ಬೆಳಗಾವಿ: ನಮ್ಮಣ್ಣ ಉಮೇಶ ಕತ್ತಿ ಡೈಮಂಡ್ ಇದ್ದಂತೆ. ಅವರಿಗೆ ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಲ ಬಿಜೆಪಿ ಸರ್ಕಾರ ರಚನೆಯಾಗಲು 17 ಮಂದಿ ಹೊರಗಿನಿಂದ ಬಂದವರೇ ಕಾರಣ. ಅವರಿಗೆ ಅವಕಾಶ ನೀಡಿದ್ದರಿಂದ ನಮ್ಮಣ್ಣ ತ್ಯಾಗ ಮಾಡಿದ್ದಾರೆ. ಪಕ್ಷ ನಮಗೆ ಇಷ್ಟೆಲ್ಲ ಕೊಟ್ಟಾಗ ನಾವೂ ಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ. ಮುಂದಿನ ಸಂಪುಟ ವಿಸ್ತರಣೆ ವೇಳೆ ವರಿಷ್ಠರು ನಮ್ಮಣ್ಣನಿಗೆ ಸೂಕ್ತ ಸ್ಥಾನಮಾನ ನೀಡಲಿದೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎನ್ನುವುದು ನನ್ನ ಒತ್ತಾಯ. ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ಗೆಲ್ಲಿಸಲು ಎಲ್ಲರೂ ಕೆಲಸ ಮಾಡುತ್ತೇವೆ. ಪಕ್ಷದವರು ಪರ್ಯಾಯದ ಬಗ್ಗೆ ಯೋಚಿಸುವುದಾದರೆ, ಆ ವೇಳೆ ಪಕ್ಷದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಅಕ್ರಮ ಡ್ರಗ್ಸ್ ಸಂಗ್ರಹ ಆರೋಪ : ಆಸ್ಟ್ರೇಲಿಯನ್ ಪ್ರಜೆ ಬಂಧನ
ಬಳಿಕ ಉಮೇಶ ಕತ್ತಿ ಮಾತನಾಡಿ, ನನ್ನ ಅನುಭವ ಹಾಗೂ ಯೋಗ್ಯತೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುತಿಸುತ್ತಾರೆ. ಸಂಪುಟದಲ್ಲಿ ಸ್ಥಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಇದಕ್ಕಾಗಿ ಲಾಬಿ ನಡೆಸಲು ನಾನು ಹೋಗುವುದಿಲ್ಲ ಎಂದು ಹೇಳಿದರು.
2014ರಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ 3 ಸಾವಿರ ಮತಗಳ ಅಂತರದಿಂದ ಸೋತಿದ್ದೆ. ನಂತರದ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ರಾಜ್ಯಸಭಾ ಟಿಕೆಟ್‌ನಿಂದಲೂ ವಂಚಿತನಾಗಿದ್ದೇನೆ ಎಂದು ರಮೇಶ ಕತ್ತಿ ಹೇಳಿದರು.