ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ತಲ್ಲಣ ಸೃಷ್ಠಿಸಿ ಅತ್ಯಾಚಾರದ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಸಂಪುಟ ಸೇರಲು ಕಸರತ್ತು ನಡೆದಿದೆ. ಅಲ್ಲದೇ ಮತ್ತೆ ಜಲ ಸಂಪನ್ಮೂಲ ಖಾತೆಯನ್ನೇ ನೀಡಬೇಕೆಂಬ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ಮಾಡಿದ್ದ ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಸೂಕ್ತ ದಾಖಲೆ ದೊರೆಯದ ಹಿನ್ನೆಲೆಯಲ್ಲಿ ಎಸ್‌ಐಟಿ ಅವರ ವಿರುದ್ಧದ ಪ್ರಕರಣದ ಬಗ್ಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಚರ್ಚೆ ದೆಹಲಿ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸೂಕ್ತ ದಾಖಲೆಗಳು ಲಭ್ಯವಿಲ್ಲ ಎನ್ನುವ ಕಾರಣಕ್ಕೆ ಪ್ರಕರಣ ಅಂತ್ಯ ಕಾಣುವ ಹಂತ ತಲುಪಿರುವುದರಿಂದ ರಮೇಶ್ ಸಹೋದರ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ರಮೇಶ್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪಅವರಿಗೆ ಸೂಚನೆ ನೀಡುವಂತೆ ಹೈಕಮಾಂಡ್ ನಾಯಕರನ್ನುಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮರಣದಂಡನೆಗೊಳಗಾಗಿದ್ದ ಕೇರಳ ಮೂಲದ ವ್ಯಕ್ತಿಗೆ ಜೀವದಾನ ನೀಡಿದ ಉದ್ಯಮಿ
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಇಬ್ಬರೂ ನಾಯಕರು ಅವರ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ರಾಜ್ಯದಲ್ಲಿ ಜಾರಿಯಲ್ಲಿರುವ ಕೊರೊನಾ ಲಾಕ್‌ಡೌನ್ ಅವಧಿ ಮುಕ್ತಾಯವಾದ ನಂತರ ಸಂಪುಟ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.