ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿಗೆ ತನ್ನ ಕುಟುಂಬಕ್ಕಿಂತ ಅಳಿಯನ ಬಗ್ಗೆ ಹೆಚ್ಚು ಕಾಳಜಿ ಇದೆ. ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಉದ್ದೇಶದಿಂದ ಈಗ ಕಾಂಗ್ರೆಸ್
ಪಕ್ಷ ತೊರೆಯುತ್ತಿರಬಹುದು ಎಂದು ಸಚಿವ ಸತೀಶ ಜಾರಕಿಹೊಳಿ ಕುಟುಕಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ತಮ್ಮ ಅಳಿಯ ಅಂಬಿರಾವ್ ಪಾಟೀಲ ಅವರಿಗೆ ಮಹಾರಾಷ್ಟ್ರದ ಗಡಿಂಗ್ಲಜ ಕ್ಷೇತ್ರದಿಂದ ವಿಧಾನಸಭೆ ಟಿಕೆಟ್ ಕೊಡಿಸಲು ರಮೇಶ ಬಿಜೆಪಿ ಸೇರುತ್ತಿರಬಹುದೆಂದು ಅವರು ಹೊಸ ಬಾಂಬ್ ಸಿಡಿಸಿದರು.
ರಮೇಶಗೆ ಬದಟಛಿತೆ ಎಂಬುದೇ ಇಲ್ಲ. ಈಗ ಕೆಲಸ ಇಲ್ಲದ ಕಾರಣ ಬೆಳಗ್ಗೆ ಒಂದು ಸಂಜೆಯೊಂದು ಮಾತನಾಡುತ್ತಾನೆ ಎಂದು ಏಕವಚನದಲ್ಲಿ ಟೀಕಿಸಿದ ಅವರು, ಮೈತ್ರಿ ಸರಕಾರ ಬೀಳಿಸುವಷ್ಟು ಸಂಖ್ಯಾಬಲ ರಮೇಶ ಬಳಿ ಇಲ್ಲ.
ಹೀಗಾಗಿ ಅವರ ಯಾವುದೇ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಈಗಾಗಲೇ ಸರ್ಕಾರ ಉರುಳಿಸಲು ಮೂರ್ನಾಲ್ಕು ಬಾರಿ ಪ್ರಯತ್ನಿಸಿದರೂ ಆಗಿಲ್ಲ. ಈಗಲೂ ಅದನ್ನೇ ಮಾಡುತ್ತಿದ್ದಾನೆ ಎಂದರು. ರಮೇಶ ಇರಲಿ ಮಹೇಶ ಇರಲಿ ರಾಜೀನಾಮೆ ಕೊಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಮಹೇಶ ಕುಮಠಳ್ಳಿ ಲೋಕಸಭೆ ಚುನಾವಣೆಯಲ್ಲಿ ನಮ್ಮ ಜೊತೆ ಕೆಲಸ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಬಿಜೆಪಿ ಪರ ಮಾಡು ಅಂತ ಹೇಳಿದರೂ ಅವರು ಮಾಡಿಲ್ಲ. ಹೀಗಾಗಿ ಕುಮಠಳ್ಳಿ ಬಗ್ಗೆ ಅನುಮಾನ ಪಡುವುದು ಬೇಡ ಎಂದರು.