Advertisement
ಕಳೆದ ಒಂದು ತಿಂಗಳಿಂದ ಸಂಪುಟ ಪುನಾರಚನೆ, ಸಂಪುಟ ವಿಸ್ತರಣೆ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಶಾಸಕರ ಲಾಬಿ ನಡೆದಿರುವ ಬೆನ್ನಲ್ಲೇ ರಮೇಶ ಅವರ ಸಚಿವ ಸ್ಥಾನದ ಅವಕಾಶ ಮಹತ್ವ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ತಮ್ಮ ಆಪ್ತರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರೇಣುಕಾಚಾರ್ಯ ಅವರ ಜೊತೆ ರಮೇಶ ಚರ್ಚೆ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ.
Related Articles
Advertisement
ಇನ್ನೊಂದು ಕಡೆ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದಿದ್ದರೆ ಅವರ ಸಹೋದರ ಬಾಲಚಂದ್ರ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಸಹ ಬಲವಾಗಿ ಕೇಳಿಬಂದಿದೆ. ಬಾಲಚಂದ್ರ ಅವರು ಮನಸ್ಸು ಮಾಡಿದ್ದರೆ ಯಡಿಯೂರಪ್ಪ ಸರಕಾರದಲ್ಲಿಯೇ ಮಂತ್ರಿ ಆಗಬಹುದಿತ್ತು. ಆದರೆ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ ಅವರು, ಸಚಿವ ಸ್ಥಾನಕ್ಕಿಂತ ಪ್ರಭಾವಶಾಲಿಯಾದ ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್)ಅಧ್ಯಕ್ಷ ಸ್ಥಾನದ ಮೇಲೆ ಕಣ್ಣುಹಾಕಿದ್ದರು. ಅಷ್ಟೇ ಅಲ್ಲ ಸುಲಭವಾಗಿ ಈ ಹುದ್ದೆ ಅಲಂಕರಿಸಿದರು.
ಹೊಸ ಸಂಕಷ್ಟ: ನ್ಯಾಯಾಲಯದ ಜೊತೆಗೆ ಈಗ ರಮೇಶ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲೆಯ ನಾಯಕರ ಹೊಸ ಸಂಕಷ್ಟ ಶುರುವಾಗಿದೆ. ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ನಂತರ ಜಾರಕಿಹೊಳಿ ಸಹೋದರರ ಬಗ್ಗೆ ಅಸಮಾಧಾನಗೊಂಡಿರುವ ಜಿಲ್ಲೆಯ ಬಿಜೆಪಿ ನಾಯಕರು ಅವರನ್ನು ದೂರವಿಟ್ಟು ಸಭೆ ಮಾಡಿದ್ದಲ್ಲದೆ ಸಂಪುಟ ರಚನೆ ಸಂದರ್ಭ ಅವರಿಗೆ ಅವಕಾಶ ನೀಡಬಾರದು ಎಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಲು ಚಿಂತನೆ ನಡೆಸಿದ್ದಾರೆ. ಇದು ರಮೇಶ ಅವರಿಗೆ ಹೊಸ ತಲೆನೋವು ತಂದಿದೆ. ಉಮೇಶ ಕತ್ತಿ ಅವರ ನಿವಾಸದಲ್ಲಿ ನಡೆದ ಶಾಸಕರ ಸಭೆ ಬಿಜೆಪಿಗೆ ಹೊಸ ಸಮಸ್ಯೆ ತಂದಿಟ್ಟಿದೆ. ಅಷ್ಟೇ ಅಲ್ಲ ಇದು ಜಾರಕಿಹೊಳಿ ಸಹೋದರರು ಹಾಗೂ ಜಿಲ್ಲೆಯ ನಾಯಕರ ನಡುವಿನ ಅಂತರ ಮತ್ತಷ್ಟು ಹೆಚ್ಚಲು ಕಾರಣವಾಗಲಿದೆ. ಇದೂ ಸಹ ರಮೇಶ ಅವರ ಸಚಿವರಾಗುವ ಕನಸಿಗೆ ಅಡ್ಡಿಯಾಗಲಿದೆ ಎನ್ನಲಾಗುತ್ತಿದೆ.
ಬಾಲಚಂದ್ರ ಬದಲಾವಣೆ ಕಷ್ಟಕೆಎಂಎಫ್ ಅಧ್ಯಕ್ಷ ಸ್ಥಾನ ಬಿಡುವ ಮನಸ್ಸು ಬಾಲಚಂದ್ರ ಅವರಿಗೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಈ ಸ್ಥಾನದಿಂದ ಬದಲಾಯಿಸಿದರೆ ಮುಂದೆ ಚುನಾವಣೆಯ ಹೊಸ್ತಿಲಲ್ಲಿ ಮತ್ತೊಂದು ಹೊಸ ತಲೆನೋವು ಆರಂಭವಾಗುತ್ತದೆ ಎಂಬುದು ಸರಕಾರಕ್ಕೆ ಸಹ ಗೊತ್ತಿದೆ. ಹೀಗಾಗಿ ಅಂತಹ ಬದಲಾವಣೆಯ ಸಾಹಸಕ್ಕೆ ಸರಕಾರ ಕೈಹಾಕುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರಾಗಲು ಒಪ್ಪಿದರೆ ಆಗ ಕೆಎಂಎಫ್ ಅಧ್ಯಕ್ಷ ಗಾದಿಗೆ ಹತ್ತಾರು ಶಾಸಕರು ಪೈಪೋಟಿಗೆ ಇಳಿಯುತ್ತಾರೆ. ಹಿರಿಯ ಹಾಗೂ ಕಿರಿಯ ಶಾಸಕರ ನಡುವೆ ಸ್ಪರ್ಧೆ ಆರಂಭವಾಗುತ್ತದೆ. ಇದು ಪಕ್ಷದ ವರಿಷ್ಠರ ಮಟ್ಟಕ್ಕೂ ಹೋಗುತ್ತದೆ. ಇದರಿಂದ ಸರಕಾರ ಮತ್ತು ಪಕ್ಷ ಎರಡೂ ಇಕ್ಕಟ್ಟಿಗೆ ಸಿಲುಕುತ್ತವೆ.
ಈ ಎಲ್ಲ ಕಾರಣಗಳಿಂದ ಬಾಲಚಂದ್ರ ಅವರನ್ನು ಸಚಿವರನ್ನಾಗಿ ಮಾಡುವ ಆಸಕ್ತಿ ಸರಕಾರಕ್ಕೆ ಇಲ್ಲ. *ಕೇಶವ ಆದಿ