ಬೆಳಗಾವಿ: ಶಾಸಕ ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ಸಿಗದೆ ಬಹಳ ನೋವಾಗಿದೆ. ಅವರಿಗೆ ಅನ್ಯಾಯವಾದರೆ ತಾನು ಕೂಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುವ ಮೂಲಕ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಮತ್ತೆ ಶಾಸಕ ಮಹೇಶ್ ಕುಮಟಳ್ಳಿ ಪರ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬರುವ ದಿನಗಳಲ್ಲಿ ಕುಮಟಳ್ಳಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂದರು.
ಮಹೇಶ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಾನು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇನೆ. ಅವರ ಹೆಸರಿನಲ್ಲಿ ನಾನು ಅನ್ಯಾಯ ಮಾಡಿಲ್ಲ. ಮಹೇಶ ಕುಮಟಳ್ಳಿ ನಾನು ಅನ್ಯಾಯ ಮಾಡಿದ್ದೇನೆ ಎಂದು ಹೇಳಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ತಾವು ಯಾವತ್ತೂ ಸೇಡಿನ ರಾಜಕೀಯ ಮಾಡುವುದಿಲ್ಲ. ಈ ರೀತಿಯ ಆರೋಪ ಮಾಡುವುದು ಸುಳ್ಳು. ಎಲ್ಲರನ್ನೂ ಒಗ್ಗೂಡಿಸಿಕೊಂಡು ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತೇನೆ ಎಂದು ಹೇಳಿದರು.
ನೀರಾವರಿ ಇಲಾಖೆಯ ಬಗ್ಗೆ ಬೇಡಿಕೆ ಮಾಡಿರಲಿಲ್ಲ. ಉತ್ತರ ಕರ್ನಾಟಕದ ಜನರೇ ನೀರಾವರಿ ಮಂತ್ರಿಯಾಗಿದ್ದರು. ಈ ನಿಟ್ಟಿನಲ್ಲಿ ನಾನೂ ಸಹ ನೀರಾವರಿ ಸಚಿವನಾಗಿದ್ದೇನೆ. ಹೈಕಮಾಂಡ್ ನೀರಾವರಿ ಖಾತೆ ಕೊಟ್ಟಿದ್ದು ಸಂತಸ ತಂದಿದೆ ಎಂದರು.