನು ಹಿಡಿಯುವ ಕೆಲಸ ಆಗಬೇಕಾಗಿದೆ. ಸಿಸಿಬಿ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳು ಆತನ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.