Advertisement

ಜಾರಕಿಹೊಳಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾ

09:51 PM Jun 22, 2021 | Team Udayavani |

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆ ಎನ್ನಲಾಗಿರುವ ಯುವತಿ ಮ್ಯಾಜಿಸ್ಟ್ರೇಟ್‌ ಎದುರು ಸಿಆರ್‌ಪಿಸಿ 164ರಡಿ ದಾಖಲಿಸಿರುವ ಪ್ರಮಾಣೀಕೃತ ಹೇಳಿಕೆ ರದ್ದುಪಡಿಸುವಂತೆ ಕೋರಿ ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಈ ಅರ್ಜಿಯ ಸಂಬಂಧ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿದ್ದು ಯುವತಿಯ ಪರ ವಕೀಲ ಸಂಕೇತ್‌ ಏಣಗಿ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ವಾದ ಮಂಡಿಸಿದರು.

ಮ್ಯಾಜಿಸ್ಟ್ರೇಟ್‌ ಎದುರು ದಾಖಲಿಸಿರುವ ಹೇಳಿಕೆ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿಲ್ಲ. ಹೇಳಿಕೆಯ ಸತ್ಯಾಸತ್ಯತೆ ನ್ಯಾಯಾಲಯದ ವಿಚಾರಣೆಯಲ್ಲಿ ತಿಳಿಯಬೇಕಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕೆಂದು ಎಸ್‌ಐಟಿ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್‌ ಮನವಿ ಮಾಡಿದರು. ಈ ವಾದ ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಇದನ್ನೂ ಓದಿ :ಪಾಕಿಸ್ತಾನ: 2020ರಲ್ಲಿ ಶೇ.5ಕ್ಕಿಂತ ಬಡತನ ರೇಖೆ ಹೆಚ್ಚಳ; ವಿಶ್ವ ಬ್ಯಾಂಕ್ ವರದಿ

ಅರ್ಜಿದಾರರ ಮನವಿ:
ಸಿಡಿ ಪ್ರಕರಣ ಸಂಬಂಧ ಮಾ. 30ರಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ನನ್ನ ಮಗಳು (ಪ್ರಕರಣದ ಸಂತ್ರಸ್ತೆ) ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿಯಲ್ಲಿ ಪ್ರಮಾಣಿಕೃತ ಹೇಳಿಕೆ ದಾಖಲಿಸಿದ್ದಾಳೆ. ಸ್ವಇಚ್ಛೆಯಿಂದ ಹೇಳಿಕೆ ನೀಡುವ ಸ್ಥಿತಿಯಲ್ಲಿ ಆಕೆ ಇಲ್ಲ, ಯಾವುದೋ ಒತ್ತಡ ಹಾಗೂ ಪ್ರಭಾವಕ್ಕೆ ಒಳಗಾಗಿ ಈ ಹೇಳಿಕೆ ದಾಖಲಿಸಿದ್ದಾಳೆ. ಆದ್ದರಿಂದ, ಅವಳ ಹೇಳಿಕೆ ಪರಿಗಣಿಸಬಾರದು. ಮಗಳ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಕೋರಿ ಯುವತಿಯ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next