ಬೆಳಗಾವಿ: ಕಾಂಗ್ರೆಸ್ ನಾಯಕರ ಮೇಲೆ ಉದ್ದೇಶ ಪೂರ್ವಕವಾಗಿ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ರಾಜಕೀಯ ಪ್ರೇರಿತ ದಾಳಿ. ಕಾಂಗ್ರೆಸ್ ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗುತ್ತಿದೆ.
ಈಗ ಇಬ್ಬರನ್ನು ಗುರಿಯಾಗಿಸಿದ್ದು, ಮುಂದೆ ಮತ್ತಷ್ಟು ನಾಯಕರ ಮೇಲೆ ದಾಳಿಯಾಗುತ್ತದೆ. ಇದನ್ನು ನಾನು ಸಾಕಷ್ಟು ಸಲ ಹೇಳಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಅದರಲ್ಲಿ ಎರಡು ಮಾತಿಲ್ಲ. ಡಿ.ಕೆ.ಶಿವಕುಮಾರ ಸಮರ್ಥವಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಹೆಬ್ಟಾಳಕರ ಅವರ ಮೇಲೆ ಇಡಿ ವಿಚಾರಣೆ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ರಮೇಶ ಜಾರಕಿಹೊಳಿ ಹೆಸರು ಸಹ ಇಡಿ ವಿಚಾರಣೆಯ ಪ್ರಸ್ತಾಪದಲ್ಲಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ರಮೇಶ ಈಗಾಗಲೇ ಖಾಲಿಯಾಗಿದ್ದಾನೆ. ನಾನು ಸಾಲದ ಸುಳಿಯಲ್ಲಿ ಇದ್ದೇನೆ ಎಂದು ಸ್ವತಃ ರಮೇಶ ಅವರೇ ಹೇಳಿದ್ದಾರೆ. ಅವರ ಆಸ್ತಿಯನ್ನೆಲ್ಲಾ ಅಳಿಯ ಅಂಬಿರಾವ್ ದೋಚಿದ್ದಾರೆ ಎಂದು ಹೇಳಿದರು.
ರಮೇಶ ಜಾರಕಿಹೊಳಿ ಬಗ್ಗೆ ಈಗ ಏನೂ ಮಾತನಾಡುವುದಿಲ್ಲ. ಎಲ್ಲವನ್ನೂ ಗೋಕಾಕದಲ್ಲಿ ನಡೆಯುವ ಸಮಾವೇಶದಲ್ಲಿ ಮಾತನಾಡುತ್ತೇನೆ. ರಮೇಶ ಜಾರಕಿಹೊಳಿ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ನಂತರ ಈ ಸಮಾವೇಶ ಮಾಡುತ್ತೇವೆ. ಅಲ್ಲಿಯವರೆಗೂ ಕಾಯಬೇಕು ಎಂದರು.
ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರತಿಭಟನಾ ಸಭೆಗೂ ಮತ್ತು ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಉಪಚುನಾವಣೆಗೆ ಕಳೆದ ಮೂರ್‍ನಾಲ್ಕು ತಿಂಗಳಿಂದ ತಯಾರಿ ನಡೆದಿದೆ. ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಪರಿಶೀಲನೆಯಲ್ಲಿದೆ. ಗೋಕಾಕದಲ್ಲಿ ನಾನು ಹೇಳಿದವರಿಗೆ ಟಿಕೆಟ್ ನೀಡಲಾಗುವುದು ಎಂದರು.