“ರಂಜಾನ್ ’- ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ ತಂಡ.
ಸುಮಾರು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಸಂಗಮೇಶ ಉಪಾಸೆ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದು, ಜತೆಗೆ ಚಿತ್ರಕಥೆ-ಸಂಭಾಷಣೆ ಹಾಗೂ ಸಾಹಿತ್ಯ ಒದಗಿಸಿದ್ದಾರೆ. ಪಂಚಾಕ್ಷರಿ. ಸಿ.ಈ ನಿರ್ದೇಶನ ಮಾಡಿದ್ದಾರೆ. ಮಡಿವಾಳಪ್ಪ. ಎಂ.ಗೂಗಿ ನಿರ್ಮಾಣ ಮಾಡಿದ್ದಾರೆ.
ಚಿತ್ರದ ಬಗ್ಗೆ ಹೇಳುವ ಚಿತ್ರತಂಡ, “ಚಿತ್ರದಲ್ಲಿ ಈ ದೇಶದ ಹಲವಾರು ಹಸಿದವರ, ಉಪವಾಸವಿದ್ದವರ, ದಮನಿತರ, ದಲಿತರ, ಬಡವರ, ಹಿಂದುಳಿದವರ ಶಿಕ್ಷಣದ, ಆರೋಗ್ಯದ, ನೆಲದ ಹಕ್ಕಿನ ಅಂಶಗಳು ಇರಲಿದೆ. ಇಸ್ಲಾಂ ಸಮುದಾಯದ ಕಲ್ಮಾ, ರೋಜಾ, ನಮಾಜ್, ಜಕಾತ್, ಹಜ್ ಎಂಬ ಐದು ಮೂಲಭೂತ ತತ್ವಗಳ ಪರಿಪಾಲನೆಯನ್ನು, ಉಳ್ಳವರು ಮತ್ತು ಇಲ್ಲದವರ ಎರಡು ಕುಟುಂಬಗಳ ಮಧ್ಯೆ ಹೋಲಿಕೆ ಮಾಡುವ ಸನ್ನಿವೇಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ’ ಎನ್ನುವುದು ತಂಡದ ಮಾತು.
ಚಿತ್ರದಲ್ಲಿ ಪ್ರೇಮಾವತಿ ಉಪಾಸೆ, ಬೇಬಿ ಈಶಾನಿ ಉಪಾಸೆ, ಮಾಸ್ಟರ್ ವೇದಿಕ್ ಉಳಿದಂತೆ ಭಾಸ್ಕರ್, ಮಾಸ್ಟರ್ ನೀಲ್, ಜಯಲಕ್ಷ್ಮೀ ಮಧುರಾಜ್, ಮಂಜುನಾಥ್ ಕರುವಿನಕಟ್ಟೆ, ಆರ್ಯನ್, ಆದ್ಯತಾ ಭಟ್ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಇಂದ್ರ ಸಂಗೀತ, ರಂಗಸ್ವಾಮಿ.ಜಿ ಛಾಯಾಗ್ರಹಣ, ಡಿ.ಮಲ್ಲಿ ಸಂಕಲನವಿದೆ. ಮಂಗಳೂರು, ಉಡುಪಿ, ಕಟಪಾಡಿ, ಗುಲ್ವಾಡಿ, ಕುಂದಾಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.