Advertisement

ಸಿಎಂ ಮಾಡಿದರೂ ರಮೇಶ ಪಕ್ಷಕ್ಕೆ ಮರಳಲ್ಲ: ಸತೀಶ ವ್ಯಂಗ್ಯ

11:55 PM Jul 13, 2019 | Team Udayavani |

ಬೆಳಗಾವಿ: ರಮೇಶ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಅಲ್ಲ, ಪ್ರಧಾನಿ ಮಾಡಿದರೂ ಅವರು ಪಕ್ಷಕ್ಕೆ ಮರಳುವುದಿಲ್ಲ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಸಮ್ಮಿಶ್ರ ಸರಕಾರದಲ್ಲಿ ಗೊಂದಲ ಆರಂಭವಾಗಿದ್ದೇ ಬೆಳಗಾವಿಯಿಂದ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಗೊಂದಲ ನಿವಾರಿಸಲು ನಾವು ಪ್ರಯತ್ನ ಮಾಡುತ್ತಿದ್ದು, ಎಲ್ಲವೂ ನಿವಾರಣೆಯಾಗುವ ವಿಶ್ವಾಸವಿದೆ ಎಂದರು.

ರಮೇಶ ಜಾರಕಿಹೊಳಿ “ಒಂದು ವಸ್ತು’ವನ್ನು ಕಳೆದುಕೊಂಡಿದ್ದಾರೆ. ಅದು ಇನ್ನೂ ಸಿಕ್ಕಿಲ್ಲ. ಆದ್ದರಿಂದಲೇ ಇಷ್ಟೆಲ್ಲಾ ಗದ್ದಲ ನಡೆದಿದೆ. “ಆ ವಸ್ತು’ ಸಿಗುತ್ತದೆಯೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹಿಂದಿನ ಮಾರ್ಮಿಕ ಹೇಳಿಕೆಯನ್ನೇ ಮತ್ತೂಮ್ಮೆ ಒತ್ತಿ ಹೇಳಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ಸಮ್ಮಿಶ್ರ ಸರಕಾರದ ಎರಡು ಕಣ್ಣುಗಳಿದ್ದ ಹಾಗೆ. ನಮಗೆ ವಿಶ್ವಾಸಮತದ ಭಯವಿಲ್ಲ. ನಾವೂ ಸರಕಾರವನ್ನು ಉಳಿಸಿಕೊಳ್ಳುತ್ತೇವೆ ಎಂದರು.

ರಮೇಶ ವಿರುದ್ಧ ಸ್ಪರ್ಧೆ ಮಾಡಲ್ಲ: ಒಂದು ವೇಳೆ, ರಮೇಶ ಜಾರಕಿಹೊಳಿ ಅವರಿಂದ ಸ್ಥಾನ ತೆರವಾಗಿ ಗೋಕಾಕ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ನಾನು ಅಲ್ಲಿಂದ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ, ಅಲ್ಲಿಂದ ಲಖನ್‌ ಜಾರಕಿಹೊಳಿ ಸ್ಪರ್ಧೆ ಮಾಡುತ್ತಾರೆ.

Advertisement

ಲಖನ್‌ ಈಗಾಗಲೇ ಗೋಕಾಕ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಅವರು ಓಡಾಡಿದ್ದಾರೆ. ರಮೇಶ ಇಲ್ಲಿಂದ ಯಾರನ್ನೇ ಕಣಕ್ಕಿಳಿಸಿದರೂ ನಮಗೆ ಚಿಂತೆ ಇಲ್ಲ ಎಂದರು.

ರಾಜಕೀಯದಲ್ಲಿ ಅಣ್ಣ-ತಮ್ಮಂದಿರು ಎನ್ನುವುದಕ್ಕಿಂತ ನಮಗೆ ಪಕ್ಷ ಮುಖ್ಯ. ಗೋಕಾಕ ಉಪಚುನಾವಣೆಯಲ್ಲಿ ಸಹೋದರರ ನಡುವೆ ಸ್ಪರ್ಧೆ ಖಚಿತ. ರಮೇಶ ಅವರು ಚುನಾವಣೆಯಲ್ಲಿ ತಮ್ಮ ಪತ್ನಿ ಇಲ್ಲವೇ ಅಳಿಯ ಅಂಬಿರಾವ್‌ ಅವರನ್ನು ನಿಲ್ಲಿಸಿದರೂ ನಮ್ಮಿಂದ ಲಖನ್‌ ಸ್ಪರ್ಧೆ ಮಾಡುತ್ತಾರೆ. ತಮ್ಮ ಮೂವರು ಅಳಿಯಂದಿರಿಗಾಗಿ ರಮೇಶ ರಾಜೀನಾಮೆ ಕೊಟ್ಟಿದ್ದು ನಿಜ ಎಂದರು.

ಯಾರು ಏನೇ ಹೇಳಿದರೂ ರಮೇಶಗೆ ತಮ್ಮ ಅಳಿಯನ ಮೇಲಿನ ಪ್ರೀತಿ ಹೋಗುವುದಿಲ್ಲ. ಈಗಾಗಲೇ ಬಹಳಷ್ಟು ಜನ ಅಂಬಿರಾವ ಪಾಟೀಲನೇ ಮುಂದಿನ ಎಂಎಲ್‌ಎ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಸತೀಶ ಸಹೋದರನ ಕಾಲೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next