ನವದೆಹಲಿ: ಪತಂಜಲಿಯ ತಪ್ಪು ಮಾಹಿತಿ ಜಾಹೀರಾತು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಬಾಬಾ ರಾಮದೇವ್, ಪತಂಜಲಿಯ ಸಿಇಒ ಆಚಾರ್ಯ ಬಾಲಕೃಷ್ಣ ಮತ್ತು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಂಗ ನಿಂದನೆಯ ಸಂಬಂಧ ಪಂತಜಲಿ ಸಲ್ಲಿಸಿದ್ದ ಅಫಿಡವಿಟ್ ಸಂಪೂರ್ಣ ನಿರ್ಲಕ್ಷ್ಯದಿಂದ ಕೂಡಿದೆ. ಪತಂಜಲಿ ನಿಯಮವನ್ನು ಉಲ್ಲಂ ಸುತ್ತಿದ್ದರೂ ಕೇಂದ್ರ ಸರ್ಕಾರವೇಕೆ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ನ್ಯಾ..ಹಿಮಾ ಕೊಹ್ಲಿ ಮತ್ತು ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ನ್ಯಾಯಪೀಠ ಆಕ್ಷೇಪಿಸಿತು.
ಜಾಹೀರಾತಿಗೆ ಸಂಬಂಧಿಸಿದಂತೆ ಪತಂಜಲಿ ಸಲ್ಲಿಸಿದ್ದ ಬೇಷರತ್ ಕ್ಷಮೆಯಾಚನೆಯೂ ಕಾಟಾಚಾರಕ್ಕೆ ಸಲ್ಲಿಸಿದಂತಿದೆ. ಇದು ಅಸಮರ್ಥನೀಯ ಹಾಗೂ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿದ್ದು, ಪತಂಜಲಿ ಕೋರ್ಟ್‌ಗೆ ಸುಳ್ಳು ಹೇಳಿದೆ ಎಂದು ಹೇಳಿತು.
ತಪ್ಪು ದಾರಿಗೆಳೆಯುವ ಜಾಹೀರಾತು ಪ್ರದರ್ಶಿಸುತ್ತಿರುವ ಪತಂಜಲಿ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಕೋರ್ಟ್ ಮೆಟ್ಟಿಲೇರಿದೆ.
ಜಾಹೀರಾತು ಪ್ರಸಾರ ನಿಲ್ಲಿಸುವಂತೆ ಕೋರ್ಟ್‌ನ ಆದೇಶವು ತನ್ನ ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ ಎಂಬ ಪತಂಜಲಿಯ ಹೇಳಿಕೆಗೆ ಕೋರ್ಟ್ ವ್ಯಘ್ರವಾಯಿತು. “”ಪತಂಜಲಿಯ ಈ ಸಮರ್ಥನೆಯನ್ನು ಒಪ್ಪಲಾಗದು. ಕೋರ್ಟ್ ನೀಡುವ ಆದೇಶವನ್ನು ಗೌರವಿಸಬೇಕು” ಎಂದು ನ್ಯಾ.ಹಿಮಾ ಕೊಹ್ಲಿ ಅವರು, ಪತಂಜಲಿಯ ಪರ ವಕೀಲ ಕೈ ಮುಗಿದು ನಿಂತ ಬಳಿಕ ಹೇಳಿದರು.
ಬಾಬಾ ರಾಮದೇವ್ ಅವರಿಗೆ ಕೊನೆಯ ಅವಕಾಶ ನೀಡುತ್ತಿದ್ದೇವೆ. ಅವರು ಸೂಕ್ತವಾದ ರೀತಿಯಲ್ಲಿ ಅಫಿಡವಿಟ್ ಸಲ್ಲಿಸಬೇಕು ಎಂದು ಹೇಳಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಏ.10ಕ್ಕೆ ಮುಂದೂಡಿತು.