“ಇಬ್ಬರು ನಿರ್ದೇಶಕರು, ಇಬ್ಬರು ನಾಯಕರು, ಇಬ್ಬರು ನಿರ್ಮಾಪಕರು, ಎರಡು ಶೇಡ್ ಹೊಂದಿರುವ ಕಥೆ, ಎರಡು ಕ್ಯಾಮೆರಾಗಳು ಮತ್ತು ಎರಡು ಯೂನಿಟ್‌ಗಳು…!
-ಇದು ಎರಡರ ಗುಟ್ಟು!! ಹೌದು, ಬಹುತೇಕ ಹೊಸಬರು ಸೇರಿ ಮಾಡುತ್ತಿರುವ ಸಿನಿಮಾವೊಂದರ ಸುದ್ದಿ ಇದು. ಹೆಸರು “ರಮೇಶ್ ಸುರೇಶ್’. ಈಗಾಗಲೇ ಸದ್ದಿಲ್ಲದೆಯೇ ಮಾತಿನ ಭಾಗದ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಫೈಟ್ಸ್ ಮತ್ತು ಸಾಂಗ್ ಚಿತ್ರೀಕರಿಸಿದರೆ ಚಿತ್ರಕ್ಕೆ ಕುಂಬಳಕಾಯಿ.
ಚಿತ್ರಕ್ಕೆ ನಾಗರಾಜ್ ಮತ್ತು ರಘುರಾಜ್ ನಿರ್ದೇಶಕರು. ಬೆನಕ ಮತ್ತು ಯಶುರಾಜ್ ಹೀರೋಗಳು. ಆರ್.ಕೆ.ಟಾಕೀಸ್ ಬ್ಯಾನರ್‌ನಡಿ ಕೃಷ್ಣ ಮತ್ತು ಶಂಕರ್ ನಿರ್ಮಾಪಕರು. ಎಲ್ಲಾ ಸರಿ, ಈ ಚಿತ್ರದಲ್ಲಿ ಎಲ್ಲವೂ ಎರಡೆರೆಡು. ನಾಯಕಿ ಮಾತ್ರ ಒಬ್ಬರೇ. ಅದು ಚಂದನಾ ಸೇಗು. “ರಮೇಶ್ ಸುರೇಶ್’ ಅಂದಾಕ್ಷಣ, ಕಿರುತೆರೆಯಲ್ಲಿ ಜನಪ್ರಿಯಗೊಂಡ ಚಾಕೋಲೇಟ್ ಜಾಹಿರಾತುವೊಂದರ “ಹಾಯ್ ರಮೇಶ್ ಹಾಯ್ ಸುರೇಶ್’ ಎಂದು ಹೇಳುವ ಇಬ್ಬರು ಅವಳಿ-ಜವಳಿ ಪಾತ್ರಧಾರಿಗಳ ನೆನಪಾಗುತ್ತೆ. ಇಲ್ಲೂ ರಮೇಶ್ ಮತ್ತು ಸುರೇಶ್ ಎಂಬ ಇಬ್ಬರು ನಾಯಕರು ಮಜವೆನಿಸುವ ಪಾತ್ರಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ, ಇದೊಂದು ಪಕ್ಕಾ ಹಾಸ್ಯಮಯ ಚಿತ್ರ. ಎರಡು ಎಡಬಿಡಂಗಿ ಪಾತ್ರಗಳ ಸುತ್ತವೇ ಕಥೆ ಸಾಗುತ್ತದೆ. ಹಾಸ್ಯದ ಮೂಲಕವೇ ಒಂದು ಗಂಭೀರ ವಿಷಯದ ಕಡೆ ಕರೆದೊಯ್ಯುವ ಚಿತ್ರದಲ್ಲೊಂದು ನಿಗೂಢತೆ ಇದೆ. ಅದೇ ಚಿತ್ರದ ಹೈಲೈಟ್. ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, ಚಿತ್ರ ಬರುವವರೆಗೆ ಕಾಯಬೇಕು.
ಇನ್ನು, ಚಿತ್ರದಲ್ಲಿ ತೆಲುಗು ನಟ ಸತ್ಯಪ್ರಕಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೂ ಇಲ್ಲಿ ಎರಡು ಶೇಡ್ ಪಾತ್ರವಿದೆ. ಚಿತ್ರಕ್ಕೆ “ಕತ್ತಲೆ ಗುಡ್ಡದ ಗೂಢಾಚಾರಿಗಳು’ ಎಂಬ ಅಡಿಬರಹವಿರುವುದರಿಂದ, ಇದು ಸಸ್ಪೆನ್ಸ್- ಥ್ರಿಲ್ಲರ್ ಅಂಶಗಳ ಚಿತ್ರ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಕತ್ತಲೆಗುಡ್ಡಕ್ಕೂ ಆ ಗೂಢಾಚಾರಿಗಳಿಗು ಏನು ಸಂಬಂಧ ಎಂಬುದೇ ವಿಶೇಷ. ಇತ್ತೀಚೆಗೆ ಚಿತ್ರದ ಶೀರ್ಷಿಕೆ ಗೀತೆ ಸೇರಿದಂತೆ ಮಾತಿನ ಭಾಗ ಮುಗಿಸಿರುವ ಚಿತ್ರತಂಡ, ಬೆಂಗಳೂರಿನಲ್ಲಿ ಫೈಟ್ಸ್ ಮತ್ತು ಒಂದು ಐಟಂ ಸಾಂಗ್ ಚಿತ್ರೀಕರಿಸುವ ತಯಾರಿಯಲ್ಲಿದೆ.
ನಾಯಕ ಬೆನಕ ಇಲ್ಲಿ ಸದಾ ಜಾಲಿಯಾಗಿರುವ, ಸೋಮಾರಿ ಎನಿಸುವ ಹುಡುಗನಾಗಿ, ಕೆಲಸವಿಲ್ಲದ ಆಲೆಮಾರಿ ಪಡ್ಡೆಯಾಗಿ ಕಾಣಿಸಿಕೊಂಡರೆ, ಇನ್ನೊಬ್ಬ ನಾಯಕ ಯಶುರಾಜ್ ಕೂಡ ಮತ್ತೂಬ್ಬ ಜಾಲಿಯಾಗಿರುವ, ಸೋಮಾರಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. “ರಮೇಶ್ ಸುರೇಶ್’ ಎಂಬ ಇಬ್ಬರು ಸಹೋದರರ ಕಥೆ ಇಲ್ಲಿದೆ. ಲೈಫಲ್ಲಿ ಆಗುವಂತಹ ಬದಲಾವಣೆಗಳು ಅವರನ್ನು ಹೇಗೆಲ್ಲಾ ಆಡಿಸುತ್ತದೆ ಎಂಬುದು ಒನ್‌ಲೈನ್. ಚಿತ್ರದಲ್ಲಿ ಮಾಸ್ಟರ್ ರಕ್ಷಿತ್, ವನಿತಾ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರು ನಟಿಸುತ್ತಿದ್ದಾರೆ. ಪ್ರಮೋದ್ ಮಾತುಗಳನ್ನು ಪೋಣಿಸಿದರೆ, ನವನೀತ್ ಸಂಗೀತವಿದೆ. ಒಟ್ನಲ್ಲಿ ಎರಡರ ನಂಟಲ್ಲಿ ಹೊಸದೊಂದು “ಗಂಟು’ ತೋರಿಸುವ ಮೂಲಕ ನೋಡುಗರಿಗೆ ಪಕ್ಕಾ ಮನರಂಜನೆ ಕೊಡುವ ಉದ್ದೇಶವಿದೆ ಎಂಬುದು ಚಿತ್ರತಂಡದ ಮಾತು.