Advertisement
“ವೀಕೆಂಡ್ ವಿಥ್ ರಮೇಶ್’ನ ಮೊದಲ ಸೀಸನ್‌ನಲ್ಲಿ ಕಲಿತರಂತೆ ರಮೇಶ್ ಅರವಿಂದ್.
Related Articles
Advertisement
“ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವರ ಜೊತೆಗೆಲ್ಲಾ ಕ್ಲೋಸ್ ಆಗುತ್ತಿದ್ದೀನಿ. ಎರಡು ಎಪಿಸೋಡುಗಳ ಚಿತ್ರೀಕರಣ ಎಂದರೆ ಎಂಟರಿಂದ ಒಂಬತ್ತು ಗಂಟೆ ಜೊತೆಯಾಗಿರಬೇಕು. ಅಷ್ಟೊಂದು ಸಮಯವನ್ನು ನಾನು ಅವರ ಜೊತೆಗೆ ಈ ಹಿಂದೆ ಕಳೆದಿರಲಿಲ್ಲ. ಈ ಕಾರ್ಯಕ್ರಮದ ಮೂಲಕ ಅದು ಸಾಧ್ಯವಾಯಿತು. ಇಲ್ಲಿ ನಮ್ಮಿಬ್ಬರ ಮಧ್ಯೆ ಒಂದು ಕನೆಕ್ಷನ್ ಸಾಧ್ಯವಾಗುತ್ತದೆ. ಇಲ್ಲಿ ಜನರಿದ್ದರೂ, ಮಾತುಕಥೆ ಆಗುವುದು ಹೆಚ್ಚಾಗಿ ನಮ್ಮ ಮಧ್ಯೆಯೇ. ಹಾಗೆ ಚೇರ್ ಮೇಲೆ ಕೂರುವವರ ಮೇಲೆ ಗೌರವ ಹೆಚ್ಚಾಗುತ್ತಿದೆ. ಅವರ ಶೂನೊಳಗೆ ಕಾಲು ಹಾಕಿ ನಿಂತು, ಜಗತ್ತನ್ನು ನೋಡುವ ಅವಕಾಶ ಇಲ್ಲಿ ಸಿಗುತ್ತದೆ’ ಎನ್ನುತ್ತಾರೆ ರಮೇಶ್.
ಅದರ ಜೊತೆಗೆ, ಕಲಾವಿದರ ಎಮೋಷನ್‌ಗಳನ್ನು ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಯಿತಂತೆ ರಮೇಶ್‌ಗೆ. ಸಾಮಾನ್ಯವಾಗಿ ಹೀರೋಗಳು ಫಾರಿನ್ ಶೂಟಿಂಗ್‌ಗೆ ಹೋದರೆ, ಅವರೆಲ್ಲಾ ಮಜಾ ಮಾಡುವುದಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಜನರಲ್ಲಿ ಇದೆ. ಆದರೆ, ಹಾಗಿರುವುದಿಲ್ಲ. ನಾವು ಅಲ್ಲಿಗೆ ಹೋದರೂ ಇಲ್ಲಿಯ ಬಗ್ಗೆ, ಮನೆಯ ಬಗ್ಗೆ ಯೋಚಿಸುತ್ತಲೇ ಇರುತ್ತೇವೆ. “ತೆನಾಲಿ ರಾಮ’ ಚಿತ್ರೀಕರಣ ಸಂದರ್ಭದಲ್ಲಿ ಒಮ್ಮೆ ಜಗ್ಗೇಶ್ ಮತ್ತು ನಾನು ಫಾರಿನ್‌ಗೆ ಹೋದಾಗ, ಅಲ್ಲೊಂದು ವ್ಹೀಲ್ ಚೇರ್ ನೋಡಿದ್ದರು. ಅದು ತಮ್ಮ ತಂದೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಅದನ್ನು ತಗೊಂಡಿದ್ದರು. ಈಗ ಅವರ ತಂದೆ ಇಲ್ಲ. ಅವರ ತಂದೆ ತೀರಿ ಹೋದ ಮೇಲೆ, ಒಮ್ಮೆಯೂ ನೋಡಿರಲಿಲ್ಲವಂತೆ. “ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ಆ ವ್ಹೀಲ್ ಚೇರನ್ನು ಮನೆಯಿಂದ ತರಿಸಿ ಜಗ್ಗೇಶ್ ಅವರೆದುರು ಇಟ್ಟಾಗ, ಅವರೆಷ್ಟು ಎಮೋಷನಲ್ ಆದರು ಗೊತ್ತಾ? ಕ್ಯಾಮೆರಾಗೆ ಬೆನ್ನು ಹಾಕಿ ಅಳುತ್ತಾ ಕುಳಿತುಬಿಟ್ಟರು. ಕೆಲವು ನಿಮಿಷಗಳ ಕಾಲ ಏನೂ ಮಾಡೋಕೆ ತೋಚಲಿಲ್ಲ. ಕ್ರಮೇಣ ಸಹಜ ಸ್ಥಿತಿಗೆ ಬಂದರು …’ ರಮೇಶ್ ಅವರ ಮುಖದಲ್ಲೂ ಬೇಸರವಿತ್ತು.
ಈ “ವೀಕೆಂಡ್ ವಿಥ್ ರಮೇಶ್’ ಏನು? ಜನರ ಮೇಲೆ ಅದು ಮಾಡಿರುವ ಪರಿಣಾಮವೇನು? ಜನರಿಗೆ ಅದರಿಂದ ಇರುವ ನಿರೀಕ್ಷೆಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದರಂತೆ ರಮೇಶ್. ಕೊನೆಗೆ ಸಿಕ್ಕ ಉತ್ತರವನ್ನೂ ಅವರು ವಿವರಿಸಿದರು. “ಯಶಸ್ಸು ಅನ್ನೋದು ಮೆಟ್ಟಿಲು. ಅದು ಮಹಡಿ ಅಲ್ಲ. ಹಲವು ಮೆಟ್ಟಿಲುಗಳು ಸೇರಿದರೆ ಒಂದು ಮಹಡಿ ಆಗುತ್ತದೆ. ನಿಮ್ಮ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ಕೊಡಲಾಗುತ್ತದೆ. ಅದನ್ನು ಚೆನ್ನಾಗಿ ನಿಭಾಯಿಸಿದರೆ, ನಿಮ್ಮ ಮೇಲೆ ನಂಬಿಕೆಯೂ ಹೆಚ್ಚುತ್ತದೆ, ನಿಮಗೆ ಜವಾಬ್ದಾರಿಯೂ ಜಾಸ್ತಿಯಾಗುತ್ತದೆ. ಯಶಸ್ಸು ಅನ್ನೋದನ್ನು ಕಟ್ಟೋದು ಈ ನಂಬಿಕೆಗಳ ಪದರವೇ. ಬೇರೆ ಬೇರೆ ವ್ಯಕ್ತಿಗಳು ಹೇಗೆ ಈ ನಂಬಿಕೆಗಳ ಪದರ ಕಟ್ಟಿದರು ಮತ್ತು ಹೇಗೆ ಹೊಸ ಜವಾಬ್ದಾರಿಗಳನ್ನು ಸ್ವೀಕರಿಸಿ ಯಶಸ್ವಿಯಾದರು ಅನ್ನೋದು ಮುಖ್ಯ. ಅಂತಹ ಬೇರೆ ಬೇರೆ ವ್ಯಕ್ತಿಗಳ ಬದುಕನ್ನು ಎರಡೂವರೆ ಕಟ್ಟಿ ಕೊಡುವ ಪ್ರಯತ್ನವನ್ನು ಈ ಕಾರ್ಯಕ್ರಮದಲ್ಲಿ ಮಾಡುವುದಕ್ಕೆ ಹೊರಟಿದ್ದೇವೆ. ನನಗನಿಸೋದೇನೆಂದರೆ, ಯಶಸ್ಸಿಗೆ ಹಲವು ದಾರಿಗಳಿವೆ. ಅದು ಹೈವೆ ಅಲ್ಲ. ಎಲ್ಲರೂ ತಮ¤ಮ್ಮ ದಾರಿಯಲ್‌ಲಿ ಹೋಗಿ ಯಶಸ್ವಿಯಾಗುತ್ತಾರೆ. ಅದು ಮುಖ್ಯ’ ಎನ್ನುತ್ತಾರೆ ಅವರು.
ಪ್ರಮುಖವಾಗಿ ಜೀವನ ಅನ್ನೋದು ಸುಲಭವಲ್ಲ, ಸುಂದರ ಅನ್ನೋದನ್ನ ಹೇಳುವ ಪ್ರಯತ್ನ ಇದು ಎನ್ನುತ್ತಾರೆ ರಮೇಶ್. “ಈ ಕಾರ್ಯಕ್ರಮದಲ್ಲಿ ಅಂತಹ ಬ್ಯೂಟಿಯನ್ನು ಸಂಭ್ರಮಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮದೆಲ್ಲರದ್ದೂ ಒಂದು ಜೀವನ. ಆದರೆ, ಒಂದು ಜೀವನದ ಹಿಂದೆ ನೂರಾರು ಜನರ ಜೀವನ ಇದೆ. ಅವರೆಲ್ಲರೂ ಇದ್ದರೆ ಇದು. ಹಾಗಾಗಿ ಅವರೆಲ್ಲರೂ ಸೇರಿದರೆ ಮಾತ್ರ ಒಂದು ಫ್ಯಾಮಿಲಿ ಫೋಟೋ ಆಗುತ್ತದೆ’ ಎನ್ನುವುದು ರಮೇಶ್ ಅವರ ಅಭಿಪ್ರಾಯ.
ಬರೀ ಸೆಲೆಬ್ರಿಟಿಗಳಷ್ಟೇ ಅಲ್ಲ, ಸಾಮಾನ್ಯ ಜನರನ್ನೂ ಆ ಚೇರ್ ಮೇಲೆ ಕೂರಿಸಬೇಕು ಎನ್ನುವುದು ರಮೇಶ್ ಅವರ ಆಸೆ. “ಇಲ್ಲಿ ಸೈನಿಕ, ರೈತ, ಟೀಚರ್ ಎಲ್ಲರೂ ಕೂರಬೇಕು ಅಂತ ಆಸೆ. ಹಾಗಾಗಿ ನಿಮ್ಮ ಸುತ್ತಮುತ್ತ ಸಾಧಕರಿದ್ದರೆ ಕಳಿಸಿ ಎಂದು ಈ ಬಾರಿ ಕ್ಯಾಂಪೇನ್ ಮಾಡುವ ಯೋಚನೆ ಇತೆ. ಆದರೆ, ಇಲ್ಲಿ ಟಿಆರ್‌ಪಿ ಸಮಸ್ಯೆ ಇದೆ. ಒಬ್ಬ ಸೆಲೆಬ್ರಿಟಿ ಎಪಿಸೋಡ್‌ಗೆ ಬರುವ ಟಿಆರ್‌ಪಿ, ಸಾಮಾನ್ಯ ಮನುಷ್ಯರ ಎಪಿಸೋಡ್‌ಗೆ ಬರುವುದಿಲ್ಲ. ಹಾಗಾಗಿ ಒಬ್ಬ ಹೀರೋ ಎಪಿಸೋಡ್‌ನ ನೋಡುವ ಹಾಗೆಯೇ, ಸಾಮಾನ್ಯ ಜನರ ಎಪಿಸೋಡನ್ನು ಅದೇ ಪ್ರೀತಿ ಮತ್ತು ಸಂಖ್ಯೆಯಲ್ಲಿ ನೋಡಿದರೆ, ಇನ್ನಷ್ಟು ಯಶಸ್ವಿಯಾಗುತ್ತದೆ. ಈ ಕುರಿತು ಪ್ರಯತ್ನ ಮುಂದುವರೆದಿದೆ’ ಎನ್ನುತ್ತಾರೆ ರಮೇಶ್.
ಮಾತು ಮುಗಿಸುವ ಮುನ್ನ, ರಮೇಶ್ ಒಂದು ಮಾತು ಮರೆಯದೇ ಹೇಳುತ್ತಾರೆ. “ಹಲವು ಜನರ ಕಥೆಗಳ ಮೂಲಕ ಜನರನ್ನು ಇನ್‌ಸ್ಪೈರ್ ಮಾಡುವ ಪ್ರಯತ್ನ ಈ ಕಾರ್ಯಕ್ರಮದಲ್ಲಿ ಆಗಬೇಕು ಅಂತಾಸೆ. ಇದು ಪ್ರೀತಿಯಿಂದ, ಖುಷಿಯಿಂದ ರಮೇಶ್ ಆಗಬೇಕು ಎಂದು ನಾನು ನಿರೀಕ್ಷಿಸುತ್ತಿಲ್ಲ. ಸ್ಫೂರ್ತಿಯಿಂದ ರಮೇಶ್ ಆಗಬೇಕು ಅಂತ ಆಸೆ. ಬೇರೇನಲ್ಲದಿದ್ದರೂ, ಪ್ರಯತ್ನ ಮಾಡುತ್ತೀನಿ ಎಂದರೂ ಸಾಕು, ನಮ್ಮ ಶ್ರಮ ಸಾರ್ಥಕ’ ಎಂದು ಹೇಳುತ್ತಲೇ, ಕಾರ್ಯಕ್ರಮದ ಮೂರನೆಯ ಕಂತಿನ ಚಿತ್ರೀಕರಣಕ್ಕೆ ಅಣಿಯಾದರು ರಮೇಶ್.
– ಚೇತನ್ ನಾಡಿಗೇರ್