ಮಾತೆ ಮಹಾದೇವಿ ಮತ್ತು ಅವರ ಅನುಯಾಯಿಗಳ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ, ರಂಭಾಪುರಿ
ಜಗದ್ಗುರು ಪೀಠದ ಭಕ್ತರು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
Advertisement
ಹಳೆ ಪಿಬಿ ರಸ್ತೆಯಲ್ಲಿರುವ ರೇಣುಕ ಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಮಹಾತ್ಮಗಾಂಧಿ ವೃತ್ತ ತಲುಪಿತು. ನಂತರ ಶ್ರೀ ಜಯದೇವ ವೃತ್ತಕ್ಕೆ ತೆರಳಿದ ಪ್ರತಿಭಟನಾಕಾರರು ಮಾತೆ ಮಹಾದೇವಿ, ಅನುಯಾಯಿಗಳ ವಿರುದ್ಧ ವಾಗ್ಧಾಳಿ ನಡೆಸಿದರು. ಉಪ ವಿಭಾಗಾಧಿಕಾರಿ ಕಚೇರಿ ವೃತ್ತದಲ್ಲಿ 45 ನಿಮಿಷಗಳಿಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು. ಜಿಲ್ಲಾಧಿಕಾರಿಯವರೇ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮನವಿ ಸ್ವೀಕರಿಸಿದರು.
ಸಾವಿರಾರು ವರ್ಷದ ಭವ್ಯ ಇತಿಹಾಸ ಹೊಂದಿರುವ ಸನಾತನ ವೀರಶೈವ ಪೀಠಗಳಿಗೆ ಘೋರ ಅಪಚಾರ ಮಾಡಿದ್ದಾರೆ. ಕೂಡಲೇ ಮಾತೆ ಮಹಾದೇವಿ ಮತ್ತವರ ಅನುಯಾಯಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಮೂರ್ತಿಪೂಜೆ ಕಟುವಾಗಿ ವಿರೋಧಿಸುವ ಅವರು ಲಿಂಗವೂ ಒಂದು ಮೂರ್ತಿ ಎಂಬುದನ್ನೇ ಮರೆತಿದ್ದಾರೆ. ನಿಜವಾಗಿಯೂ ಮೂರ್ತಿಪೂಜೆ ವಿರೋಧಿಸುವ ಅವರು ಲಿಂಗ ಧರಿಸುವುದನ್ನು ತ್ಯಜಿಸಿ, ಬೇಕಾದ ಧರ್ಮ ಪ್ರಾರಂಭಿಸಿಕೊಳ್ಳಲಿ ಎಂದು ತಾಕೀತು ಮಾಡಿದರು. ವೀರಶೈವ ಧರ್ಮದ ಕುರಿತಂತೆ ಮಾತನಾಡಿರುವ ಗೊ. ರು.ಚ., ಚಂಪಾ, ಬಿ.ಆರ್. ಪಾಟೀಲ್ ಮೊದಲು ವೀರಶೈವ ಧರ್ಮದ ಬಗ್ಗೆ ತಿಳಿದುಕೊಂಡು ಮಾತನಾಡಲಿ. ಏನೇನೋ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಹರಪನಹಳ್ಳಿ ತಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯರು, ತಾವರಕೆರೆಯ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಕೊಟ್ಟೂರು, ಜಕ್ಕಲಿ ಹಿರೇಮಠ, ಹಾರನಹಳ್ಳಿ, ಬಿಳಿಕೆ ಹಿರೇಮಠ,
ರಾಮಲಿಂಗೇಶ್ವರ ಹಿರೇಮಠಗಳ ಶಿವಾಚಾರ್ಯರು, ಜಿಪಂ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ಅಥಣಿ ಎಸ್. ವೀರಣ್ಣ,
ದೇವರಮನಿ ಶಿವಕುಮಾರ್ ಒಳಗೊಂಡಂತೆ ವಿವಿಧ ಸಂಘ, ಸಂಸ್ಥೆ, ಸಮಿತಿ ಪದಾಧಿಕಾರಿಗಳು ಇದ್ದರು.