ಬೆಳಗಾವಿ: ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೂ ಹಾಗೂ ಐಟಿ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಮೇಶ ಅವರ ಆತ್ಮಹತ್ಯೆ ಪ್ರಕರಣಕ್ಕೆ ರಾಜಕೀಯ ಥಳಕು ಹಾಕಬಾರದು ಎಂದರು.
ಈ ಹಿಂದೆ ಬಿಜೆಪಿ ನಾಯಕರ ಮೇಲೂ ಐಟಿ ದಾಳಿ ನಡೆದಿವೆ. ಸಂಶಯ ಬರುವವರ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತವೆ. ರಮೇಶ ಆತ್ಮಹತ್ಯೆಗೂ ಮತ್ತು ಐಟಿ ದಾಳಿಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ರಮೇಶ ಅವರ ಸಾವಿನ ಬಗ್ಗೆ ಸಮಗ್ರ ತನಿಖೆಯಾದ ನಂತರ ಸತ್ಯ ಹೊರಬೀಳಲಿದೆ. ಈ ಪ್ರಕರಣಕ್ಕೆ ರಾಜಕೀಯ ನಂಟು ಬೆಳೆಸದಂತೆ ಪರಮೇಶ್ವರ್ ಅವರೇ ಹೇಳಿದ್ದಾರೆ ಎಂದು ಸವದಿ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮಗಳನ್ನು ಹೊರಗಟ್ಟಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಸಂಗತಿಯನ್ನು ನಾನು ಖಂಡಿಸುವುದಿಲ್ಲ ಹಾಗೂ ಬೆಂಬಲಿಸುವುದೂ ಇಲ್ಲ ಎಂದು ಹೇಳಿ ಜಾರಿಕೊಂಡರು. ಮಾಜಿ ಶಾಸಕ ರಾಜು ಕಾಗೆ ಅವರು ನಿಗಮ ಮಂಡಳಿ ಸ್ಥಾನ ತಿರಸ್ಕರಿಸಿಲ್ಲ. ರಾಜ್ಯಮಟ್ಟದಲ್ಲಿ ಕೆಲಸ ಮಾಡಲು ಬೇರೆ ಸ್ಥಾನ ನೀಡುವಂತೆ ತಿಳಿಸಿದ್ದಾರೆ ಎಂದ ಅವರು ಬೆಳಗಾವಿ ಜಿಲ್ಲೆಯ ಬಿಜೆಪಿ ವಲಯದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು.