Advertisement
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಾಖಲಾಗಿ 2 ವರ್ಷ ಕಳೆದರೂ ಮಾಜಿ ಸಚಿವರ ನೈಜ ಸಿಡಿ ಇನ್ನೂ ನಿಗೂಢವಾಗಿದೆ. ಜೊತೆಗೆ ಆರೋಪಿಗಳು ಈ ವಿಡಿಯೋವನ್ನು ಅಂತರ್ಜಾಲಕ್ಕೆ ಎಲ್ಲಿಂದ, ಯಾರಿಂದ, ಹೇಗೆ ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚುವಲ್ಲಿ ಎಸ್‌ಐಟಿ ವಿಫಲವಾಗಿದೆ. ಆರು ತಿಂಗಳಿಂದ ಸಾಕ್ಷ್ಯಾಧಾರ ಕೊರತೆಯಿಂದ ತನಿಖಾಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ.
ಸಿಡಿ ಪ್ರಕರಣದಲ್ಲಿ ಮೂಲ ವಿಡಿಯೋವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ, ಆ ವರದಿಯನ್ನು ಡಿಜಿಟಲ್ ಸಾಕ್ಷ್ಯವನ್ನಾಗಿ ಪರಿಗಣಿಸಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲು ತನಿಖಾಧಿಕಾರಿಗಳು ಚಿಂತನೆ ನಡೆಸಿದ್ದರು. ಆದರೆ, ಸಾಕ್ಷ್ಯಧಾರಗಳ ಕೊರತೆಯಿಂದ ಸಿಡಿ ಕೇಸ್ ಠುಸ್ ಆಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಸದ್ಯ ಸರ್ಕಾರ ಹಾಗೂ ಮೇಲಾಧಿಕಾರಿಗಳ ಸಲಹೆ ಪಡೆದು ತನಿಖೆ ಮುಂದುವರೆಸಲು ಎಸ್‌ಐಟಿ ಚಿಂತಿಸಿದೆ. ಬಲವಾದ ಡಿಜಿಟಲ್ ಸಾಕ್ಷ್ಯಗಳು ಪತ್ತೆಯಾಗದೇ ಈ ಕೇಸ್‌ನ್ನು ಹನಿಟ್ರ್ಯಾಪ್ ಎಂದು ಚಾರ್ಜ್‌ಶೀಟ್‌ನಲ್ಲಿ ಸಾಬೀತುಪಡಿಸುವುದು ಕಷ್ಟಸಾಧ್ಯ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
Related Articles
ಎಸ್‌ಐಟಿ ತಂಡ “ಒರಿಜಿನಲ್ ವಿಡಿಯೋ’ಗಾಗಿ ಒಂದು ವರ್ಷದಿಂದ ತಾಂತ್ರಿಕ ಕಾರ್ಯಾಚರಣೆ ನಡೆಸಿತ್ತು. ಪ್ರಕರಣದ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ಬಳಿಯೇ ನೈಜ ಸಿಡಿ ಇದೆ ಎಂದು ಸಂತ್ರಸ್ತೆ ವಿಚಾರಣೆಯಲ್ಲಿ ತನಿಖಾಧಿಕಾರಿಗಳ ಮುಂದೆ ಹೇಳಿದ್ದಳು. ಇತ್ತ ನರೇಶ್, ಶ್ರವಣ್ ಸಿಡಿಯಲ್ಲಿರುವ ಯುವತಿಯ ಮೇಲೆ ಬೊಟ್ಟು ಮಾಡಿದ್ದರು. ಮೂವರ ಗೊಂದಲದ ಹೇಳಿಕೆಯಿಂದ ಎಸ್‌ಐಟಿಗೆ ನೈಜ ವಿಡಿಯೋ ಪತ್ತೆ ಹಚ್ಚುವುದೇ ಸವಾಲಾಗಿದೆ. ಈಗಾಗಲೇ ವೈರಲ್ ಆಗಿರುವ ಅಶ್ಲೀಲ ವಿಡಿಯೋವನ್ನು ಕೊಂಚ ಎಡಿಟ್ ಮಾಡಿ ಸಿಡಿಗೆ ಅಪ್‌ಲೋಡ್ ಮಾಡಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಪರಿಶೀಲನೆಯಲ್ಲಿ ಪತ್ತೆಯಾಗಿದೆ.
Advertisement
ಪ್ರಭಾವಿ ವ್ಯಕ್ತಿ ಬಳಿ ನೈಜ ವಿಡಿಯೋ ?ಒಂದು ಮೂಲಗಳ ಪ್ರಕಾರ ಮಲ್ಲೇಶ್ವರದಲ್ಲಿರುವ ಮಾಜಿ ಸಚಿವರಿಗೆ ಸೇರಿದ ಫ್ಲ್ಯಾಟ್ ಗೆ ಯುವತಿ ಬಂದಾಗ, ತನ್ನ ವ್ಯಾನಿಟಿ ಬ್ಯಾಗ್‌ನ ಬಟನ್ ಇರುವ ಜಾಗದಲ್ಲಿ ಮೈಕ್ರೋ ಕ್ಯಾಮರಾ ಇಟ್ಟಿದ್ದಳು. ನಂತರ ಮಾಜಿ ಸಚಿವರೊಂದಿಗೆ ಕಳೆದ ಖಾಸಗಿ ಕ್ಷಣದ ವಿಡಿಯೋ ಸೆರೆ ಹಿಡಿದು ತೆರಳಿದ್ದಳು ಎನ್ನಲಾಗಿದೆ. ಈ ಖಾಸಗಿ ದೃಶ್ಯದ ನೈಜ ವಿಡಿಯೋ ಆರೋಪಿಗಳ ಹಿಂದಿರುವ ರಾಜ್ಯದ ಪ್ರಭಾವಿಯೊಬ್ಬರ ಬಳಿ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಪ್ರಕರಣದಲ್ಲಿ ಶಂಕಿತ ಪ್ರಭಾವಿ ವ್ಯಕ್ತಿ ಶಾಮೀಲಾಗಿರುವುದಕ್ಕೆ ಎಸ್‌ಐಟಿ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ ಆ ಪ್ರಭಾವಿಯನ್ನು ವಿಚಾರಣೆ ನಡೆಸಲೂ ಸಾಧ್ಯವಾಗುತ್ತಿಲ್ಲ. ಇನ್ನು ಆರೋಪಿಗಳು ಎಲ್ಲೂ ಪ್ರಕರಣದ ಹಿಂದಿರುವ ಆ ಪ್ರಭಾವಿಯ ಸಣ್ಣ ಸುಳಿವು ಬಿಟ್ಟು ಕೊಟ್ಟಿಲ್ಲ ಎಂದು ಎಸ್‌ಐಟಿ ಮೂಲಗಳಿಂದ ತಿಳಿದು ಬಂದಿದೆ. ಎಸ್‌ಐಟಿ ತನಿಖೆಯಲ್ಲಿ ಸಿಕ್ಕಿದ ಸಾಕ್ಷ್ಯಧಾರಗಳೇನು?
– ಸಿಡಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರೂ ಮಾತುಕತೆ ನಡೆಸಿರುವುದು.
– ಮಹಜರು ವೇಳೆ ಯುವತಿ ವಿರುದ್ಧ ಸಿಕ್ಕ ಮಹತ್ವದ ದಾಖಲೆಗಳು.
– ಮಾಜಿ ಸಚಿವರು ಹಾಗೂ ಯುವತಿ ನಡುವಿನ ಮೊಬೈಲ್ ಸಂಭಾಷಣೆ, ಚಾಟಿಂಗ್, ವಿಡಿಯೋ ಕರೆ.
– ಸಿಡಿ ಬಿಡುಗಡೆ ಬಳಿಕ ಪ್ರಕರಣದಲ್ಲಿ ಶಾಮೀಲಾದವರು ವೈ-ಫೈ ಬಳಸಿಕೊಂಡು ಕರೆ ಮಾಡಿ ಮಾತುಕತೆ ನಡೆಸಿರುವುದು.
– ಶಂಕಿತರು ಹಾಗೂ ಯುವತಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವುದು. -ಅವಿನಾಶ್ ಮೂಡಂಬಿಕಾನ