Advertisement
ಹಾರ್ಮೋನಿಯಂ ಅನ್ನೋದು ವಿದೇಶಿ ವಾದ್ಯ. ಇದಕ್ಕೆ ನಮ್ಮ ಸಂಗೀತವನ್ನು ಒಗ್ಗಿಸುವುದು ಹೇಗೆ? ಈ ಪ್ರಶ್ನೆಗೆ ಉತ್ತರದಂತೆ ಬದುಕಿದ್ದವರು ಪಂಡಿತ್ ರಾಂಭಾವು ಬಿಜಾಪುರೆ. ಆ ಕಾಲದಲ್ಲಿ ಹಾರ್ಮೋನಿಯಂ ಬಳಕೆ ಮಾಡುತ್ತಿದ್ದದ್ದೇ ಹಿಂದೂಸ್ತಾನಿ ಸಂಗೀತದಲ್ಲಿ. ವೀಣೆ ಪಿಟೀಲು ಪ್ರವರ್ಧಮಾನಕ್ಕೆ ಬರುತ್ತಿರುವ ಹೊತ್ತಲ್ಲಿ ಹಾರ್ಮೋನಿಯಂ ಕರ್ನಾಟಕ ಸಂಗೀತದಲ್ಲಿ ತಳ ಊರಿತ್ತು. ಸಿಂತಸೈಜರ್, ಕೀಬೋರ್ಡು, ಪಿಟೀಲು ಹೀಗೆ ಸಾಲು ವಾದ್ಯಗಳ ಬಂದರೂ ಹಿಂದೂಸ್ತಾನಿ ಸಂಗೀತದಲ್ಲಿ ಹಾರ್ಮೋನಿಯಂ ಸ್ಥಾನವನ್ನು ಅಲ್ಲಾಡಿಸಲು ಆಗಲಿಲ್ಲ. ಇಂಥ ಸಂದರ್ಭದಲ್ಲಿ ಸುಮಾರು 7-8 ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ, ಹಾರ್ಮೋನಿಯಂ ನಂಟು ಬೆಳಿಸಿಕೊಂಡಿದ್ದವರು ಈ ಸಂಗೀತಜ್ಜ.
Related Articles
Advertisement
ಬಿಜಾಪುರೆ ಅವರ ಬೆರಳ ತುದಿಗೆ ಕಿರಾಣ, ಆಗ್ರಾ, ಗ್ವಾಲಿಯರ್, ಜೈಪುರ ಗರಾಣಗಳು ಅಂಟಿಕೊಂಡಿದ್ದವು. ಬೆಳಗಾವಿಯಲ್ಲಿ ಶ್ರೀರಾಮಸಂಗೀತವಿದ್ಯಾಲಯ ಪ್ರಾರಂಭಿಸಿದರು. ಇದೇನು ದುಡ್ಡಿಗಾಗಿ ಶುರುಮಾಡಿದ್ದಲ್ಲ. ಬದಲಾಗಿ ವಿದ್ಯಾರ್ಜನೆಗಾಗಿ. ಸಂಗೀತ ಪ್ರಸರಣಕ್ಕೆ.
“ಹಾರ್ಮೋನಿಯಂ ಭವಿಷ್ಯ ಉಜ್ವಲವಾಗಬೇಕಾದರೆ ಅದನ್ನು ಕಲಿಯೋರ ಸಂಖ್ಯೆ ಜಾಸ್ತಿ ಆಗಬೇಕ್ರೀ. ಹಾಡುಗಾರರಷ್ಟು ನುಡಿಸಾಣಿಕೆ ಮಾಡೋರು ಇಲ್ಲ. ನುಡಿಸೋರು ಸಿಕ್ತಾರ. ಆದ್ರೆ ಶಾಸ್ತ್ರಬದ್ಧವಾಗಿ ನುಡಿಸೋರು ಸಂಖ್ಯೆ ಬಹಳ ಕಡಿಮೆ. ಹಾರ್ಮೋನಿಯಂ ಭವಿಷ್ಯ ನಿಂತಿರೋದು ಅದರ ಕಡೆ ಲಕ್ಷ್ಯಕೊಟ್ಟು ಅಭ್ಯಾಸ ಮಾಡೋರಿಂದ ಅಂದ ಮೇಲೆ ಅಂಥವರಿಗೆ ಮಾರ್ಗದರ್ಶನ ಮಾಡೋದು ಗುರುವಿನ ಕರ್ತವ್ಯ ಎನ್ನುತ್ತಲೇ ಜೀವನ ಮುಸ್ಸಂಜೆಯಲ್ಲೂ ಸಂಗೀತಾರ್ಜನೆ ಮಾಡುತ್ತಿದ್ದರು. ಸುಮಾರು 5-6 ದಶಕಗಳ ಕಾಲ ಸಂಗೀತ ಕಲಿಸುತ್ತಲೇ ಹದಿನೈದು ಸಾವಿರ ವಿದ್ಯಾರ್ಥಿಗಳ ಗುರುವಾದರು. “ನಮ್ಮ ಗುರುಗಳು ಯಾರೂ ಆವಿಷ್ಕಾರ ಮಾಡದ ಹಾರ್ಮೋನಿಯಂನ ಹೊಸ ಮುಖ ತೋರಿಸಿದರು. ಕೇವಲ ಟೈಪರೇಟರ್ ರೀತಿ ಇದ್ದ ಹಾರ್ಮೋನಿಯಂಗೆ ಅಭಿವ್ಯಕ್ತಿ ತಂದರು. ಇವರ ಪಾಠ ಉದ್ದೇಶ ಕಲಾಭಿರುಚಿ, ಸಂಗೀತ ಅಭಿರುಚಿ ಮೂಡಿಸೋದು ಅಂತ ನೆನಪಿಸಿಕೊಳ್ಳುತ್ತಾರೆ ಪಂಡಿತ್ ‘ ರವೀಂದ್ರಕಾಟೋಟಿ.
ಒಳ್ಳೇವೇದಿಕೆ ಕಲಾವಿದರು ಒಳ್ಳೆ ಗುರುಗಳು ಆಗೋದಿಲ್ಲ ಅನ್ನೋದನ್ನು ಸುಳ್ಳು ಮಾಡಿದ ಕೀರ್ತಿ ಈ ಬಿಜಾಪುರೆ ಅವರದ್ದು. ಜೀವನ ಮುಸ್ಸಂಜೆಯಲ್ಲೂ ಮಕ್ಕಳಿಗೆ ಪಾಠ ಹೇಳಿಕೊಡೋದು ಬಿಜಾಪುರೆಯವರ ಖುಷಿ, ಖುಷಿಯಾದ ಸಂಗತಿ.
ಅಜೊjàರೆ ಹಿಂಗ್ಯಾಕೇ ಅಂತ ಕೇಳಿದರೆ- ಸಂಗೀತ ಇಟ್ಟುಕೊಳ್ಳೋಕೆ ಅಲ್ಲ ಇರೋದು. ಮಂದಿಗೆ ಹಂಚೋಕೆ. 100ಜನಕ್ಕೆ ಹೇಳಿ ಕೊಟ್ರ. 10 ಜನರಲ್ಲಿ ಸಂಗೀತ ಉಳಿತದ ಅಂತ ಹೇಳ್ಳೋರು.
ಬಿಜಾಪುರೆ ಅವರ ವಿಶೇಷತೆ ಇಷ್ಟೇ ಅಲ್ಲ. ಅವರೂ ಹತ್ತೂ ಬೆರಳುಗಳಲ್ಲಿ ಹಾರ್ಮೋನಿಯಂ ನುಡಿಸುವುದು. ಬಹುಶ ಇಂಥದ್ದೊಂದು ಪರಿಣಿತ ಪಂಡಿತರು ನಮ್ಮ ಸಂಗೀತ ಕ್ಷೇತ್ರದಲ್ಲಿ ಕಡಿಮೆ. ಅಂತೆಯೇ ರಾಂಭಾವು ಸಹವಾದ್ಯ, ಸ್ವತಂತ್ರವಾದ್ಯಗಾರರಾಗಿ ಬೆರಗು ಮೂಡಿಸಿದ್ದು. ಸಹವಾದ್ಯ ಎಂದರೆ ಮುಖ್ಯಗಾಯಕನಿಗೆ ಏನು ಬೇಕು ಅದನ್ನು ನುಡಿಸುವುದು. ಅವರ ನಿರೀಕ್ಷೆಗೆ ತಕ್ಕಂತೆ, ಸ್ವರ, ಲಯ, ಭಾವಗಳನ್ನು ಸಮನ್ವಯಗೊಳಿಸುವ ಮಾಂತ್ರಿಕತೆ ಇವರಲ್ಲಿತ್ತು. ಸ್ವತಂತ್ರವಾದ್ಯ ಎಂದರೆ ಸೋಲೋ. ಇದನ್ನು ಕೇಳುವುದೇ ಸೌಭಾಗ್ಯ ಅನ್ನೋ ರೀತಿ ನುಡಿಸುತ್ತಿದ್ದರು ಬಿಜಾಪುರೆ. ಇವರ ಖಯ್ನಾಲ್, ಠುಮುರಿಗಳು ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಇರೋದು ಇದೇ ಕಾರಣಕ್ಕೆ. ಬೆರಳ ತುದಿಗಳಿಂದ ಹುಟ್ಟುವ ಕಾಫಿ, ಮಾಲ್‌ಕೌಂಸ್ ರಾಗಗಳು, ಅಲಂಕಾರಗಳ ನುಡಿಸಾಣಿಕೆಯಲ್ಲಿ ಬಹಳ ವಿಶೇಷವಾಗಿರುವುದು ಕೂಡ ಇಂಥಹುದೇ ಗುಣಗಳಿಂದ.
ರಾಂಭಾವು ಸಂಗೀತ ಜೊತೆ ಚೀಜ್‌ಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಇದಕ್ಕಾಗಿ ಚೀಜ್‌ಗಳ ಕಣಜ ಅಂತಲೂ ಕರೆಯುತ್ತಿದ್ದರು. ಇದು ಬಂದದ್ದು ಅಪ್ಪನಿಗಿದ್ದ ಸಾಹಿತ್ಯದ ಆಸಕ್ತಿಯಿಂದ. ಸಾಥ್ ನೀಡಲು ಹೋದಾಗ ಗವಾಯಿಗಳು ಹಾಡುವ ಹೊಸ, ಹೊಸ ಚೀಜ್‌ಗಳನ್ನು ಕಾರ್ಯಕ್ರಮದ ನಂತರ ಕೇಳಿ, ಬರೆದು ಸಂಗ್ರಹಿಸಿಕೊಳ್ಳುತ್ತಿದ್ದರಂತೆ. ಹೀಗಾಗಿ ಹೆಚ್ಚಾ ಕಮ್ಮಿ 500ಕ್ಕೂ ಹೆಚ್ಚು ಚೀಜ್‌ಗಳ ಸಂಗ್ರಹವಿದ್ದವು. 90ರ ಹರೆಯದರಲ್ಲೂ ಬಿಜಾಪುರೆ ಅವರ ಹಾರ್ಮೋನಿಯಂಮೇಲೆ ಕೈಯ್ನಾಡಿಸಿದರೆ ಅಲ್ಲಿ ನಾದಮಂಟಪ ನಿರ್ಮಾಣವಾಗಿಬಿಡೋದು. ಸ್ವರಗಳ ಜೊತೆ ಆಟವಾಡಲು ಕೂತರೆ ವಯಸ್ಸು ಕೂಡ ನಾಚಿ ಬಿಡುತ್ತಿತ್ತು. ಜೀವನ ಮುಸ್ಸಂಜೆಯಲ್ಲೂ ಸಪ್ತಸ್ವರಗಳ ಎಳೆ ಬಿಸಿಲು ಕಾಯಿಸುತ್ತಾ ಕೂರುತ್ತಿದ್ದ ರಾಂಭಾವು ಅವರು ಇಹಲೋಕ ತ್ಯಜಿಸಿದರೂ ತಮ್ಮ ಚೀಜ್, ಠುಮರಿಗಳ ಮೂಲಕ ಇನ್ನೂ ಬದುಕಿದ್ದಾರೆ. ಅವರು ಇದ್ದಿದ್ದರೆ ಇವತ್ತಿಗೆ 100 ವರ್ಷ.