ಸಿಂಧನೂರು: ಧರ್ಮದಲ್ಲಿ ರಾಜಕಾರಣ ಬೆರೆಸಬೇಡಿ. ಇಂತಹ ಚಟುವಟಿಕೆ ನಡೆಯುತ್ತಿರುವುದರಿಂದಲೇ ಈ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುವ ಪ್ರಯತ್ನಗಳಾಗುತ್ತಿವೆ ಎಂದು ರಂಭಾಪುರಿ ಖಾಸಾ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯರು ಹೇಳಿದರು.
ಅವರು ನಗರದ ಕುಷ್ಟಗಿ ರಸ್ತೆಯಲ್ಲಿನ ಕಾರುಣ್ಯಾಶ್ರಮದಲ್ಲಿ ಭಾನುವಾರ ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಭೀಮೇಶ ಕವಿತಾಳ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಮಾತನಾಡಿದರು. ಸಮಾಜದಲ್ಲಿ ಯಾವತ್ತೂ ಕೂಡ ಅಶಾಂತಿ ವಾತಾವರಣ ಮೂಡಿಸುವುದು ಒಳ್ಳೆಯದಲ್ಲ. ಈವತ್ತು ಸಾಕಷ್ಟು ಗೊಂದಲ ಸೃಷ್ಟಿಯಾಗಲು ಮೂಲ ಕಾರಣ ರಾಜಕಾರಣ. ರಾಜಕಾರಣಿಗಳು ಈ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಆಲೋಚಿಸಬೇಕು. ಉತ್ತಮ ಶಿಕ್ಷಣ ಮೂಲಮಂತ್ರವಾಗಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಇದೇ ವೇಳೆ ಕಾರುಣ್ಯಾಶ್ರಮಕ್ಕೆ 20 ಗುಂಟೆ ಜಾಗವನ್ನು ಕಲ್ಪಿಸಿದ ಬೂದಿ ಬಸವರಾಜ ಸ್ವಾಮಿ ಅವರನ್ನು ಶ್ಲಾಘಿಸಿದರು.
ಶಾಂತಿಗಾಗಿ ಜಾಗೃತಿ ಅವಶ್ಯ:
ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಮಾತನಾಡಿ, ಇಂದು ಜಗತ್ತಿನಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದ್ದು, ಜನ ಎಚ್ಚೆತ್ತುಕೊಳ್ಳಬೇಕು. ಅನಗತ್ಯ ವಿಷಯಗಳಿಗೆ ಮಹತ್ವ ನೀಡಬಾರದು. ಕೋಮುದಳ್ಳುರಿಯನ್ನು ಹಬ್ಬಿಸುವ ಪ್ರಯತ್ನಗಳನ್ನು ಎಲ್ಲರೂ ಒಗ್ಗಟ್ಟಾಗಿ ನಿಯಂತ್ರಿಸಲು ಜನ ಜಾಗೃತಗೊಳ್ಳಬೇಕು ಎಂದರು.
ವಿಶ್ರಾಂತ ಪ್ರಾಂಶುಪಾಲ ಡಾ.ಶಾಶ್ವತಸ್ವಾಮಿ ಮುಕ್ಕುಂದಿಮಠ, ಅಮರಸ್ವರ ಸಂಗಮ ಸಂಸ್ಥಾಪಕ ಬಸವರಾಜ ಗಸ್ತಿ, ಕಾರುಣ್ಯಾಶ್ರಮದ ಗೌರವಾಧ್ಯಕ್ಷ ಶರಣು ಪಾ.ಹಿರೇಮಠ, ಕಾರ್ಯಾಧ್ಯಕ್ಷ ವೀರೇಶ ಯಡಿಯೂರಮಠ, ಆಡಳಿತಾಧಿಕಾರಿ ಚನ್ನಬಸವಸ್ವಾಮಿ, ವನಸಿರಿ ಪೌಂಢೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಯುವಶಕ್ತಿ ಟ್ರಸ್ಟ್ ರಾಜ್ಯಾಧ್ಯಕ್ಷ ಸಂತೋಷ್ ಅಂಗಡಿ, ಮೌಲಪ್ಪ ಮಾಡಸಿರವಾರ, ವೀರೇಶ ಬಾವಿಮನೆ, ಶ್ರೀನಿವಾಸ ಮರಾಠಿ, ಪ್ರದಿಪ್ ಜಿಮ್, ಬೂದೇಶ ಮರಾಠಿ, ರಾಮಣ್ಣ ಸಾಸಲಮರಿ, ಪತ್ರಕರ್ತ ದುರುಗೇಶ್, ಮೌನೇಶ ಬುದ್ದಿನ್ನಿ, ಎಸ್.ಎನ್.ವೀರೇಶ ಸೇರಿದಂತೆ ಅನೇಕರು ಇದ್ದರು.