Advertisement

ಮುನಿಸಿಕೊಂಡ ಜಾರಕಿಹೊಳಿ: ದೆಹಲಿ ಯಾತ್ರೆ

09:06 PM Aug 09, 2021 | Team Udayavani |

ಬೆಂಗಳೂರು: ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮೌನವಾಗಿದ್ದ ರಮೇಶ್‌ ಜಾರಕಿಹೊಳಿ ಮತ್ತೆ ಸಕ್ರಿಯರಾಗಿದ್ದು, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತಮ್ಮ ಕುಟುಂಬದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ.

Advertisement

ಹಿರಿತನದ ಆಧಾರದಲ್ಲಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಿಂದ ಹೊರಗುಳಿದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ತಮ್ಮ ಆಪ್ತರ ಬಳಿ ರಮೇಶ್‌ ಜಾರಕಿಹೊಳಿ ಹೇಳಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗ ರಮೇಶ್‌ ಜಾರಕಿಹೊಳಿ ದೆಹಲಿಗೆ ತೆರಳಿದ್ದು, ಪಕ್ಷದ ಹೈಕಮಾಂಡ್‌ ನಾಯಕರ ಜೊತೆ ರಾಜ್ಯದ ಬೆಳವಣಿಗೆಗಳ ಕುರಿತು ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಮೇಲೆ ಆರೋಪ ಇರುವುದರಿಂದ ತಾವು ಆರೋಪ ಮುಕ್ತರಾಗುವವರೆಗೂ ಸಂಪುಟದಲ್ಲಿ ಅವಕಾಶ ನೀಡಲು ಆಗುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್‌ ನೇರವಾಗಿಯೇ ಹೇಳಿರುವುದರಿಂದ ತಮ್ಮ ಬದಲು ತಮ್ಮ ಸಹೋದರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮಾಡಿರುವ ಪ್ರಯತ್ನವೂ ವಿಫ‌ಲವಾಗಿರುವುದರಿಂದ ರಮೇಶ್‌ ಜಾರಕಿಹೊಳಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ವಜ್ರೋದ್ಯಮಿ ನೀರವ್‌ ಮೋದಿ ಭಾರತ ಹಸ್ತಾಂತರ ಇನ್ನಷ್ಟು ದೂರ

Advertisement

ಚಾಲಚಂದ್ರ ಜಾರಕಿಹೊಳಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕೊನೆವರೆಗೂ ಪಕ್ಷದ ಹೈಕಮಾಂಡ್‌ ಮಟ್ಟದಲ್ಲಿ ನಿರಂತರ ಚರ್ಚೆಗಳು ನಡೆದಿವೆ ಎನ್ನಲಾಗಿದ್ದು, ಬಾಲಚಂದ್ರ ಜಾರಕಿಹೊಳಿ ಜಲ ಸಂಪನ್ಮೂಲ ಖಾತೆಯನ್ನು ನೀಡಿದರೆ ಮಾತ್ರ ಸಂಪುಟಕ್ಕೆ ಸೇರುವುದಾಗಿ ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಖಾತೆಯನ್ನು ಅವರಿಗೆ ನೀಡಲು ನಿರಾಕರಿಸಿದ್ದರಿಂದ ಬಾಲಚಂದ್ರ ಜಾರಕಿಹೊಳಿ ಸಂಪುಟದಿಂದ ಹೊರಗೆ ಉಳಿಯುವಂತಾಯಿತು ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಕೊನೆಗಳಿಗೆಯಲ್ಲಿ ಬೆಳಗಾವಿ ಕೋಟಾದಡಿ ಶಶಿಕಲಾ ಜೊಲ್ಲೆ ಅವರನ್ನು ಸಂಪುಟಕ್ಕೆ ಸೇರಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿಗೆ ತೆರಳಿದ ಸಿಪಿ ಯೋಗೇಶ್ವರ್‌
ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ಸಕ್ರಿಯರಾಗಿ ಮುಂಚೂಣಿಯಲ್ಲಿದ್ದ ಸಿ.ಪಿ ಯೋಗೇಶ್ವರ್‌ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ತಮ್ಮ ಪಾತ್ರ ಮಹತ್ವದ್ದಾಗಿದ್ದು, ತಮ್ಮನ್ನು ಸಂಪುಟದಿಂದ ಹೊರಗಿಟ್ಟಿರುವುದು ಸರಿಯಲ್ಲ ಎಂದು ಪಕ್ಷದ ನಾಯಕರ ಬಳಿ ಹೇಳಿಕೊಳ್ಳಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಯಾವುದೇ ನಾಯಕರ ಭೇಟಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಯೋಗೇಶ್ವರ್‌ ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next