ವಿಜಯಪುರ: ಬಿಜೆಪಿ ಪಕ್ಷದಿಂದ ಉಚ್ಛಾಟನೆ ಆಗಿದ್ದ ಬಸನಗೌಡ ಪಾಟೀಲ ಯತ್ನಾಳ ಮರು ಸೇರ್ಪಡೆ ಬೇಡ ಎಂದರೂ ಮುಖ್ಯಮಂತ್ರಿ ಯಡಿಯೂರಪ್ಪ ಕೇಳಲಿಲ್ಲ, ಈಗ ಅವರಿಗೆ ಮುಳುವಾಗಿದೆ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾಹೇಬ್ರೇ ಇಂಥವರು ಮತ್ತೆ ಪಕ್ಷಕ್ಕೆ ಬರುವುದು ಬೇಡ ಎಂದರೂ ಯಡಿಯೂರಪ್ಪ ಕೇಳಲಿಲ್ಲ ಎಂದರು.
ಸಚಿವ ಸ್ಥಾನದ ಅವಕಾಶ ಸಿಗದಿರುವುದು, ಬೇಸರ, ಅಸಮಾಧಾನ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಅದು ಬಿಟ್ಡು ಹಾದಿಬೀದಿಯಲ್ಲಿ ಮಾತಾನಾಡುತ್ತಾ ತಿರುಗಿದರೆ ತಲೆ ಕೆಟ್ಟಿದೆ ಎನ್ನುತ್ತಾರೆ ಎಂದು ತಮ್ಮ ಸ್ವಂತ ಜಿಲ್ಲೆಯ ಶಾಸಕ ಯತ್ನಾಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಯಡಿಯೂರಪ್ಪ ಈಗ ದಾರಿ ತಪ್ಪಿದ ಮಗ, ಅವರ ಜೀವ ವಿಜಯೇಂದ್ರನ ಕೈಯಲ್ಲಿದೆ: ವಿಶ್ವನಾಥ್
ಶಾಸಕ ಯತ್ನಾಳ ಹೇಳಿರುವ “ಸಿಡಿ” ವಿಷಯ ನನಗೆ ಗೊತ್ತಿಲ್ಲ, ನಾನದನ್ನು ನೋಡಿಯೂ ಇಲ್ಲ, ಯಾರೂ ನನಗೆ ಅದನ್ನು ತೋರಿಸಿಲ್ಲ. ಹೀಗಾಗಿ ಈ ಬಗ್ಗೆ ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದರು.
ರಾಜ್ಯದಲ್ಲಿ ಈವರೆಗೆ ಶೇ.1-2 ರಷ್ಟು ಜನಸಂಖ್ಯೆ ಇರುವವರೇ ಮುಖ್ಯಮಂತ್ರಿ ಆಗಿದ್ದಾರೆ, ಶೇ. 30 ರಷ್ಟು ಜನಸಂಖ್ಯೆ ಹೊಂದಿರುವ ದಲಿತ ಸಮುದಾಯದವರು ಈ ವರೆಗೆ ಒಬ್ಬರೂ ಮುಖ್ಯಮಂತ್ರಿ ಆಗಿಲ್ಲ, ನಮ್ಮ ಸಮುದಾಯಕ್ಕೂ ಇಂಥ ಅವಕಾಶ ಸಿಗಬೇಕು ಎಂದರು.
ಅ ಮೂಲಕ ಶೀಘ್ರವೇ ನಾಯಕತ್ವ ಬದಲಾಗಲಿದ್ದು, ಹಣೆಬರಹದಲ್ಲಿ ಇದ್ದರೆ ನಾನೇಕೆ ಸಿಎಂ ಆಗಬಾರದು ಎಂದು ಹಕ್ಕು ಪ್ರತಿಪಾದಿಸಿದ್ದ ಶಾಸಕ ಯತ್ನಾಳಗೆ ಸಂಸದ ಜಿಗಜಿಣಗಿ ಟಾಂಗ್ ನೀಡಿದರು.