Advertisement

karnataka election 2023: ಪಕ್ಷದ ನಿರ್ಣಯಕ್ಕೆ ಬದ್ಧ ಎಂದ ರಾಮದಾಸ್‌

10:26 PM Apr 18, 2023 | Team Udayavani |

ಮೈಸೂರು: ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ತಪ್ಪಿರುವ ಶಾಸಕ ಎಸ್‌.ಎ.ರಾಮದಾಸ್‌ ಅವರು ತಾವು ಪಕ್ಷದ ನಿರ್ಣಯಕ್ಕೆ ಬದ್ಧರಾಗಿದ್ದು ಅಭ್ಯರ್ಥಿ ಟಿ.ಎಸ್‌.ಶ್ರೀವತ್ಸ ಅವರ ಗೆಲುವಿಗೆ ಶ್ರಮಿಸುವುದಾಗಿ ಪ್ರಕಟಿಸಿದ್ದಾರೆ.

Advertisement

ಮಂಗಳವಾರ ಸಂಜೆ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕ್ಷೇತ್ರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿದರು. ಮಾತಿನ ಮಧ್ಯೆ ಭಾವುಕರಾದರು. ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡರು. ಅವರ ಕಣ್ಣಾಲಿಗಳಲ್ಲಿ ನೀರಾಡಿತು.

ಬಿಜೆಪಿ ಅಭ್ಯರ್ಥಿ ಟಿ.ಎಸ್‌.ಶ್ರೀವತ್ಸ ಅವರು ಏ.20 ನಾಮಪತ್ರ ಸಲ್ಲಿಸುವಾಗ ಜೊತೆಯಲ್ಲಿರುತ್ತೇನೆ. ಅವರ ಗೆಲುವಿಗೆ ಶ್ರಮಿಸುತ್ತೇನೆ. ಪಕ್ಷ ನನಗೆ ತಾಯಿ ಇದ್ದಂತೆ. ಪ್ರಧಾನಿ ಮೋದಿ ಅವರೊಂದಿಗೆ ತಮಗೆ 30 ವರ್ಷಗಳ ಬಾಂಧವ್ಯವಿದೆ. ಮೋದಿ ಅವರು ತಮಗೆ ತಂದೆಯ ಸ್ಥಾನದಲ್ಲಿದ್ದಾರೆ. ಅವರೊಂದಿಗಿನ ಬಾಂಧವ್ಯವನ್ನು ಉಳಿಸಿಕೊಳ್ಳಬೇಕಿದೆ ಎಂದು ರಾಮದಾಸ್‌ ಭಾವುಕರಾದರು.

ಪಕ್ಷದ ತಮ್ಮ ಬೆಂಬಲಿಗರು ಪಕ್ಷೇತರಾಗಿ ಸ್ಪರ್ಧಿಸಿ ಎಂದು ಒತ್ತಡ ಹೇರಿದರು. ಪಕ್ಷೇತರರಾಗಿ ನಿಂತಿದ್ದರೂ ಸುಮಾರು 13 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ ಅಂಥ ಸಮೀಕ್ಷಾ ವರದಿ ತಿಳಿಸಿತ್ತು. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯ. ಒಂದು ವೇಳೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದರೂ ವಾಪಸ್‌ ಬಿಜೆಪಿಗೆ ಬರುತ್ತಿದ್ದೇನಲ್ಲ ಎಂದು ಯೋಚಿಸಿದೆ ಎಂದರು.

ಗುಂಪುಗಾರಿಕೆಯಿಂದ ಟಿಕೆಟ್‌ ಮಿಸ್‌: ನನಗೆ ಟಿಕೆಟ್‌ ತಪ್ಪಿರುವ ಬಗ್ಗೆ ಯಾವುದೇ ಪೋಸ್ಟ್‌ಮಾರ್ಟಮ್‌ ಮಾಡುವುದಿಲ್ಲ. ಟಿಕೆಟ್‌ ತಪ್ಪಲು ಪಕ್ಷದಲ್ಲಿರುವ ಗುಂಪುಗಾರಿಕೆ ಕಾರಣ ಎಂಬುದು ಗೊತ್ತಿದೆ. ನನಗೆ ಎಷ್ಟೇ ಕಷ್ಟ ಬಂದರೂ ಅನುಭವಿಸುತ್ತೇನೆ.  ನನ್ನ ಜೀವನದಲ್ಲಿ ಒಳ್ಳೆಯದು ಆಗಿದೆ. ಯಾತನೆ ಪಟ್ಟು ಕಣ್ಣೀರೂ ಹಾಕಿದ್ದೇನೆ. ನಾನು ಇವತ್ತು ಸಂತೋಷವಾಗಿದ್ದೇನೆ, ತೃಪ್ತಿ ಇದೆ ಎಂದು ರಾಮದಾಸ್‌ ಗದ್ಗದಿತರಾದರು.

Advertisement

ಕ್ಷೇತ್ರದಲ್ಲಿ ಮೋದಿ ಯುಗ ಉತ್ಸವ:
ಬಿಜೆಪಿಯಲ್ಲಿ ತಾವು ಅನುಭವಿಸಿದ ಯಾತನೆಯನ್ನು ರಾಮದಾಸ್‌ ಸೂಕ್ಷ್ಮವಾಗಿ ವಿವರಿಸಿದರು. ಸಚಿವ ಸ್ಥಾನ ತಪ್ಪಿದ್ದನ್ನು ಪ್ರಸ್ತಾಪಿಸಿದರು. ಮೈಸೂರು ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಬಿಜೆಪಿ ಶಾಸಕರು ಪಕ್ಷ ತ್ಯಜಿಸಿ ತಾವೊಬ್ಬರೇ ಉಳಿದಿದ್ದನ್ನು  ಪ್ರಸ್ತಾಪಿಸಿದರು. ಹುಬ್ಬಳ್ಳಿಯಲ್ಲಿ ಪಕ್ಷದ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು  ಕೃಷ್ಣರಾಜ ಕ್ಷೇತ್ರದ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಶ್ಲಾ ಸಿದ್ದನ್ನು ನೆನಪು ಮಾಡಿದರು.  ಕ್ಷೇತ್ರದಲ್ಲಿ ಮೋದಿ ಯುಗ ಉತ್ಸವವನ್ನು ಎರಡು ಬಾರಿ ನಡೆಸಿದ ತೃಪ್ತಿ ಇದೆ ಎಂದರು.

ನನ್ನ ನೋವನ್ನು ನಾನೇ ಒಳಗೇ ನುಂಗಿಕೊಳ್ಳುವೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರೀತಿ, ವಿಶ್ವಾಸ ಪಡೆದಿದ್ದೇನೆ. ನನಗೆ ಶಾಸಕ ಸ್ಥಾನ ಮುಖ್ಯವೋ ಅಥವ ದೇಶ ಮುಖ್ಯವೋ? ವೈಯಕ್ತಿಕ ಹಿತ ಮುಖ್ಯವಲ್ಲ, ದೇಶ ಮುಖ್ಯ. ಪಕ್ಷದ ಶಾಸಕ ಸ್ಥಾನಕ್ಕಿಂತ ದೇಶವನ್ನು ಆಳುತ್ತಿರುವ ವಿಶ್ವನಾಯಕ ನರೇಂದ್ರ ಮೋದಿ ಅವರು ನನಗೆ ಬಹಳ ಮುಖ್ಯ. ನನ್ನ ನೋವನ್ನು ನಾನೇ ಒಳಗೇ ನುಂಗಿಕೊಂಡು ವೈಯಕ್ತಿಕವಾಗಿ ನನಗೆ ಎಷ್ಟೇ ನಷ್ಟವಾದರೂ ದೇಶಕ್ಕೆ ನಷ್ಟವಾಗಬಾರದು. ನಾನು ಮಾದರಿಯಾಗಬೇಕು. ತಾಯಿ ಚಾಮುಂಡೇಶ್ವರಿ ದೇವಿಯ ಇಚ್ಛೆ ಏನಿದೆಯೋ ಅದು ಆಗುತ್ತದೆ ಎಂದು ರಾಮದಾಸ್‌ ಭಾವುಕರಾದರು.

ಅಭಿವೃದ್ಧಿಗಳು ಪೂರ್ಣಗೊಂಡಿಲ್ಲ:
ಕ್ಷೇತ್ರದಲ್ಲಿ ಇನ್ನೂ ಅನೇಕ ಅಭಿವೃದ್ಧಿಗಳು ಪೂರ್ಣಗೊಂಡಿಲ್ಲ. ಮತ್ತೆ ಶಾಸಕನಾಗಿ ಈ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕೆಂದು ಉದ್ದೇಶವಿತ್ತು. ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದರೂ ಟಿಕೆಟ್‌ ತಪ್ಪಿದ್ದಕ್ಕೆ ಬೇಸರವಾಗಿದೆ. ಮನಸ್ಸಿಗೆ ಸಹಜವಾಗಿ ನೋವಾಗಿದೆ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ನನ್ನ ಉಸಿರು ಇರುವವರೆಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ಇಟ್ಟುಕೊಳ್ಳುತ್ತೇನೆ. ಕಾರ್ಯಕರ್ತರ ಯೋಗಕ್ಷೇಮ ನಿಧಿಯನ್ನು ಸ್ಥಾಪಿಸಿ ಒಂದು ಕೋಟಿ ರೂಪಾಯಿಯನ್ನು ಠೇವಣಿಯಾಗಿ ಇಡುತ್ತೇನೆ. ಈ ಹಣದ ಬಡ್ಡಿ ದುಡ್ಡಿನಲ್ಲಿ ಕಾರ್ಯಕರ್ತರಿಗೆ ನೆರವಾಗುತ್ತೇನೆ ಎಂದರು ರಾಮದಾಸ್‌.

ಗುಂಪುಗಾರಿಕೆಯಿಂದ ಟಿಕೆಟ್‌ ಮಿಸ್‌
ನನಗೆ ಟಿಕೆಟ್‌ ತಪ್ಪಿರುವ ಬಗ್ಗೆ ಯಾವುದೇ ಪೋಸ್‌ಮಾರ್ಟಮ್‌ ಮಾಡುವುದಿಲ್ಲ. ಟಿಕೆಟ್‌ ತಪ್ಪಲು ಪಕ್ಷದಲ್ಲಿರುವ ಗುಂಪುಗಾರಿಕೆ ಕಾರಣ ಎಂಬುದು ಗೊತ್ತಿದೆ. ನನಗೆ ಎಷ್ಟೇ ಕಷ್ಟ ಬಂದರೂ ಅನುಭವಿಸುತ್ತೇನೆ.  ನನ್ನ ಜೀವನದಲ್ಲಿ ಒಳ್ಳೆಯದು ಆಗಿದೆ. ಯಾತನೆ ಪಟ್ಟು ಕಣ್ಣೀರೂ ಹಾಕಿದ್ದೇನೆ. ನಾನು ಇವತ್ತು ಸಂತೋಷವಾಗಿದ್ದೇನೆ, ತೃಪ್ತಿ ಇದೆ ಎಂದು ರಾಮದಾಸ್‌ ಗದ್ಗದಿತರಾದರು.

Advertisement

Udayavani is now on Telegram. Click here to join our channel and stay updated with the latest news.

Next