ಬೆಳಗಾವಿ : ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಹೋಗಿ ಬಿಜೆಪಿಯ ಬಹುತೇಕ ಗೊಂದಲಗಳು ಬಗೆಹರಿದವು ಎನ್ನುವಾಗಲೇ ಮಾಜಿ ಸಚಿವ ರಮೇಶ ಜಾರಕಿಹೊಳಿ ರವಿವಾರ ಏಕಾಏಕಿ ಮುಂಬಯಿಗೆ ತೆರಳಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಕ್ಷದಲ್ಲಿ ತಮ್ಮನ್ನು ಅವಗಣಿಸಲಾಗುತ್ತಿದೆ. ಮರಳಿ ಸಚಿವ ಸ್ಥಾನ ನೀಡಲು ಸಿಎಂ ಸಹಿತ ಯಾರೂ ಆಸಕ್ತಿ ವಹಿಸುತ್ತಿಲ್ಲ ಎಂದು ಜಾರಕಿಹೊಳಿ ಅಸಮಾಧಾನಗೊಂಡಿದ್ದು, ಮತ್ತೆ ಶಕ್ತಿ ಪ್ರದರ್ಶನಕ್ಕಾಗಿ ಮುಂಬಯಿಗೆ ತೆರಳಿದ್ದಾರೆ. ಅಲ್ಲಿನ ನಾಯಕರ ಮೂಲಕ ಮತ್ತೆ ಸಂಪುಟ ಸೇರಲು ಕೇಂದ್ರದ ವರಿಷ್ಠರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ.
ಜಾರಕಿಹೊಳಿ ಜತೆ ಐದಕ್ಕೂ ಹೆಚ್ಚು ಶಾಸಕರು ಕೂಡ ಮುಂಬಯಿಗೆ ತೆರಳಿದ್ದಾರೆ ಎಂಬ ಮಾತುಗಳಿವೆ. ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಒತ್ತಡ ಹೇರುವ ತಂತ್ರ ಇದು ಎನ್ನಲಾಗುತ್ತಿದೆ.
ತಮ್ಮ ವಿರುದ್ಧ ಸರಕಾರದಲ್ಲಿ ಇದ್ದವರೇ ಕುತಂತ್ರ ನಡೆಸಿದ್ದಾರೆ. ಈಗ ಸರಕಾರದಲ್ಲಿರುವ ಯಾರೊಬ್ಬರೂ ನೆರವಿಗೆ ಬರುತ್ತಿಲ್ಲ. ತಮ್ಮ ಮೇಲಿನ ಪ್ರಕರಣ ರದ್ದುಪಡಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ರಮೇಶ ಜಾರಕಿಹೊಳಿ ಈಗ ಮತ್ತೂಮ್ಮೆ ತಮ್ಮ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಅಗತ್ಯ ಬಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗೋಕಾಕದಿಂದ ಪುತ್ರ ಅಮರನಾಥ ಅವರನ್ನು ಕಣಕ್ಕಿಳಿಸಲು ಕೂಡ ಅವರು ಚಿಂತನೆ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ. ಈ ಬಗ್ಗೆ ಜಾರಕಿಹೊಳಿ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.