Advertisement

ಶೃಂಗೇರಿ ನ್ಯಾಯಾಲಯದ ಆವರಣದಲ್ಲಿ  ನಕ್ಸಲ್‌ ಪರ ಘೋಷಣೆ ಕೂಗಿದ ‌ರಮೇಶ್‌

11:43 AM Jul 04, 2017 | Team Udayavani |

ಶೃಂಗೇರಿ: ನಕ್ಸಲ್‌ ಚಟುವಟಿಕೆ ಆರೋಪದಡಿ ಬಂಧಿತರಾಗಿರುವ ರಮೇಶ್‌, ಕನ್ಯಾಕುಮಾರಿ ಹಾಗೂ ನಿಲಗುಳಿ
ಪದ್ಮನಾಭ ಅವರನ್ನು ವಿಚಾರಣೆಗಾಗಿ ಸೋಮವಾರ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ
ಸಂದರ್ಭದಲ್ಲಿ ರಮೇಶ್‌, ನಕ್ಸಲ್‌ ಪರ ಘೋಷಣೆ ಕೂಗಿದ ಘಟನೆಯೂ ನಡೆದಿದೆ.

Advertisement

ಪೊಲೀಸ್‌ ಬಿಗಿ ಬಂದೋಬಸ್ತ್ನಲ್ಲಿ ನ್ಯಾಯಾಲಯದ ಆವರಣದಲ್ಲಿ ಬಂದಿಳಿಯುತ್ತಿದ್ದಂತೆ ಆರೋಪಿ ರಮೇಶ್‌, ನಕ್ಸಲ್‌ ಪರ ಘೋಷಣೆ ಕೂಗಲಾರಂಭಿಸಿದ. ನ್ಯಾಯಾಲಯದ ಆವರಣದಲ್ಲಿ ಘೋಷಣೆ ಕೂಗದಂತೆ ಪೊಲೀಸರು ಎಚ್ಚರಿಕೆ 
ನೀಡಿದರೂ ರಮೇಶ್‌ ಅದನ್ನು ಲೆಕ್ಕಿಸಲಿಲ್ಲ. ವಿಚಾರಣೆ ಮುಗಿದ ಬಳಿಕ ನ್ಯಾಯಾಲಯದಿಂದ ಹೊರ ಬರುತ್ತಿದ್ದಂತೆ ಮತ್ತೆ ಘೋಷಣೆ ಕೂಗುವುದನ್ನು ಮುಂದುವರಿಸಿದ. ಅಲ್ಲದೆ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದ. ಕನ್ಯಾಕುಮಾರಿ ತನ್ನ ಮಗಳು ಗೆಲುವು ಜೊತೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಳು. ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ಗೌತಮ್‌ ಅವರು ಪ್ರಕರಣದ ವಿಚಾರಣೆಯನ್ನು ಜು. 17ಕ್ಕೆ ಮುಂದೂಡಿದ್ದಾರೆ.

ಏನೇನು ಪ್ರಕರಣ?: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ 2000ನೇ ಇಸ್ವಿಯಿಂದ ಆರಂಭಗೊಂಡ ನಕ್ಸಲ್‌ ಚಟುವಟಿಕೆ 2014ರವರೆಗೂ ಚುರುಕಾಗಿತ್ತು. ಈ ಸಂದರ್ಭದಲ್ಲಿ ಅನೇಕ ಹಿಂಸಾಕೃತ್ಯಗಳು ನಡೆದಿದ್ದವು. ದಟ್ಟಾರಣ್ಯದಲ್ಲಿ ಅಡಗಿಕೊಂಡಿದ್ದ ನಕ್ಸಲರು, ಕಾನೂನುಬಾಹಿರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದರು. ತನಿಕೋಡು ಗೇಟ್‌ ಧ್ವಂಸ ಪ್ರಕರಣ, ಕೆಸಮುಡಿ ವೆಂಕಟೇಶ್‌ ಹತ್ಯೆ, ಅರಣ್ಯ ಇಲಾಖೆ ಪ್ರವಾಸಿ ಮಂದಿರ ಸ್ಫೋಟ, ಮಗೇಬೈಲು ಪೊಲೀಸ್‌ ಸಿಬ್ಬಂದಿಯ ಬಂದೂಕು ಅಪಹರಣ ಸೇರಿದಂತೆ ರಮೇಶ್‌, ನಿಲಗುಳಿ ಪದ್ಮನಾಭ ಹಾಗೂ ಕನ್ಯಾಕುಮಾರಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಕನ್ಯಾಕುಮಾರಿ ಒಬ್ಬಳ ಮೇಲೆಯೇ 13 ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳ ವಿಚಾರಣೆಗಾಗಿ ಆರೋಪಿಗಳನ್ನು ಸೋಮವಾರ ಶೃಂಗೇರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next