Advertisement

ವಿಧಾನ-ಕದನ 2023 : ರಮೇಶ್‌ ಟಿಕೆಟ್‌ ಕಸಿಯಲು ವಿರೋಧಿಗಳ ತಂತ್ರ

12:04 AM Mar 25, 2023 | Team Udayavani |

ಬೆಳಗಾವಿ: ವಿಧಾನಸಭೆ ಚುನಾವಣೆ ಸಂದರ್ಭ ದಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನಡೆ ಮತ್ತು ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲಿ ನೇರ ಹಸ್ತಕ್ಷೇಪ ಸ್ವತಃ ಅವರಿಗೆ ಟಿಕೆಟ್‌ ಹಂಚಿಕೆ ವಿಷಯದಲ್ಲಿ ಸಮಸ್ಯೆ ತಂದೊಡ್ಡುವ ಲಕ್ಷಣಗಳು ಕಾಣುತ್ತಿವೆ. ಜಾರಕಿಹೊಳಿ ಅವರ ಪ್ರಬಲ ವಿರೋಧಿ ಗುಂಪು ಈ ವಿಷಯದಲ್ಲಿ ತೊಡೆ ತಟ್ಟಿ ನಿಂತಿದೆ.

Advertisement

ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್‌ ಜಾರಕಿ ಹೊಳಿ ಅವರಿಗೆ ಟಿಕೆಟ್‌ ವಿಷಯ ದಲ್ಲಿ ಪ್ರಬಲ ಸಮುದಾಯದಿಂದ ಟಿಕೆಟ್‌ ಆಕಾಂಕ್ಷಿ ಹುಟ್ಟಿಕೊಂಡಿರುವುದು, ಅದಕ್ಕೆ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕರು ತೆರೆಮರೆಯಲ್ಲಿ ಬೆಂಬಲವಾಗಿ ನಿಂತಿರುವುದು ರಮೇಶ್‌ ಜಾರಕಿಹೊಳಿ ಮುಂದಿನ ಹಾದಿ ಸುಗಮವಾಗಿಲ್ಲ ಎಂಬುದನ್ನು ಸೂಕ್ಷ್ಮವಾಗಿ ತೋರಿಸಿಕೊಟ್ಟಿದೆ.

ಗೋಕಾಕ ಕ್ಷೇತ್ರದಲ್ಲಿ ತಮಗೆ ಟಿಕೆಟ್‌ ಪಡೆಯುವಲ್ಲಿ ಯಾರ ಪೈಪೋಟಿಯೂ ಇಲ್ಲ ಎಂದು ಬೀಗುತ್ತಿದ್ದ ರಮೇಶ್‌ ಜಾರಕಿಹೊಳಿಗೆ ಈಗ ಉಪ್ಪಾರ ಸಮಾಜದ ಪ್ರಮುಖರು ಮತ್ತು ಸಂಘ ಪರಿವಾರದ ಜತೆ ಗುರುತಿಸಿಕೊಂಡಿರುವ ಸದಾಶಿವ ಯಲ್ಲಪ್ಪ ಗುದಗಗೋಳ ಎಂಬವರು ನಿದ್ದೆ ಇಲ್ಲದಂತೆ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯ ವಾಗಿ ಸದಾಶಿವ ಅವರಿಗೆ ಬಿಜೆಪಿಯ ಕೆಲವು ಪ್ರಭಾವಿ ನಾಯಕರೇ ಬೆಂಬಲವಾಗಿ ನಿಂತು ಟಿಕೆಟ್‌ಗೆ ಪ್ರಯತ್ನಿಸುತ್ತಿರುವುದು ರಮೇಶ್‌ಗೆ ಕಳವಳ ಉಂಟು ಮಾಡಿದೆ. ಜತೆಗೆ ಜಾರಕಿಹೊಳಿ ಬೆಂಬಲಿಗರಲ್ಲಿಯೂ ಆತಂಕ ಮೂಡಿಸಿದೆ.

ಸದಾಶಿವ ಹೆಸರು ಇಲ್ಲಿ ಸಹಜವಾಗಿ ಕೇಳಿಬಂದಿಲ್ಲ. ಇದನ್ನು ಹಗುರವಾಗಿ ಪರಿಗಣಿಸುವಂತೆಯೂ ಇಲ್ಲ. ಗೋಕಾ ಕದಲ್ಲಿ ಬಿಜೆಪಿ ಅಂದರೆ ಅದು ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ಮೀಸಲು ಎನ್ನುವ ವಾತಾವರಣದಲ್ಲಿ ಸದಾಶಿವ ಗುದಗ ಗೋಳ ಅವರ ಹೆಸರು ತೇಲಿ ಬಂದಿ ರುವುದು ನಿರ್ಲಕ್ಷ್ಯ ಮಾಡುವ ಮಾತಲ್ಲ. ಇದರ ಹಿಂದೆ ದೊಡ್ಡ ಶಕ್ತಿಗಳ ಸಹಾಯಹಸ್ತ ಮತ್ತು ಮಾರ್ಗದರ್ಶನವಿದೆ.

ಮೇಲಾಗಿ ಸದಾಶಿವ 2004ರಿಂದ ಬಿಜೆಪಿಯಲ್ಲಿ ಕೆಲಸ ಮಾಡಿದವರು. ಪ್ರತೀ ಚುನಾವಣೆಯಲ್ಲಿ ಪಕ್ಷದ ಚುನಾವಣ ಏಜೆಂಟರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಂಘ ಪರಿವಾರದ ಜತೆ ಗುರುತಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ಭಜರಂಗ ದಳ ಜಿಲ್ಲಾ ಸಂಚಾಲಕರಾಗಿದ್ದಾರೆ. ಈ ಎಲ್ಲ ಅನುಭವಗಳು ಸದಾಶಿವ ಅವರಿಗೆ ಬಿಜೆಪಿ ಟಿಕೆಟ್‌ಗೆ ಅರ್ಜಿ ಸಲ್ಲಿಸುವಂತೆ ಮಾಡಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ತಮ್ಮ ಟಿಕೆಟ್‌ ಪ್ರಯತ್ನ ಹಿಂದೆ ಬಿಜೆಪಿಯ ಕೆಲವು ಮುಖಂಡರು ಹಾಗೂ ಸ್ವಾಮೀಜಿಗಳ ಬೆಂಬಲ ಇದೆ. ಸಹಕಾರ ಇದೆ ಎಂದು ಸದಾಶಿವ ಅವರೇ ಹೇಳಿರುವುದು ಹೊಸ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇನ್ನೊಂದು ಕಡೆ ಟಿಕೆಟ್‌ಗಾಗಿ ಗಂಭೀರ ಪ್ರಯತ್ನ ನಡೆಸಿರುವ ಸದಾಶಿವ ಗುದಗಗೋಳ ಅವರು ಸದ್ಯದಲ್ಲೇ ತಮ್ಮ ಸಮಾಜದ ಸಭೆ ಕರೆಯಲು ಚಿಂತನೆ ನಡೆಸಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಉಪ್ಪಾರ ಸಮಾಜದ ಮತದಾರರ ಸಂಖ್ಯೆ 30 ಸಾವಿರಕ್ಕೂ ಅಧಿಕವಾ ಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

Advertisement

ಹಳಿಸಿದ ಸಂಬಂಧ: ಜಿಲ್ಲೆಯಲ್ಲಿ ರಮೇಶ್‌ ಜಾರಕಿಹೊಳಿ ಜತೆ ಬಿಜೆಪಿ ನಾಯಕರ ಸಂಬಂಧ ಸರಿಯಾಗಿಲ್ಲ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಕಳೆದ ಕೆಲವು ದಿನಗಳಿಂದ ರಮೇಶ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ಇದಕ್ಕೂ ಮುನ್ನ ಜಾರಕಿಹೊಳಿ ವಿರುದ್ಧ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಟ್ವೀಟ್‌ ಸಮರ ಇದಕ್ಕೆ ಸಾಕ್ಷಿ. ಜಾರಕಿಹೊಳಿ ಜಿಲ್ಲೆಯ ಬಹುತೇಕ ನಾಯಕರ ಜತೆಗೆ ವಿರೋಧ ಕಟ್ಟಿಕೊಂಡಿದ್ದಾರೆ. ಈ ವಿರೋಧ ಈಗ ಟಿಕೆಟ್‌ ತಪ್ಪಿಸುವ ಹಂತಕ್ಕೆ ಬಂದು ನಿಂತಿದೆ.

ಬೇರೆ ಬೇರೆ ಕ್ಷೇತ್ರಗಳಲ್ಲಿ ರಮೇಶ್‌ ಜಾರಕಿಹೊಳಿ ಹಸ್ತಕ್ಷೇಪದಿಂದ ಅಸಮಾಧಾನಗೊಂಡಿದ್ದ ಜಿಲ್ಲೆಯ ನಾಯಕರು ಗೋಕಾಕದಲ್ಲೇ ಬದಲಾವಣೆ ಮಾಡಿ ದರೆ ಹೇಗೆ ಎಂಬ ಪ್ರಯತ್ನಕ್ಕೆ ಮುಂದಾಗಿದ್ದರು. ಈಗ ಸದಾಶಿವ ಗುದಗಗೋಳ ಅವರು ಟಿಕೆಟ್‌ಗೆ ಅರ್ಜಿ ಹಾಕಿರುವುದು ಅಸಮಾಧಾನಿತ ಮುಖಂಡರಿಗೆ ಬಹಳ ಮುಖ್ಯ ಅಸ್ತ್ರ ಸಿಕ್ಕಂತಾಗಿದೆ. ಈ ಅಸ್ತ್ರದ ಮೂಲಕ ಜಿಲ್ಲೆಯ ನಾಯಕರು ಜಾರಕಿಹೊಳಿ ಬುಡಕ್ಕೇ ಕೈ ಹಾಕಿದ್ದಾರೆ.

ಇದಕ್ಕೆ ಪೂರಕವಾಗಿ ಅಥಣಿಯಲ್ಲಿ ಮಹೇಶ್‌ ಕುಮಟಳ್ಳಿಗೆ ಟಿಕೆಟ್‌ ನೀಡದಿದ್ದರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ. ಬದಲಾಗಿ ನಿವೃತ್ತಿಯಾಗುತ್ತೇನೆ ಎಂದು ರಮೇಶ್‌‌ ಜಾರಕಿಹೊಳಿ ಬಹಿರಂಗವಾಗಿ ಹೇಳಿರುವುದು ಸಹ ಅನುಮಾನಕ್ಕೆ ಎಡೆಮಾಡಿದೆ.

ಇನ್ನೂ ನಿಲ್ಲದ ಸಿಡಿ ಆತಂಕ: ಮೂಲಗಳ ಪ್ರಕಾರ ರಮೇಶ್‌ ಜಾರಕಿಹೊಳಿ ಇನ್ನೂ ಸಿಡಿ ಹಗರಣದ ಆತಂಕದಿಂದ ಸಂಪೂರ್ಣ ಹೊರಬಂದಿಲ್ಲ. ಅದರ ಅಳುಕು ಇನ್ನೂ ಕಾಡುತ್ತಿದೆ. ಇದನ್ನೇ ಕಾರಣವಾಗಿಟ್ಟುಕೊಂಡು ಬಿಜೆಪಿ ವರಿಷ್ಠರು ಟಿಕೆಟ್‌ ನೀಡಲು ನಿರಾಕರಿಸಿದರೆ ಆಗ ತಮ್ಮ ಬದಲಿಗೆ ಮಗ ಅಮರನಾಥ ಹೆಸರು ಮುಂದೆ ಮಾಡಲು ರಮೇಶ್‌ ಚಿಂತನೆ ನಡೆಸಿದ್ದಾರೆ. ಇದೇ ಕಾರಣದಿಂದ ಈಗ ಗೋಕಾಕದಲ್ಲಿ ಅಮರನಾಥ ಅವರ ಪೋಸ್ಟರ್‌ಗಳು ಹೆಚ್ಚಾಗಿ ಕಾಣುತ್ತಿವೆ.

ಬಿಜೆಪಿ ವರಿಷ್ಠರು ಈ ಹಂತದಲ್ಲಿ ಗೋಕಾಕದಲ್ಲಿ ಹೊಸಮುಖಕ್ಕೆ ಮನ್ನಣೆ ನೀಡುವುದು ಮತ್ತು ಬದಲಾವಣೆಗೆ ಪ್ರಯತ್ನ ಮಾಡುವುದು ಬಹಳ ಅನುಮಾನ. ಒಂದು ವೇಳೆ ಅಂತಹ ಪ್ರಯತ್ನಕ್ಕೆ ವರಿಷ್ಠರು ಮುಂದಾಗಿದ್ದೆಯಾದರೆ ಆಗ ಇಡೀ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಲಿದೆ.

~ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next