ಬೆಳಗಾವಿ/ಗೋಕಾಕ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ನಡೆದಿರುವ ಚರ್ಚೆಯ ಬೆನಲ್ಲೇ ಗೋಕಾಕ ಸಾಹುಕಾರ್, ಶಾಸಕ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದು, ಜೂನ್ 18ರ ನಂತರ ಹೊಸ ಯಡಿಯೂರಪ್ಪ ಆಗಿ ರಾಜ್ಯದ ಮುಂದೆ ಬರಲಿದ್ದಾರೆ ಎಂದು ಹೇಳಿದರು.
ಗೋಕಾಕ ನಗರದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನು ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ ಇಲ್ಲ. ಮುಂದಿನ ಚುನಾವಣೆಯೂ ಯಡಿಯೂರಪ್ಪ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ:ಬೆಂಗಳೂರಿಗೆ ಹೋಗಿ ಯಾರನ್ನು ಭೇಟಿಯಾಗಿ ಏನು ಮಾಡಲಿ: ಸೋಮಶೇಖರ ರೆಡ್ಡಿ ಅಸಮಾಧಾನ
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಂಬಿ ನಾವು ಬಿಜೆಪಿಗೆ ಬಂದಿದ್ದೇವೆ. ನಾಯಕತ್ವ ಕುರಿತು ಕೆಲ ಶಾಸಕರು ಅಪಸ್ವರ ಎತ್ತಿದ್ದಾರೆ. ಸಿಟ್ಟಿಗೆ ಎದ್ದ ಶಾಸಕರು ಸೇರಿ ಎಲ್ಲರನ್ನೂ ಕರೆಯಿಸಿ ಚರ್ಚಿಸಿ ಈ ಸಮಸ್ಯೆ ಬಗೆಹರಿಸುವಂತೆ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲಾಗುವುದು ಎಂದರು.
ವಿರೋಧ ಪಕ್ಷದವರಿಗೆ ಬೇರೆ ಕೆಲಸ ಇಲ್ಲವಾಗಿದೆ. ಹೀಗಾಗಿ ಕೇವಲ ನಮ್ಮ ವಿರುದ್ಧ ಮಾತನಾಡುವುದೇ ಆಗಿದೆ. ಮುಂದಿನ ದಿನಗಳಲ್ಲಿ ಎರಡು ವರ್ಷಗಳ ಕಾಲ ಮೂಲ ಮೂಲೆಯಲ್ಲಿ ಪಕ್ಷ ಸಂಘಟಿಸಿ 2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.