ಬೆಳಗಾವಿ: ಕಳಸಾ-ಬಂಡೂರಿ ನೀರು ಹಂಚಿಕೆ ಕುರಿತಂತೆ ಆದಷ್ಟು ಬೇಗ ಅಧಿಸೂಚನೆ ಹೊರಡಿಸಬೇಕು ಎಂದು ಕೋರಿ ಫೆ.26ರಂದು ದೆಹಲಿಗೆ ತೆರಳಿ ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಧ್ಯವಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಹ ಮಾತುಕತೆ ನಡೆಸಲು ಬರುವಂತೆ ಕೇಳಿಕೊಳ್ಳಲಾಗುವುದು. ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸರಕಾರ ಬದ್ಧವಾಗಿದೆ. ಇದರಲ್ಲಿ ವಿಳಂಬದ ಮಾತೇ ಇಲ್ಲ.
ಯೋಜನೆಯ ಅನುಷ್ಠಾನಕ್ಕೆ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ 200 ಕೋಟಿ ರೂ.ಮೀಸಲಿರಿಸಿದ್ದಾರೆ. ಅಧಿಸೂಚನೆ ಹೊರಡಿಸಿದ ತಕ್ಷಣ ಹಣ ಬಿಡುಗಡೆಗೆ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಕುಡಿಯುವ ನೀರಿನ ಯೋಜನೆಗೆ ಯಾವುದೇ ಅನುಮತಿ ಬೇಕಿಲ್ಲ. ಒಂದು ವೇಳೆ, ಗೋವಾ ಸರಕಾರದವರು ಮತ್ತೆ ಸುಪ್ರೀಂಕೋರ್ಟ್‌ಗೆ ಹೋದರೆ ಹೋಗಲಿ. ನಾವೂ ಸಹ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗತ್ಯ ಕ್ರಮ ಜರುಗಿಸಲಾಗುವುದು. ಕಾವೇರಿ ನ್ಯಾಯಾಧಿಕರಣದ ತೀರ್ಪು ಒಂದು ಹಂತಕ್ಕೆ ಬಂದಿದೆ. ಕೃಷ್ಣಾ ನ್ಯಾಯಾಧಿಕರಣದಿಂದ ರಾಜ್ಯಕ್ಕೆ ನೀರು ಹಂಚಿಕೆಯಾಗಿದ್ದು, ಇದರ ಪೂರ್ಣ ಬಳಕೆಗೆ ಯೋಜನೆ ರೂಪಿಸಲಾಗುವುದು ಎಂದು ಸಚಿವರು ಹೇಳಿದರು.
ಮಹಾರಾಷ್ಟ್ರ ನೀರಾವರಿ ಸಚಿವರು ನನಗೆ ಆತ್ಮೀಯರು. ಅವರು ನೀರಿಗೆ ಬದಲಾಗಿ ನೀರು ಕೇಳುತ್ತಿದ್ದಾರೆ. ಈ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.
ರಮೇಶ ಜಾರಕಿಹೊಳಿ, ಸಚಿವ