ಬೆಂಗಳೂರು: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಯವರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಈಗ ಅವರ ಜತೆ ಹೋಗಲು ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 23ಕ್ಕೆ ಹೋಗುತ್ತೇನೆ ಎಂದು ರಮೇಶ್ ಜಾರಕಿಹೋಳಿ ಹೇಳಿದ್ದರೂ, ಅದು ಸಾಧ್ಯವಿಲ್ಲ. ಮೇ 23ರ ಬಳಿಕ ರಮೇಶ್ ಜಾರಕಿಹೊಳಿಯವರ ಸಮಸ್ಯೆ ಬಗೆಹರಿಯುತ್ತದೆ.
ಅವರು ನಮ್ಮ ದಾರಿಗೆ ಬರುತ್ತಾರೆ ಎಂದು ಹೇಳಿದರು. ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಟ್ಟು ಹೋಗಲ್ಲ. ಈಗ ಅವರು ಕಾಂಗ್ರೆಸ್ ಬಿಟ್ಟು ಹೋಗಲು ಅವರೊಂದಿಗೆ ಯಾರು ಇದ್ದಾರೆ? ಲೋಕಸಭೆ ಫಲಿತಾಂಶದ ನಂತರ ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಡಾ.ಉಮೇಶ್ ಜಾಧವ್, ವಿಧಾನಸಭಾ ಉಪಚುನಾವಣೆಗೆ ತಮ್ಮ ಪುತ್ರನನ್ನು ಕಣಕ್ಕೆ ಇಳಿಸಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಚಿಂಚೋಳಿಯಲ್ಲಿ ಕಾಂಗ್ರೆಸ್ ಅಲೆ ಇದೆ.
2018ರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಉಪಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಇ.ತುಕಾರಾಂ ಮೊದಲಾದವರಿಗೆ ಜವಾಬ್ದಾರಿ ಹಂಚಲಾಗಿದೆ. ಸೋಮವಾರ ಪ್ರಚಾರಕ್ಕೆ ಚಾಲನೆ ಸಿಗಲಿದೆ ಎಂದರು.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದು, ದೇಶದಲ್ಲಿ ಮಹಾಘಟ ಬಂಧನ್ ಪಕ್ಷಗಳು ಅಧಿಕಾರ ಹಿಡಿಯುವುದು ಖಚಿತ. ಹೈದ್ರಾಬಾದ್-ಕರ್ನಾಟಕದಲ್ಲಿ ಕಾಂಗ್ರೆಸ್ ಐದಕ್ಕೆ ಐದು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡಿ ಬಂಧಿಸುತ್ತಿದ್ದಾರೆ ಎಂದು ಬಿಜೆಪಿಯವರು ದೂರುತ್ತಿದ್ದಾರೆ. ಯಾರು ತಪ್ಪು ಮಾಡಿದರೂ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗುತ್ತದೆ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ.