Advertisement
ಈಗಾಗಲೇ ಸುಧಾಕರ್ ಶಾಸಕ ಸ್ಥಾನದಿಂದ ಅನರ್ಹ ನಂತರ ಕಾಂಗ್ರೆಸ್ ಪಕ್ಷದಿಂದಲೂ ಕೂಡ ವಜಾಗೊಂಡಿದ್ದಾರೆ. ಹೀಗಾಗಿ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ತೀವ್ರ ಪ್ರತಿಷ್ಠೆಯಾಗಿದ್ದು, ಈ ನಿಟ್ಟಿನಲ್ಲಿ ಉಪ ಚುನಾವಣೆಯಲ್ಲಿ ಸುಧಾಕರ್‌ರನ್ನು ಮಣಿಸಲು ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿರುವ ನಾಯಕರು, ಕ್ಷೇತ್ರಕ್ಕೆ ಭೇಟಿ ಕೊಟ್ಟಿರುವುದು ಸಹಜವಾಗಿಯೇ ರಾಜಕೀಯ ವಲಯದಲ್ಲಿ ಸಂಚಲನ ತಂದಿದೆ.
Related Articles
Advertisement
ಜಿ.ಎಚ್.ನಾಗರಾಜ್ ಪುತ್ರ ವಿನಯ್ ಶ್ಯಾಮ್‌ರನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸುವ ಚಿಂತನೆ ನಡೆದಿದ್ದು, ಇದಕ್ಕೆ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಅಹಿಂದ ನಾಯಕರಾಗಿರುವ ಆರ್.ಎಲ್.ಜಾಲಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ರಾಜಕೀಯ ಸಂಬಂಧ ಕಾರಣ ಎನ್ನಲಾಗುತ್ತಿದೆ.
ಒಗ್ಗಟ್ಟು ಪ್ರದರ್ಶಿಸಿದ ಕೈ ನಾಯಕರು: ರಮೇಶ್ ಕುಮಾರ್ ಹಾಗೂ ಎನ್.ಹೆಚ್.ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರಕ್ಕೆ ಭೇಟಿ ವೇಳೆ ಕ್ಷೇತ್ರದ ಕಾಂಗ್ರೆಸ್ ನಾಯಕರು ತಮ್ಮ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಎರಡನೇ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಲು ಶ್ರಮಿಸಿದ ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಎಂ.ಶಿವಾನಂದ್, ಹಿರಿಯ ಮುಖಂಡರಾದ ಯಲುವಹಳ್ಳಿ ರಮೇಶ್, ಜಿ.ಆರ್.ಶ್ರೀನಿವಾಸ್, ಎಸ್.ವೈ.ಮರಿಯಪ್ಪ, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್ ಮತ್ತಿತರ ಘಟಾನುಘಟಿ ನಾಯಕರು ಉಪಸ್ಥಿತರಿದ್ದು ತಮ್ಮ ಒಗ್ಗಟ್ಟನ್ನು ನಾಯಕರ ಮುಂದೆ ಪ್ರದರ್ಶಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಅವರ ಪರ ಕೆಲಸ ಮಾಡಿ ಗೆಲ್ಲಿಸುತ್ತೇವೆಂಬ ಅಭಯ ನೀಡಿದ್ದಾರೆ. ಒಟ್ಟಿನಲ್ಲಿ ಡಾ.ಕೆ.ಸುಧಾಕರ್ ಶಾಸಕ ಸ್ಥಾನದಿಂದ ಅನರ್ಹಗೊಂಡ ಬಳಿಕ ಅವರ ರಾಜಕೀಯ ಭವಿಷ್ಯದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದ್ದು, ರಾಜಕೀಯ ಭವಿಷ್ಯ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಇದರ ನಡುವೆಯೇ ಎದುರಾಗುವ ಉಪ ಚುನಾವಣೆಯಲ್ಲಿ ಸುಧಾಕರ್‌ರನ್ನು ರಾಜಕೀಯವಾಗಿ ಮಣಿಸಲು ಈಗ ರಮೇಶ್ ಕುಮಾರ್ ಹಾಗೂ ಗೌರಿಬಿದನೂರು ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವುದು ಚರ್ಚೆಗೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.
ರಮೇಶ್ ಕುಮಾರ್ ಹಿಂದೆ ಸುಧಾಕರ್ ಆಪ್ತರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಡಾ.ಕೆ.ಸುಧಾಕರ್ ಪರ ಗುರುತಿಸಿಕೊಂಡಿದ್ದ ಬಹುತೇಕ ಹಿರಿಯ ಕಾಂಗ್ರೆಸ್ ನಾಯಕರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಿಂದೆ ಕಾಣಿಸಿಕೊಂಡು ಗಮನ ಸೆಳೆದರು. ಮುಖ್ಯವಾಗಿ ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಎಂ.ಶಿವಾನಂದ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಪುರದಗಡ್ಡೆ ಕೃಷ್ಣಪ್ಪ, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಎಸ್.ವೈ.ಮರಿಯಪ್ಪ ಹಾಗೂ ರಾಜಕೀಯ ಚಟುವಟಿಕೆಗಳಿಂದ ದೂರ ಇದ್ದ ಹಿರಿಯ ಕಾಂಗ್ರೆಸ್ ಮುಖಂಡರಾದ ಮಾಜಿ ಸಂಸದ ಆರ್.ಎಲ್.ಜಾಲಪ್ಪ ಭಾಮೈದ ಜಿ.ಎಚ್.ನಾಗರಾಜ್. ಅವರ ಪುತ್ರ ವಿನಯ್ ಶ್ಯಾಮ್ ಮತ್ತಿತರರು ಇದ್ದು ಗಮನ ಸೆಳೆದರು.
ಸುಧಾಕರ್ ಆಪ್ತರ ಮನೆಯಲ್ಲಿ ರಮೇಶ್ ಕುಮಾರ್‌ಗೆ ಊಟ: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಡಾ.ಕೆ.ಸುಧಾಕರ್‌ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಂದಿಯ ಮಾಜಿ ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್‌ರ ಮನೆಯಲ್ಲಿ ರಮೇಶ್ ಕುಮಾರ್ ಸೇರಿದಂತೆ ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ, ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಎಂ.ಶಿವಾನಂದ ಮತ್ತಿತರ ಅನೇಕ ಕಾಂಗ್ರೆಸ್ ಮುಖಂಡರು, ನಾಯಕರು, ಕಾರ್ಯಕರ್ತರ ದಂಡು ವಿವಿಧ ದೇವಾಲಯಗಳ ದರ್ಶನ ಪಡೆದ ಬಳಿಕ ಜಿ.ಆರ್.ಶ್ರೀನಿವಾಸ್ ಮನೆಗೆ ಭೇಟಿ ಕೊಟ್ಟು ಊಟ ಸವಿದರು.
* ಕಾಗತಿ ನಾಗರಾಜಪ್ಪ