Advertisement

ಕತ್ತಿ ಮುನಿಸು, ಕೈಗೆ ಜಯದ ಕನಸು

01:08 PM Apr 28, 2019 | Suhan S |

ಬೆಳಗಾವಿ: ಲೋಕಸಭೆ ಚುನಾವಣೆಯ ಮಹಾಸಮರ ಮುಗಿದಿದೆ. ಫಲಿತಾಂಶ ಹೊರಬರಬೇಕಷ್ಟೆ. ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಮಾಜಿ ಸಂಸದರ ಕ್ಷೇತ್ರ ಹುಕ್ಕೇರಿಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

Advertisement

ಚುನಾವಣೆಗೆ ಮುನ್ನ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜ್ಯಮಟ್ಟದಲ್ಲಿ ಭಾರೀ ಸುದ್ದಿಮಾಡಿದ್ದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಹಾಗೂ ಕತ್ತಿ ಸಹೋದರರು ಕೊನೆಯವರೆಗೂ ತಮ್ಮ ಕುತೂಹಲದ ನಡೆಯನ್ನು ಉಳಿಸಿಕೊಂಡು ಬಂದರು. ಇದೇ ಆಧಾರದ ಮೇಲೆ ಈಗ ಇಲ್ಲಿ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ.

ಈ ಬಾರಿಯ ಚುನಾವಣೆಯಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 73.27 ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಶೇ.76 ರಷ್ಟು ಮತದಾನವಾಗಿತ್ತು. ಅದಕ್ಕೆ ಹೋಲಿಸಿದರೆ ಸುಮಾರು ಮೂರು ಪ್ರತಿಶತದಷ್ಟು ಮತದಾನ ಕಡಿಮೆಯಾಗಿದೆ. ಆದರೆ ಈ ಮತದಾನದ ಲೆಕ್ಕದ ಪ್ರಕಾರ ಬಿಜೆಪಿಗೆ ಆನುಕೂಲವಾಗಬಹುದು ಎಂಬುದು ಕ್ಷೇತ್ರದ ಜನರ ಹಾಗೂ ರಾಜಕೀಯ ಅನುಭವಿಗಳ ಲೆಕ್ಕಾಚಾರ. ಇದೇ ಆಧಾರದ ಮೇಲೆಯೇ ಬೆಟ್ಟಿಂಗ್‌ ಸಹ ನಡೆದಿದೆ.

ಉಮೇಶ ಕತ್ತಿ ಹಾಗೂ ರಮೇಶ ಕತ್ತಿ ಚುನಾವಣೆಯ ಪ್ರಚಾರದಲ್ಲಿ ಅಷ್ಟಾಗಿ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ. ಕೊನೆಯ ಮೂರ್‍ನಾಲ್ಕು ದಿನ ಉಮೇಶ ಕತ್ತಿ ಕ್ಷೇತ್ರದಲ್ಲೇ ಇರಲಿಲ್ಲ. ಇನ್ನು ಟಿಕೆಟ್ ಸಿಗದೇ ಇರುವ ಬಗ್ಗೆ ಮೊದಲೇ ಅಸಮಾಧಾನಗೊಂಡಿದ್ದ ಮಾಜಿ ಸಂಸದ ರಮೇಶ ಕತ್ತಿ ಸಹ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದು ಸುದ್ದಿಯಾಗಲೇ ಇಲ್ಲ. ಬದಲಾಗಿ ಮನೆಯಲ್ಲೇ ಕುಳಿತು ತಮ್ಮ ಬೆಂಬಲಿಗರಿಗೆ ಸೂಚನೆ ನೀಡಿದರು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬಂದವು. ಕತ್ತಿ ಸಹೋದರರ ಈ ನಡೆ ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ಬಹಳ ಪರಿಣಾಮ ಬೀರಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಚರ್ಚೆಯಾಗುತ್ತಿವೆ.

ಚುನಾವಣೆಯಲ್ಲಿ ರೈತ ಸಮುದಾಯ ನಮ್ಮ ಪರವಾಗಿ ನಿಂತಿರುವುದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಗಲಿದೆ ಎಂಬುದು ಪಕ್ಷದ ಕಾರ್ಯಕರ್ತರ ವಿಶ್ವಾಸ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದ ರೈತ ಸಂಘಟನೆಗಳ ಕಾರ್ಯಕರ್ತರು ಈ ಬಾರಿ ನಮಗೆ ಬೆಂಬಲ ನೀಡಿದ್ದಾರೆ. ಅನೇಕ ಗ್ರಾಮಗಳಲ್ಲಿ ಇದು ಪರಿಣಾಮ ಬೀರಿದೆ ಎಂಬುದು ಕಾಂಗ್ರೆಸ್‌ ಮುಖಂಡರ ಲೆಕ್ಕಾಚಾರ.

Advertisement

ಮತದಾನದ ಪ್ರಮಾಣ ಹಾಗೂ ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂಬ ಕಾರಣದಿಂದ ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಯುವ ಸಮೂಹ ಬಿಜೆಪಿ ಬೆಂಬಲಿಸಿದೆ. ಇದು ಅನೇಕ ಕಡೆ ಮತದಾನದ ಸಮಯದಲ್ಲಿ ಕಂಡುಬಂತು. ನಮ್ಮ ಪ್ರಚಾರ ಸಾಕಷ್ಟು ಪರಿಣಾಮ ಬೀರಿತ್ತು ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.

Advertisement

Udayavani is now on Telegram. Click here to join our channel and stay updated with the latest news.

Next