ಶಿವಮೊಗ್ಗ: ವಿಧಾನಸಭಾಧ್ಯಕ್ಷ ರಮೇಶಕುಮಾರ್ ಅವರು ಆಡಳಿತ ಪಕ್ಷದ ಕೈಗೊಂಬೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನ ಬಗ್ಗೆ ತಿಳಿದುಕೊಂಡಿರುವ ರಮೇಶ್ ಕುಮಾರ್ ತುಂಬಾ ಬುದ್ಧಿವಂತರು. ಹೀಗಾಗಿ, ಕಾನೂನನ್ನು ದುರುಪಯೋಗ ಮಾಡಿಕೊಳ್ಳುವ ಜ್ಞಾನವೂ ಅವರಿಗಿದೆ. ಕಾನೂನಿನ ಹೆಸರಲ್ಲಿ ತಮ್ಮ ಬುದ್ಧಿವಂತಿಕೆ ಉಪಯೋಗಿಸಿ ದಿನ ದೂಡುತ್ತಿದ್ದಾರೆ ಎಂದರು.
ಕಾಂಗ್ರೆಸ್, ಜೆಡಿಎಸ್‌ನ ಪ್ರಾಮಾಣಿಕ ಶಾಸಕರಿಗೆ ಮೈತ್ರಿ ಸರಕಾರದ ಬಗ್ಗೆ ಅಸಮಾಧಾನ ಇದೆ. ಈ ಸರಕಾರದ ಜತೆ ಹೋದರೆ ಜನರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ ಎಂಬ ಭಾವನೆ ಇದೆ. ಅದಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಸಭಾಧ್ಯಕ್ಷರು ಸುಪ್ರಿಂಕೋರ್ಟ್ ಆದೇಶ ನೀಡಿದ್ದರೂ ಕಾನೂನು ಅಸ್ತ್ರ ಬಳಸಿ ಮೈತ್ರಿ ಸರಕಾರ ಉಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜೀನಾಮೆ ನೀಡಿದ್ದ ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ಡಾ|ಸುಧಾಕರ್ ಅವರ ಮನವೊಲಿಸಲಾಗಿದೆ ಎನ್ನಲಾಗುತ್ತಿದೆ. ಎಂಟಿಬಿ ಅವರು ಸಿದ್ದರಾಮಯ್ಯನವರು ಸಿಎಂ ಆದರೆ ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ. ಒಂದು ನಿರ್ಣಯ ನೀಡದೆ ಸಮಯ ತೆಗೆದುಕೊಂಡರೆ ಈ ರೀತಿಯ ಗೊಂದಲ ಸೃಷ್ಟಿಸಬಹುದು ಎಂಬುದು ಮೈತ್ರಿ ಪಕ್ಷಗಳ ಲೆಕ್ಕಾಚಾರ.
ಇದೇ ಕಾರಣಕ್ಕೆ ರಮೇಶ್ ಕುಮಾರ್ ಮುಖಾಂತರ ಗೊಂದಲ ಮೂಡಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಆದರೆ, ಯಾವುದೇ ಕುತಂತ್ರ ಮಾಡಿದರೂ ಈ ಸರಕಾರ ಉಳಿಯಲ್ಲ ಎಂಬ ವಿಶ್ವಾಸ ನನಗಿದೆ. ಯಾವುದೇ ಕಾರಣಕ್ಕೂ ವಿಶ್ವಾಸಮತ ಗಳಿಸುವಲ್ಲಿ ಸಿಎಂ ಯಶಸ್ವಿಯಾಗಲ್ಲ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾ.ರಾ.ಮಹೇಶ್ ಭೇಟಿ ಆಕಸ್ಮಿಕ: ಸಚಿವ ಸಾ.ರಾ.ಮಹೇಶ್ ಭೇಟಿ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, “ನನ್ನ, ಅವರ ಭೇಟಿ ಆಕಸ್ಮಿಕ. ಶಿವಮೊಗ್ಗದ ಕಲ್ಲಹಳ್ಳಿ ದೇವಸ್ಥಾನಕ್ಕೆ ಅನುದಾನ ಕೇಳಿದ್ದೇವು. ಯಾಕಪ್ಪ ಕೊಡಲ್ವ ಎಂದು ಕೇಳಿದ್ದೇನೆ. ಕೊಡ್ತೀನಿ ಅಂದಿದ್ದಾರೆ’ ಎಂದರು.
ಆದರೆ ದೃಶ್ಯ ಮಾಧ್ಯಮದವರು ಅದನ್ನೇ ಅರ್ಧಗಂಟೆ ಎಪಿಸೋಡ್ ಮಾಡೋದಾ? ನಿಮಗೆ ಟಿಆರ್‌ಪಿ ಬೇಕು. ನನ್ನಿಂದಲೇ ನಿಮಗೆ ಟಿಆರ್‌ಪಿ ಬರುತ್ತದೆ ಎಂದರೆ ನನಗೂ ಸಂತೋಷ ಎಂದರು.