ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಯ ಪ್ರಜ್ಞೆ ಇಟ್ಟುಕೊಂಡು ನಮ್ಮಕ್ಷೇತ್ರಕ್ಕೆ ಬಂದು ಕಾರ್ಯಕ್ರಮ ಉದ್ಘಾಟಿಸಿದ್ದಾರೆ.
ನನಗೂ ಸಮಯ ಪ್ರಜ್ಣೆ ಇದೆ. ಆದರೆ ನಮ್ಮಣ್ಣ ಉಮೇಶ ಕತ್ತಿ ಎರಡು ತಾಸು ಲೇಟ್ ಮಾಡಿ ಬರ್ತಾರೆ. ಬೇಗ ಟೇಕಪ್ ಆಗುವುದಿಲ್ಲ ಎಂದು ಸಹೋದರ ರಮೇಶ ಕತ್ತಿ ಅವರು ಹಿರಿಯಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದರು.
ಹುಕ್ಕೇರಿಯ ಕ್ಯಾರಗುಡ್ಡದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ, ಪ್ರಥಮ ದರ್ಜೆ ಕಾಲೇಜು, ಹುಕ್ಕೇರಿಯ ಹೈಟೆಕ್ ನೂತನ ಬಸ್ ನಿಲ್ದಾಣ ಸೇರಿದಂತೆ ಒಟ್ಟು 40.40 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹುಕ್ಕೇರಿ ತಾಲೂಕಿನ ಪಿಕೆಪಿಎಸ್ ಗೆ ಸಿಎಸ್ ಸಿ ಕೇಂದ್ರ ಮಾಡಿಕೊಟ್ಟರೆ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ನಿರಂತರ ಜ್ಯೋತಿ ಯೋಜನೆಗಾಗಿ ತಾಲೂಕಿನಲ್ಲಿ 22:ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದ್ದು, ಹೀಗಾಗಿ ರೈತರಿಗೆ ನಿರಂತರ ಜ್ಯೋತಿಗೆ ಅನುಮೋದನೆ ನೀಡಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಹುಕ್ಕೇರಿ ಮಾದರಿ ತಾಲೂಕಾಗಿದೆ. ಕ್ಷೇತ್ರದ ಪ್ರಗತಿ ವರದಿ ಸಿದ್ಧವಾದರೆ ಉಮೇಶ ಕತ್ತಿ ಫಸ್ಟ್ ರ್ಯಾಂಕ್ ಬರುತ್ತಾರೆ ಎಂಬ ವಿಶ್ವಾಸವಿದೆ. ಹೃದಯ ಶ್ರೀಮಂತಿಕೆ ಹೊಂದಿರುವ ಉಮೇಶ ಕತ್ತಿ ಅವರು ಆಗಾಗ ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತುತ್ತಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳುತ್ತಿದ್ದಂತೆ ಚಪ್ಪಾಳೆ ಸುರಿಮಳೆ ಆಯಿತು. ಕ್ಷೇತ್ರದಲ್ಲಿ ಆಳವಾಗಿ ಬೇರುರಿರುವ ಕತ್ತಿ ಹೆಮ್ಮರವಾಗಿ ಬೆಳೆದಿದ್ದಾರೆ ಎಂದು ಕತ್ತಿ ಸಹೋದರರನ್ನು ಹೊಗಳಿದರು.
ಇದನ್ನೂ ಓದಿ :ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ ದೋಸ್ತಿ: ಬೊಮ್ಮಾಯಿ