ಬೆಳಗಾವಿ: ಸಿಡಿ ವಿಚಾರದಲ್ಲಿ ಷಡ್ಯಂತ್ರ ರೂಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಶ್ರಯದಲ್ಲಿಯೇ ಆ ಯುವತಿ ಬೆಂಗಳೂರಿನಲ್ಲಿ ನೆಲೆಸಿದ್ದು, ಡಿಕೆಶಿ, ಯುವತಿ ಸೇರಿದಂತೆ ಸಿಡಿ ಗ್ಯಾಂಗ್ ಬಂಧಿಸುವಂತೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೂರಾರು ಜನರ ಸಿಡಿ ಇಟ್ಟುಕೊಂಡು ಷಡ್ಯಂತ್ರ ರೂಪಿಸಿರುವ ಮಹಾನಾಯಕ ಡಿ.ಕೆ.ಶಿವಕುಮಾರ ಅವರನ್ನು ಕೂಡಲೇ ಬಂಧಿಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರು.
ಸುಮಾರು ಒಂದು ವರ್ಷದಿಂದ ಸುಮ್ಮನೆ ಕುಳಿತಿದ್ದೆ. ಮಿಸ್ಟರ್ ಶಿವಕುಮಾರ್ ರಾಜಕೀಯ ಮಾಡಲು ನಾಲಾಯಕ್. ಒಬ್ಬ ವ್ಯಕ್ತಿ ಜೀವನ ಹಾಳು ಮಾಡಿ ರಾಜಕೀಯ ಮಾಡುವ ಡಿಕೆ ಶಿವಕುಮಾರ್ ರಾಜಕೀಯ ಮಾಡಲು ಅಯೋಗ್ಯ ವ್ಯಕ್ತಿ. ನಾನು ವೈಯಕ್ತಿಕ ಯಾರನ್ನು ದ್ವೇಷ ಮಾಡುವುದಿಲ್ಲ. ನಾನು ಯಾವುದೇ ಸಿಡಿ ರಿಲೀಜ್ ಮಾಡಲ್ಲ. ಜಾರಕಿಹೊಳಿ ಯಾವುದೇ ಗಾಳಿಯಲ್ಲಿ ಗುಂಡು ಹಾರಿಸಲ್ಲ. ಡಿಕೆ ಶಿವಕುಮಾರ್ ಒಬ್ಬ ಮಹಿಳೆ ಮುಖಾಂತರ ನನ್ನ ಜೀವನ ಹಾಳು ಮಾಡಿದ್ದಾರೆ. ಶಿವಕುಮಾರ್ ಅವರ ಆಡಿಯೋ ಝಲಕ್ ತೋರಿಸುತ್ತೇನೆ. ಸಿಡಿ ರಿಲೀಜ್ ಮಾಡುವುದಿಲ್ಲ. ಡಿ.ಕೆ. ಶಿವಕುಮಾರ ಸಾವಿರಾರು ಕೋಟಿ ಮಾಲೀಕ. ಸಿಡಿ ಲೇಡಿ ಹಾಗೂ ಅವರಿಗೆ ಸಹಕರಿಸಿದ ಎಲ್ಲರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆಗೆ ಹೆದರಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ
ಸಿಡಿ ಲೇಡಿ ಅರೆಸ್ಟ್ ಮಾಡಿಸಿದರೆ ಎಲ್ಲಾ ಹೊರಗೆ ಬರುತ್ತದೆ. ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಹಿಳಾ ಪದಾಧಿಕಾರಿ ಮನೆಯಲ್ಲಿ ಆ ಲೇಡಿ ಇದ್ದಾಳೆ. ಅವಳನ್ನು ಅರೆಸ್ಟ್ ಮಾಡಿ ಎಲ್ಲಾ ಹೊರಗೆ ಬರುತ್ತದೆ. ಡಿಕೆಶಿ ಅಂತವರು ಇರುವಾಗ ನಾವು ರಾಜಕೀಯ ಮಾಡಲು ಆಗಲ್ಲ. 2023 ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ, ಈ ಚುನಾವಣೆ ನನ್ನದು ಕೊನೆಯದು. ಆದಾದ ಬಳಿಕ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಡಿಕೆ ಶಿವಕುಮಾರ ಅವರು ಹಾಸ್ಪಿಟಲ್ ಗೆ ಅಡ್ಮಿಟ್ ಆದಾಗ ನೋಡೋಕೆ ಹೋಗಿದ್ದೆ. ಆವಾಗ ಡಿಕೆ ಅವರ ಪತ್ನಿ ಉಷಾ ಅವರು ಕಾಂಗ್ರೆಸ್ ಪಕ್ಷ ಬಿಡದಂತೆ ಬೇಡಿಕೊಂಡಿದ್ದರು. ಗ್ರಾಮೀಣ ಶಾಸಕಿಯಿಂದ ಪಕ್ಷ ಹಾಳಾಗಿದೆ ಎಂದು ಲಕ್ಷ್ಮಿ ವಿರುದ್ಧ ಪರೋಕ್ಷವಾಗಿ ಗುಡುಗಿದರು.
ಸಿಬಿಐ ತಂಡ ಆದಷ್ಟು ಈ ಸಿಡಿ ತಂಡವನ್ನು ಬಂದಿಸಬೇಕು. ಒಂದು ಅವಾಚ್ಯ ಶಬ್ದವನ್ನು ಎಡಿಟ್ ಮಾಡಿ ಕಿತ್ತೂರು ಚನ್ನಮ್ಮ ಹೋಲಿಸಿ ಜಾತಿ ಮದ್ಯೆ ಜಗಳ ಹಚ್ಚುವ ಷಡ್ಯಂತ್ರ ಮಾಡಿದ್ದಾರೆ. ಸಿಡಿ ಮಾಡಿ ಹಲವು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಶಿವಕುಮಾರ್ ಅವರು ಬ್ಲಾಕ್ ಮನಿ ಬಗ್ಗೆ ಸಿಬಿಐ ಮೂಲಕ ತನಿಖೆ ನಡೆಸಬೇಕು ಎಂದರು.