Advertisement

Ramayana tour: ರಾಮಾಯಣ ಪ್ರವಾಸ ಹೀಗೆ ಮಾಡಿ…

02:52 PM Jan 22, 2024 | Team Udayavani |

ರಾಮಾಯಣ ಭಾರತದ ಪ್ರತಿ ಮಣ್ಣ ಕಣದಲ್ಲಿ ಅವಿತ ಪವಿತ್ರಕಥೆ ಮಾತ್ರವಲ್ಲ. ದೇಶದ ಭವ್ಯ ಪರಂಪರೆಯ ದ್ಯೋತಕ. ದೇಶದ ಯಾವುದೇ ಮೂಲೆಗೆ ಹೋದರೂ ರಾಮಾಯಣದ ಒಂದಿಲ್ಲೊಂದುಕಂಪು ಸಿಗುತ್ತದೆ. ರಾಮಾಯಣದ ಒಂದೊಂದು ಕುರುಹುಗಳನ್ನು ಬೆನ್ನತ್ತಿ ಹೋದರೆ ಸಿಗುವುದು ಒಂದೊಂದು ಪವಿತ್ರ ಕ್ಷೇತ್ರ. ರಾಮಾಯಣದ ಪ್ರತಿ ಪಾತ್ರವೂ, ರಾಮ ನಡೆದ ಹಾದಿಯಪ್ರತಿ ಹೆಜ್ಜೆಯೂ ಒಂದೊಂದು ವೈಶಿಷ್ಟ್ಯವನ್ನು ಆ ಸ್ಥಳಗಳಲ್ಲಿ ಸೃಷ್ಟಿಸಿದೆ. ರಾಮಾಯಣಕ್ಕೆ ಬೆಸೆದುಕೊಂಡ ಅಂಥ ಕೆಲವು ಆಧ್ಯಾತ್ಮಿಕ ಕೇಂದ್ರಗಳ ಪರಿಚಯ ಹೀಗಿದೆ…

Advertisement

ಜಾನಕಿಯ ತವರೂರು ಜನಕಪುರಿ: ಸೀತಾರಾಮರ  ಕಲ್ಯಾಣಕ್ಕೆ ಇಲ್ಲಿದೆ ಪುರಾವೆ: 

ಶ್ರೀರಾಮನ ಪತ್ನಿ ಸೀತಾದೇವಿಯ ಮತ್ತೂಂದು ಹೆಸರು ಜಾನಕಿ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಜನಕ ಮಹಾರಾಜನಿಗೆ ಭೂಮಿಯಲ್ಲಿ ಸೀತೆ ಸಿಕ್ಕ ಹಿನ್ನೆಲೆಯಲ್ಲಿ ಆಕೆಯನ್ನು ಜನಕರಾಜನ ಪುತ್ರಿ ಎಂದು ಗುರುತಿಸಲು ಈ ಜಾನಕಿ ಎಂಬ ಹೆಸರಿತ್ತು ಎನ್ನುತ್ತದೆ ಪುರಾಣ. ಅಂಥ ಜಾನಕಿಯ ತವರೂರೇ ನೇಪಾಳದಲ್ಲಿರುವ ಜನಕಪುರ!. ಪುರಾಣಗಳ ಪ್ರಕಾರ, ಮಿಥಿಲೆಯ ರಾಜಕುಮಾರಿಯಾಗಿದ್ದ ಸೀತೆ ಆಡಿ ಬೆಳೆದಿದ್ದು, ಶ್ರೀ ರಾಮನನ್ನು ವರಿಸಿದ್ದು ಕೂಡ ಇದೇ ಜಾಗದಲ್ಲಿ ಎನ್ನಲಾಗುತ್ತದೆ. ಸೀತಾ-ರಾಮರ ವಿವಾಹ ನೆರವೇರಿದ ವಿವಾಹ ಮಂಟಪವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಪ್ರತಿ ವರ್ಷ ನವೆಂಬರ್‌-ಡಿಸೆಂಬರ್‌ನಲ್ಲಿ ನಡೆಯುವ ವಿವಾಹ ಪಂಚಮಿಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದಲೂ ಜನರು ಇಲ್ಲಿಗೆ ಆಗಮಿಸುತ್ತಾರೆ. ಜನಕಪುರದಲ್ಲಿ ಜಾನಕಿ ದೇವಿಗಾಗಿ ಭವ್ಯ ಮಂದಿರವಿದ್ದು, ರಾಮನಿಗಾಗಿಯೂ ಪ್ರತ್ಯೇಕವಾದ ಮಂದಿರ ವೊಂದನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ ಭಾರತದ ಮಧ್ಯಪ್ರದೇಶದ ಟಿಕಮ್‌ಘರ್‌ನ ರಾಣಿ ವೃಷಭಾನು ಸೀತಾ ಮಂದಿರವನ್ನು ಹಾಗೂ ಅಯೋಧ್ಯೆಯ ರಾಜ ಅಮರ್‌ ಸಿಂಗ್‌ ಈ ರಾಮ ಮಂದಿರವನ್ನು ನಿರ್ಮಿಸಿದ್ದಾರೆಂದು ಇತಿಹಾಸದಲ್ಲಿ ನಮೂದಿಸಲಾಗಿದೆ. 70ಕ್ಕೂ ಅಧಿಕ ಪುಣ್ಯ ಕೊಳಗಳು ಈ ನಗರದಲ್ಲಿರುವ ಹಿನ್ನೆಲೆಯಲ್ಲಿ ಪಾಂಡ್‌ ಸಿಟಿ ಎಂತಲೂ ಜನಕಪುರ ಪ್ರಸಿದ್ಧಿಹೊಂದಿದೆ. ನೇಪಾಳ ರಾಜಧಾನಿ ಕಠ್ಮಂಡುವಿನಿಂದ 225 ಕಿ.ಮೀ. ದೂರದಲ್ಲಿ ರುವ ಈ ನಗರಕ್ಕೆ ಬಸ್‌, ರೈಲಿನ ವ್ಯವಸ್ಥೆಯೂ ಇದೆ.

ನೋಡಲು ಏನಿದೆ? : 

 • ಜಾನಕಿ ಮಂದಿರ
 • ರಾಮಮಂದಿರ
 • ಸೀತಾರಾಮ ವಿವಾಹ ಮಂಟಪ
 • 70ಕ್ಕೂ ಹೆಚ್ಚು ಕಲ್ಯಾಣಿಗಳು
 • ನೇಪಾಳದಲ್ಲಿದೆ ಜನಕಪುರ
 • ವರ್ಷಕ್ಕೊಮ್ಮೆ ವಿವಾಹ ಪಂಚಮಿಯ ಆಚರಣೆ
 • ರಾಣಿ ವೃಷಭಾನು ನಿರ್ಮಿಸಿದ ಮಂದಿರ

ಸೀತೆ ಕುಳಿತಿದ್ದ ಅಶೋಕವನ:

Advertisement

ರಾವಣ ಸೀತಾದೇವಿಯನ್ನು ಲಂಕೆಗೆ ಹೊತ್ತೂಯ್ದು ಆಕೆಯನ್ನು ಬಂಧಿಸಿಟ್ಟಿದ್ದ ಜಾಗವೇ ಅಶೋಕವನಂ ಪ್ರಸಕ್ತ ಶ್ರೀಲಂಕಾದ ಸೀತಾ ಎಲಿಯಾ ಎಂಬ ಪಟ್ಟಣದಲ್ಲಿ ಈ ಪ್ರದೇಶವನ್ನು ಗುರುತಿಸಲಾಗಿದೆ. ಸೀತಾ ಅಮ್ಮನ್‌ ಕೋವಿಲ್‌ ಎಂದೇ ದೇಗುಲವೊಂದನ್ನು ನಿರ್ಮಿಸಲಾಗಿದ್ದು, ಈ ದೇಗುಲವಿರುವ ಪ್ರದೇ ಶವೇ ಅಶೋಕ ವನಂ ಎನ್ನಲಾಗುತ್ತದೆ. ರಾಜಧಾನಿ ಕೊಲಂಬೋದಿಂದ160 ಕಿ.ಮೀ. ದೂರದಲ್ಲಿ ಈ ಪ್ರದೇಶವಿದೆ. ದೇಗುಲವಿರುವ ಈ ಪ್ರದೇಶದಿಂದ ಕೇವಲ 1 ಕಿ.ಮೀ.ದೂರದಲ್ಲಿಯೇ ಅಶೋಕ ವಾಟಿಕ ವಿದ್ದು, ಇದು ಸೀತೆಯನ್ನು ಹನುಮಂತ ಭೇಟಿಯಾದ ಸ್ಥಳ ಎನ್ನಲಾಗುತ್ತದೆ. ಅದೇ ಪ್ರದೇಶದಲ್ಲಿ ಅಶೋಕ ವೃಕ್ಷವಿದ್ದ ಕುರುಹು ಇಂದಿಗೂ ಇದೆ ಎಂದೂ ಹೇಳಲಾಗುತ್ತದೆ. ಇಲ್ಲಿಗೆ ಹಡಗಿನ ಮೂಲಕ ತೆರಳಿ ತಲುಪಲು ಬಸ್‌ ವ್ಯವಸ್ಥೆಯೂ ಇದೆ.

ನೋಡಲು ಏನಿದೆ?:

 • ಸೀತಾ ಕೋವಿಲ್‌
 • ಅಶೋಕ ವಾಟಿಕ

ವನವಾಸದಲ್ಲಿ ರಾಮನ ಮೊದಲ ವಿರಾಮ ತಾಣ ಪ್ರಯಾಗ್‌ರಾಜ್‌: 

ವನವಾಸಕ್ಕೆಂದು ಅಯೋಧ್ಯೆ ತೊರೆದ ಶ್ರೀರಾಮ, ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣ ನೊಂದಿಗೆ ಮೊದಲು ವಿಶ್ರಮಿಸಿದ ಜಾಗವೇ ಪ್ರಯಾಗರಾಜ್‌!. ಅಯೋಧ್ಯೆಯಿಂದ 169 ಕಿ.ಮೀ.ದೂರದಲ್ಲಿರುವ ಪ್ರಯಾಗವು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಾನ. ವನವಾಸದಿಂದ ಹಿಂದಿರುಗಿದಾಗಲೂ ಪ್ರಯಾಗಕ್ಕೆ ಭೇಟಿ ನೀಡಿ ಬಳಿಕ ಅಯೋಧ್ಯೆ ತಲುಪಿದನೆಂದು ಪುರಾಣಗಳಲ್ಲಿ ಉಲ್ಲೇಖೀತವಾಗಿದೆ. ಇನ್ನು ಸಂಗಮಸ್ಥಾನಗಳಲ್ಲೇ ಶ್ರೇಷ್ಠ ಸ್ಥಾನವೆಂಬ ಗರಿ ಪ್ರಯಾಗರಾಜ್‌ಗೆ ಇದೆ. ಅಲ್ಲದೇ, ವಿಶ್ವ ಪಾರಂಪರಿಕ ಸಂಸ್ಕೃತಿ ಎಂದು ಯುನೆಸ್ಕೋ ವತಿಯಿಂದ ಗುರುತಿಸಲ್ಪಟ್ಟ ಖ್ಯಾತ ಕುಂಭಮೇಳ ಜರುಗುವುದು ಇದೇ ಪ್ರಯಾಗ್‌ರಾಜ್‌ನಲ್ಲಿ. ಮಹಾರಾಷ್ಟ್ರದ ನಾಸಿಕ್‌, ಉತ್ತರಾಖಂಡದ ಹರಿದ್ವಾರ, ಮಧ್ಯಪ್ರದೇಶದ ಉಜ್ಜಯನಿಯನ್ನು ಬಿಟ್ಟರೆ ದೇಶದಲ್ಲಿ ಕುಂಭಮೇಳ ನಡೆಯುವ ಪ್ರಮುಖ ಸ್ಥಾನ ಪ್ರಯಾಗ್‌ರಾಜ್‌! ಉತ್ತರ ಪ್ರದೇಶದ ರಾಜಧಾನಿ ಲಖನೋದಿಂದ 200 ಕಿ.ಮೀ.ದೂರದಲ್ಲಿ ಪ್ರಯಾಗವಿದ್ದು, ಬಸ್ಸು, ರೈಲು, ಟ್ಯಾಕ್ಸಿ ಮೂಲಕವೂ ಪ್ರಯಾಣಿಸುವ ವ್ಯವಸ್ಥೆ ಇದೆ.

ನೋಡಲು ಏನಿದೆ? : 

 • ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಾನ
 • 12 ವರ್ಷಕ್ಕೊಮ್ಮೆ ಕುಂಭಮೇಳ

ವನವಾಸದಲ್ಲಿ ಹೆಚ್ಚು ಕಾಲ ವಿರಮಿಸಿದ ತಾಣ ಚಿತ್ರಕೂಟ; ಭರತ ಭ್ರಾತೃತ್ವಕ್ಕೆ ಸಾಕ್ಷಿ : 

ವನವಾಸಕ್ಕೆಂದು ಅಯೋಧ್ಯೆ ತೊರೆದ ರಾಮ, ಲಕ್ಷ್ಮಣ, ಸೀತೆ ಬಹುಕಾಲದವರೆಗೆ ತಮ್ಮ ವನವಾಸ ಸಮಯವನ್ನು ಕಳೆದ ಪ್ರದೇಶ ಚಿತ್ರಕೂಟ. ಅತ್ರಿಮುನಿ, ಅಗಸ್ತ್ಯ ಮಹರ್ಷಿ ಸೇರಿದಂತೆ ಹಲವಾರು ಋಷಿಮುನಿಗಳ ಆಶ್ರಮಗಳೂ ಇದೇ ಚಿತ್ರಕೂಟ ದಲ್ಲಿ ಇತ್ತು ಎನ್ನಲಾಗುತ್ತದೆ. ಕೈಕೇಯಿ ಪುತ್ರನಾದ ಭರತನು ತಂದೆ ದಶರಥನ ಸಾವಿನ ಬಳಿಕ ಅಣ್ಣ ರಾಮನನ್ನು ಹುಡುಕುತ್ತಾ ಬಂದು, ಮತ್ತೆ ಅಯೋಧ್ಯೆಯಲ್ಲಿ ಆಡಳಿತ ನಡೆಸು ಬಾ ಎಂದು ರಾಮನಿಗೆ ಮನವಿ ಮಾಡಿದ ಜಾಗವೂ ಇದೇ ಚಿತ್ರಕೂಟ ಎನ್ನುತ್ತದೆ ಪುರಾಣ. ಅಷ್ಟೇ ಅಲ್ಲದೇ, ದಶರಥ ಮಹಾರಾಜನ ಅಂತಿಮ ಕ್ರಿಯೆಗಳನ್ನೂ ರಾಮ ಇಲ್ಲೇ ನೆರವೇರಿಸಿದ ಹಾಗೂ ವನವಾಸ ಮುಗಿದ ಬಳಿಕ ಸೀತೆಯನ್ನು ಮತ್ತೆ ಕಾಡಿಗೆ ಕಳಿಸುವಾಗ ಆಕೆ ತನ್ನನ್ನು ಚಿತ್ರಕೂಟಕ್ಕೇ ಕಳುಹಿಸುವಂತೆ ಕೇಳಿದ್ದಳು ಎಂದು ನಂಬಲಾಗಿದೆ. ಅಂಥ ಮಹತ್ವದ ಧಾರ್ಮಿಕ ಕ್ಷೇತ್ರವಾದ ಚಿತ್ರಕೂಟ ಇರುವುದು ಈಗಿನ ಮಧ್ಯಪ್ರದೇಶದಲ್ಲಿ. ಚಿತ್ರಕೂಟದಲ್ಲಿ ರಾಮಘಾಟ್‌, ಹನುಮನ್‌ ಧಾರಾ, ಜಾನಕಿ ಕುಂಡ್‌, ವಾಲ್ಮೀಕಿ ಆಶ್ರಮದಂಥ ಹಲವು ಧಾರ್ಮಿಕ ಕ್ಷೇತ್ರಗಳಿದ್ದು, ದೇಶ- ವಿದೇಶಗಳು ಸೇರಿ ವಿವಿಧೆಡೆಯಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ರಾಜಧಾನಿ ಭೋಪಾಲ್‌ನಿಂದ ಚಿತ್ರಕೂಟಕ್ಕೆ 524 ಕಿ.ಮೀ. ದೂರವಿದ್ದು, ಬಸ್‌ ವ್ಯವಸ್ಥೆಯೂ ಇದೆ.

ನೋಡಲು ಏನಿದೆ?:

 • ರಾಮಘಾಟ್‌
 • ಹನುಮಾನ್‌ ಧಾರಾ
 • ಜಾನಕಿ ಕುಂಡ್‌
 • ವಾಲ್ಮೀಕಿ ಆಶ್ರಮ
 • ಶ್ರೀರಾಮನು ದಶರಥ ಮಹಾರಾಜನ ಅಂತ್ಯ ಕ್ರಿಯೆ ನಡೆಸಿದ ಜಾಗ
 • ಭರತನಿಗೆ ಶ್ರೀರಾಮ ಪಾದುಕೆ ನೀಡಿದ್ದೂ ಇದೇ ಸ್ಥಳದಲ್ಲಿ

ಶೂರ್ಪನಖಿ ಮೂಗು, ಕಿವಿ ಕತ್ತರಿಸಿದ ತಾಣ ಪಂಚವಟಿಯೇ ಈಗಿನ ನಾಸಿಕ್‌:

ಚಿತ್ರಕೂಟದಿಂದ ಹೊರಟ ರಾಮ ಮುಂದೆ ಪ್ರವೇಶಿಸಿದ ಪ್ರದೇಶವೇ ಪಂಚವಟಿ! ವಟಿ ಎಂದರೆ ಆಲದಮರ.. ಐದು ಆಲದಮರಗಳು ಸುತ್ತುವರೆದಿರುವ ಗುಹೆಯೊಂದರಲ್ಲಿ ಶ್ರೀರಾಮ ಪರಿವಾರದೊಂದಿಗೆ ಉಳಿದಿದ್ದ ಎಂದು ನಂಬಲಾಗಿದೆ. ಪ್ರಸಕ್ತ ಮಹಾರಾಷ್ಟ್ರದ ನಾಸಿಕ್‌ ಎಂಬಲ್ಲಿ ಈ ಪ್ರದೇಶವಿದೆ. ನಾಸಿಕ್‌ ಪ್ರದೇಶಕ್ಕೂ ರಾಮಾಯಣದ ಪ್ರಮುಖ ಘಟನೆಯೊಂದು ತಳುಕು ಹಾಕಿಕೊಂಡಿದೆ. ಪಂಚವಟಿಯಲ್ಲಿ ವಾಸವಾಗಿದ್ದ ರಾಮ ಪರಿವಾರವನ್ನು ರಾವಣನ ತಂಗಿ ಶೂರ್ಪನಖಿ ಕಂಡಿದ್ದು ಇದೇ ನಾಸಿಕದಲ್ಲಿ. ಲಕ್ಷ್ಮಣ ಆಕೆಯ ಮೂಗು ಕತ್ತರಿಸಿದ್ದರಿಂದಲೇ ಈ ಪ್ರದೇಶಕ್ಕೆ ನಾಸಿಕ (ಮೂಗು) ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಇಂದಿಗೂ ನಾಸಿಕ್‌ನಲ್ಲಿ ಹಲವು ಪಂಚವಟಿಯ ಗುಹೆ, ದೇಗುಲಗಳಿದ್ದು, ಮುಂಬೈನಿಂದ ನಾಸಿಕ್‌ಗೆ 166.2 ಕಿ.ಮೀ.ದೂರವಿದೆ. ಪ್ರವಾಸಿಗರು ರೈಲು, ಬಸ್‌, ಟ್ಯಾಕ್ಸಿ ಮೂಲಕ ಪ್ರಯಾಣಿಸಬಹುದಾದ ವ್ಯವಸ್ಥೆ ಇದೆ.

ನೋಡಲು ಏನಿದೆ?:

 • ಪಂಚವಟಿ ಸೀತಾ ಗುಹೆ
 • ಕಾಲಾರಾಮ ಮಂದಿರ
 • ಕಪಾಲೇಶ್ವರ ಮಂದಿರ
 • ಆಲದ ಮರಗಳ ಗುಹೆಯೇ ನಿವಾಸ
 • ಪ್ರಯಾಣಕ್ಕೆ ಬಸ್‌, ರೈಲು, ಟ್ಯಾಕ್ಸಿ ಲಭ್ಯ

ನಾಲ್ಕೈದು ರಾಜ್ಯದಲ್ಲಿ ವ್ಯಾಪಿಸಿದೆ ರಾಮ-ಸೀತೆ ಅಲೆದ ದಂಡಕಾರಣ್ಯ :   ರಾಮಾಯಣದಲ್ಲಿ ಅತಿ ಪ್ರಮುಖ ಭಾಗವಾಗಿರುವ ಪ್ರದೇಶ ದಂಡಕಾರಣ್ಯ! ಈ ಮಹಾ ಅರಣ್ಯ ರಾಮಾಯಣ ಕಥನದ ಪ್ರಮುಖ ತಿರುವು. ಮಹರ್ಷಿ ಮಾಂಡವ್ಯರಿಂದ ಶಾಪಕ್ಕೊಳಗಾಗಿ ರಾಕ್ಷಸರ ವಾಸಸ್ಥಳವಾಗಿ ದಂಡಕಾರಣ್ಯ ಮಾರ್ಪಾಡಾಯಿತು. ಇದೇ ದಂಡಕಾರಣ್ಯಕ್ಕೆ ವನವಾಸಕ್ಕೆಂದು ಆಗಮಿದ ರಾಮ ದಂಡಕನೆಂಬ ಮಹಾರಾಕ್ಷಸನನ್ನು ಸಂಹರಿಸಿದನು ಎನ್ನುತ್ತದೆ ಪುರಾಣ. ಇಲ್ಲಿಂದಲೇ ಸೀತೆಯನ್ನು ರಾವಣ ಅಪಹರಿಸಿದ ಎಂದು ತಿಳಿದುಬರುತ್ತದೆ. 92,000 ಚದರ ಕಿ.ಮೀ ವ್ಯಾಪ್ತಿಯ ಈ ಅರಣ್ಯ ಪ್ರದೇಶವು ಹಿಂದೆ ಈಗಿನ ಛತ್ತೀಸ್‌ಗಢ, ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಪ್ರಾಂತ್ಯಗಳನ್ನೆಲ್ಲಾ ಆವರಿಸಿತ್ತು ಇಲ್ಲೆಲ್ಲಾ ರಾಮ ಸಂಚರಿಸಿದ್ದನ್ನು ಎನ್ನುವುದು ನಂಬಿಕೆ. ದಂಡಕಾರಣ್ಯ ವಿವಿಧ ರಾಜ್ಯಗಳಲ್ಲಿ ವಿಸ್ತರಿಸಿರುವ ಹಿನ್ನೆಲೆಯಲ್ಲಿ ರಾಮಾಯಾಣದ ವಿವಿಧ ಘಟನೆಗಳು ಈ ಅರಣ್ಯದ ಒಂದೊಂದು ಭಾಗದಲ್ಲಿ ನಡೆದಿದೆ ಎನ್ನಲಾಗುತ್ತದೆ. ಆದರೆ ಪ್ರಸಕ್ತ ಛತ್ತೀಸ್‌ಗಢದಲ್ಲಿ ಮಾತ್ರ ದಂಡಕಾರಣ್ಯ ಪ್ರದೇಶವನ್ನು ಗರುತಿಸಲಾಗಿದೆ. ಬಸ್ತಾರ್‌ ಜಿಲ್ಲೆಯಲ್ಲಿ ಈ ಅರಣ್ಯ ಪ್ರದೇಶವಿದ್ದು, ಛತ್ತೀಸ್‌ಗಢ ರಾಜಧಾನಿ ರಾಯು³ರದಿಂದ ಇಲ್ಲಿಗೆ 264 ಕಿ.ಮೀ. ದೂರವಿದೆ. ಬಸ್ತಾರ್‌ನ ದಂತೇಶ್ವರಿ ದೇಗುಲದಂತ ಪ್ರಸಿದ್ಧ ತಾಣಗಳಿಗೆ ತೆರಳುವವರು ಇದೇ ದಂಡಕಾರಣ್ಯದ ಮಾರ್ಗವಾಗಿ ಸಂಚರಿಸುತ್ತಾರೆ.

ನೋಡಲು ಏನಿದೆ?: 

 • ರಾಮವನಗಮನ್‌ ಪಥ
 • ಚಂದಕೂರಿ
 • ಶಬರಿ ಮಂದಿರ
 • ರಾಮಗುಹೆ 92,000 ಚದರ ಕಿ. ಮೀ ವ್ಯಾಪ್ತಿಯ ಈ ಅರಣ್ಯ ಪ್ರದೇಶ
 • ಈಗಿನ ಛತ್ತೀಸ್‌ಗಢ, ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶವೇ ಅಂದಿನ ದಂಡಕಾರಣ್ಯ
 • ಇಲ್ಲೇ ನಡೆದಿತ್ತು ಸೀತಾಪಹರಣ

ಸೀತಾಪಹರಣದ ಮಾಹಿತಿ ತಿಳಿದ ಲೇಪಾಕ್ಷಿಯಲ್ಲಿ ಜಟಾಯು ಪರಾಕ್ರಮ: 

ಸೀತಾದೇವಿಯನ್ನು ಪುಷ್ಪಕ ವಿಮಾನದಲ್ಲಿ ರಾವಣ ಹೊತ್ತೂಯ್ಯುತ್ತಿದ್ದಾಗ ಜಟಾಯು ಹೆಸರಿನ ಗರುಡ ಪಕ್ಷಿಯೊಂದು ರಾವಣನನ್ನು ತಡೆಯಲು ಯತ್ನಿಸಿ ಆತನೊಂದಿಗೆ ಅವಿರತ ಹೋರಾಟ ಮಾಡಿದ ಕಥೆ ತಿಳಿದೇ ಇದೆ. ಪಕ್ಷಿಯ ಮೇಲೆ ಕತ್ತಿ ಎತ್ತಿ ಅದರ ರೆಕ್ಕೆಯನ್ನೇ ಕತ್ತರಿಸಿ ರಾವಣ ಮುಂದೆ ಸಾಗುತ್ತಾನೆ. ಸೀತೆಯನ್ನು ಉಳಿಸಲು ಹೋರಾಡಿ, ರೆಕ್ಕೆ ಕಡಿದುಕೊಂಡು ಜಟಾಯು ಕೆಳಗೆ ಬಿದ್ದ ಪ್ರದೇಶವೇ ಆಂಧ್ರಪ್ರದೇಶದ ಲೇಪಾಕ್ಷಿ!. ರಕ್ತದ ಮಡುವಲ್ಲೇ ರಾಮನ ಆಗಮಕ್ಕಾಗಿ ಕಾದ ಆ ಪಕ್ಷಿಯನ್ನು ರಾಮ ಇದೇ ಲೇಪಾಕ್ಷಿಯಲ್ಲಿ ಭೇಟಿಯಾಗಿ ಸೀತೆಯ ಅಪಹರಣದ ಬಗ್ಗೆ ಮಾಹಿತಿ ಪಡೆದು, ಜಟಾಯುವಿಗೆ ಮೋಕ್ಷ ಕರುಣಿಸಿದ ಎನ್ನಲಾಗುತ್ತದೆ. ಅಂಥ ಐತಿಹ್ಯವುಳ್ಳ ಲೇಪಾಕ್ಷಿ ಆಂಧ್ರಪ್ರದೇಶದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದು. ಇಲ್ಲಿನ ವೀರಭದ್ರ ದೇಗುಲ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಮತ್ತು ವಾಸ್ತು ಶಿಲ್ಪ ಪರಂಪರೆಯ ಮಹತ್ತರಕೊಡುಗೆಯಾಗಿದೆ. ಆಂಧ್ರಪ್ರದೇಶದ ಅನಂತಪುರದಿಂದ ಲೇಪಾಕ್ಷಿಗೆ 124 ಕಿ.ಮೀ. ಅಂತರವಿದ್ದು ಬಸ್‌, ಕ್ಯಾಬ್‌ ವ್ಯವಸ್ಥೆ ಲಭ್ಯವಿದೆ.

ನೋಡಲು ಏನಿದೆ?: 

 • ವೀರಭದ್ರ ದೇಗುಲ
 • ಲೇಪಾಕ್ಷಿ ನಂದಿ
 • ಲೇಪಾಕ್ಷಿ ದೇವಾಲಯ

ಲಂಕೆಗೆ ಹೊರಟ ತಾಣ ರಾಮೇಶ್ವರಂ:  ವಾನರ ಸೈನ್ಯದೊಂದಿಗೆ ಲಂಕಾಪಟ್ಟಣ ಪ್ರವೇಶಿಸಲು ರಾಮ ಸೇತುವೆ ನಿರ್ಮಿಸಿದ್ದೇ ತಮಿಳು ನಾಡಿನ ರಾಮೇಶ್ವರದಲ್ಲಿ ಎಂಬ ಉಲ್ಲೇಖವಿದೆ. ಸಮುದ್ರಕ್ಕೆ ಸೇತುವೆ ನಿರ್ಮಿಸುವ ಮುನ್ನ ರಾಮೇಶ್ವರದಲ್ಲಿ ಶಿವಲಿಂಗವನ್ನು ಶ್ರೀರಾಮ ಪ್ರತಿಷ್ಠಾಪಿಸಿ ರಾವಣ ನೊಂದಿಗಿನ ಯುದ್ಧಕ್ಕೆ ಗೆಲುವು ಸಿಗಲೆಂದು ಪ್ರಾರ್ಥಿಸಿದ ಹಾಗೂ ಸೀತೆಯೊಂದಿಗೆ ಹಿಂದಿರುಗುವಾಗಲೂ ರಾಮೇಶ್ವರಕ್ಕೆ ಬಂದು ಶಿವಲಿಂಗದ ದರ್ಶನ ಮಾಡಿದನೆಂದು ಪುರಾಣಗಳಲ್ಲಿ ತಿಳಿದುಬರುತ್ತದೆ. ಆ ಶಿವಲಿಂಗವನ್ನು ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದ್ದು, ರಾಮೇಶ್ವರಂ ದೇಗುಲ ದರ್ಶನಕ್ಕೆಂದೇ ದೇಶ- ವಿದೇಶಗಳಿಂದಲೂ ಪ್ರಯಾಣಿಕರು ಆಗಮಿಸುತ್ತಾರೆ. ತಮಿಳುನಾಡಿನ ಮದುರೈನಿಂದ ರಾಮೇಶ್ವರಂಗೆ 172 ಕಿ.ಮೀ. ದೂರವಿದೆ. ರಾಜಧಾನಿ ಚೆನ್ನೈನಿಂದ 558 ಕಿ.ಮೀ. ದೂರವಿದ್ದು, ಸಾರಿಗೆ ಸಂಪರ್ಕವೂ ಉತ್ತಮವಾಗಿದೆ.

ನೋಡಲು ಏನಿದೆ?:

 • ರಾಮನಾಥ ಸ್ವಾಮಿ

ದೇವಸ್ಥಾನ

 • ಧನುಷ್ಕೋಡಿ ಬೀಚ್‌
 • ಪಂಬನ್‌ ಸೇತುವೆ
 • ಪಂಚಮುಖೀ ಹನುಮ
 • ಅಗ್ನಿತೀರ್ಥಂ
Advertisement

Udayavani is now on Telegram. Click here to join our channel and stay updated with the latest news.

Next