ನವದೆಹಲಿ: ಒಂದು ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ಹಮ್ ದೋ, ಹಮಾರೇ ದೋ” ಘೋಷಣೆಯನ್ನು ಜಾರಿಗೊಳಿಸುವ ಉದ್ದೇಶವಿದ್ದರೆ ದಲಿತ ಯುವತಿಯನ್ನು ಮದುವೆಯಾಗಲಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಬುಧವಾರ(ಫೆ.17, 2021) ತಿರುಗೇಟು ನೀಡಿದ್ದಾರೆ.
ಎಎನ್ ಐ ವರದಿ ಪ್ರಕಾರ, ಈ ಮೊದಲು ಕುಟುಂಬ ಯೋಜನೆಗಾಗಿ ಹಮ್ ದೋ, ಹಮಾರೆ ದೋ (ನಾವಿಬ್ಬರು, ನಮಗಿಬ್ಬರು) ಎಂಬ ಘೋಷಣೆಯನ್ನು ಉಪಯೋಗಿಸಲಾಗುತ್ತಿತ್ತು. ಒಂದು ವೇಳೆ ರಾಹುಲ್ ಗಾಂಧಿ ಈ ಘೋಷಣೆಯನ್ನು ಜಾರಿಗೊಳಿಸುವುದಿದ್ದರೆ, ರಾಹುಲ್ ಮೊದಲು ಮದುವೆಯಾಗಬೇಕು. ಅಷ್ಟೇ ಅಲ್ಲ ರಾಹುಲ್ ದಲಿತ ಯುವತಿಯನ್ನು ವಿವಾಹವಾಗಬೇಕು. ಈ ಮೂಲಕ ಜಾತಿ ನಿರ್ಮೂಲನೆಯ ಮಹಾತ್ಮ ಗಾಂಧಿ ಕನಸನ್ನು ನನಸು ಮಾಡಬೇಕು. ಇದರಿಂದ ಯುವಕರು ಪ್ರೇರಪಣೆ ಪಡೆಯಲಿದ್ದಾರೆ ಎಂದು ತಿಳಿಸಿದ್ದರು.
ರಾಹುಲ್ ಗಾಂಧಿ ಅಂರ್ತಜಾತಿ ವಿವಾಹವಾದರೆ ತಮ್ಮ ಸಚಿವಾಲಯ ಯೋಜನೆಯಡಿ 2.5 ಲಕ್ಷ ರೂಪಾಯಿ ನೀಡಲಿದೆ ಎಂದು ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.
ಕಳೆದವಾರ ಲೋಕಸಭೆಯ ಅಧಿವೇಶನದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ದೇಶವನ್ನು ನಾವಿಬ್ಬರು, ನಮಗಿಬ್ಬರು ಎಂಬ ಆಶಯದೊಂದಿಗೆ ಕೇವಲ ನಾಲ್ಕು ಜನರಿಗಾಗಿ ಮುನ್ನಡೆಸಲಾಗುತ್ತಿದೆ ಎಂದು ಟೀಕಿಸಿದ್ದರು.
ಇದಕ್ಕೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಕೂಡಾ ಹಮ್ ದೋ, ಹಮಾರೇ ದೋ ಆಶಯದೊಂದಿಗೆ ಮುಂದುವರಿಯುತ್ತಿದೆ, ಕಾಂಗ್ರೆಸ್ ನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ, ರಾಹುಲ್ ಮತ್ತು ಸೋನಿಯಾ ಗಾಂಧಿ…ಇದು ಮಗಳು ಮತ್ತು ಅಳಿಯನ ವ್ಯವಹಾರ ಎಂದು ತಿರುಗೇಟು ನೀಡಿದ್ದರು.