Advertisement

Ramayana puppetry: ರಾಮಾಯಣ ಬೊಂಬೆಯಾಟ ಮಲೇಷ್ಯಾದಲ್ಲಿ ಜನಪ್ರಿಯ

10:50 AM Jan 19, 2024 | Team Udayavani |

ಜಾವನೀಜ್‌ ವ್ಯಾಪಾರಸ್ಥರು ತಮ್ಮ ವೇಯಾಂಗ್‌ ಕುಲಿಟ್‌ ಎಂದು ಕರೆಯುವ ನಾಟಕ ಪ್ರದರ್ಶನಕ್ಕಾಗಿ ಮಲೇಷ್ಯಾಕ್ಕೆ ಭೇಟಿ ಕೊಟ್ಟ ವೇಳೆ ರಾಮಾಯಣವು ಮಲೇಷ್ಯಾವನ್ನು ತಲುಪಿತು. ಮಲೇಷ್ಯಾದ ಆಡಳಿತದ ವ್ಯವಸ್ಥೆ ಹಾಗೂ ರಾಜತಾಂತ್ರಿಕ ವಿಚಾರಗಳ ಪರಿಕಲ್ಪನೆಗಳಲ್ಲಿ ಮಾದರಿಯ ಬದಲಾವಣೆಗಳನ್ನು ಮಾಡಿಕೊಳ್ಳುವಲ್ಲಿ ರಾಮಾಯಣವು ಬಹುದೊಡ್ಡ ಪಾತ್ರವನ್ನು ವಹಿಸಿದೆ. ಅಲ್ಲಿನ ಸ್ಥಳೀಯ ರಾಜಕೀಯ ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೆ ತಕ್ಕಂತೆ ಮಲೇಷ್ಯಾ ಆವೃತ್ತಿಯ ರಾಮಾಯಣದಲ್ಲಿ ಬಹಳಷ್ಟು ಬದಲಾವಣೆಗಳು° ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ಮಲೇಷ್ಯಾದ ಜನರು ಇಸ್ಲಾಂ ಧರ್ಮವನ್ನು ಪಾಲಿಸುವುದರಿಂದ ಧಾರ್ಮಿಕ ನಂಬಿಕೆಗಳೂ ಈ ಬದಲಾವಣೆಯ ಮೇಲೆ ಪರಿಣಾಮ ಬೀರಿದೆ. ಮಲೇ ಷ್ಯಾದಲ್ಲಿ ಸಾಹಿತ್ಯಿಕ ಹಾಗೂ ಜಾನಪದ ಶೈಲಿಯ ರಾಮಾಯಣವನ್ನು ಕಾಣಬಹುದು.

Advertisement

ಹಿಕಾಯತ್‌ ಸೆರಿ ರಾಮಾ ಇದು ಹಿಂದೂ ರಾಮಾಯಣದ ಮಲೇಷ್ಯಾ ಭಾಷೆಯಲ್ಲಿರುವ ಕೃತಿ. ಇದು ಹಿಕಾಯತ್‌ ವಿಧದಲ್ಲಿದೆ. ಹಿಕಾಯತ್‌ ಸೆರಿ ರಾಮಾವು ಲಿಖೀತ ಹಾಗೂ ಮೌಖೀಕ ರೂಪದಲ್ಲಿದೆ. ವಾಲ್ಮೀಕಿ ರಾಮಾಯಣದ ಕತೆಯ ರೂಪದಲ್ಲೇ ಈ ಕೃತಿಯಿದ್ದು, ಪಾತ್ರಗಳ ಹೆಸರನ್ನು ಅಲ್ಲಿನ ಪ್ರದೇಶಕ್ಕೆ ಅನುಗುಣವಾಗಿ ಬದಲಾಯಿಸಲಾಗಿದೆ. ಹಿಕಾಯತ್‌ ಸೆರಿ ರಾಮಾದ ಮೂಲ ಉದ್ದೇಶವು ನೀತಿ, ಪ್ರೀತಿ, ನಿಷ್ಠೆ ಹಾಗೂ ನಿಸ್ವಾರ್ಥ ಭಕ್ತಿಯ ಆದರ್ಶಗಳನ್ನು ಜನರಿಗೆ ತೋರಿಸುವುದಾಗಿದೆ.

ಜಾನಪದ ಆವೃತ್ತಿಯ ರಾಮಾಯಣದಲ್ಲಿ ನೃತ್ಯದ ಮೂಲಕ ರಾಮಾಯಣವನ್ನು ಪ್ರಸ್ತುತ ಪಡಿಸಲಾಗುತ್ತದೆ. ಕಥಾರೂಪಕದಲ್ಲಿ ಪರಿಣಿತಿ ಹೊಂದಿದ ಕಲಾವಿದರು ಸಾಮನ್ಯವಾಗಿ ಇದರ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ವೆಯಾಂಗ್‌ ಕುಲಿತ್‌ ಸಿಯಾಮ್‌ ಎನ್ನುವ ನೆರಳುಬೆಳಕಿನ ಆಟವು ಇಲ್ಲಿನ ಬಹಳ ಪ್ರಮುಖ ಪ್ರದರ್ಶನವಾಗಿದೆ. ಇದನ್ನು ಹಿಕಾಯತ್‌ ಮಹಾರಾಜಾ ವಾನಾ ಎಂದು ಕರೆಯಲಾಗುತ್ತದೆ. ಇದನ್ನು ಮಲೇಷ್ಯಾ ಹಾಗೂ ಥೈಲ್ಯಾಂಡ್‌ನ‌ ಗಡಿಯಲ್ಲಿರುವ ಕೆಲಾಟ್ನಾನ ರಾಜ್ಯದಲ್ಲಿ ಹೆಚ್ಚು ಪ್ರದರ್ಶಿಸಲಾಗುತ್ತದೆ. ಇಸ್ಲಾಂ ಧರ್ಮದವರು ಹೆಚ್ಚು ವಾಸಿಸುವ ಈ ಭಾಗವು ಮಲೇಷ್ಯಾದ ನೆರಳುಬೆಳಕಿನ ಬೊಂಬೆಯಾಟದ ಪ್ರಮುಖ ನೆಲೆಯಾಗಿದೆ. ಇಲ್ಲಿ ಬೊಂಬೆಯಾಟವನ್ನು ಪ್ರದರ್ಶಿಸುವ ಹೆಚ್ಚಿನವರು ಇಸ್ಲಾಂ ಧರ್ಮದವರೇ ಆಗಿದ್ದಾರೆ. ವರ್ಷಕ್ಕೆ ಅಂದಾಜು 200ರಿಂದ 300 ಪ್ರದರ್ಶನಗಳನ್ನು ನೀಡುತ್ತಾರೆ. ವಿವಿಧ ಪ್ರದೇಶಕ್ಕೆ ತಕ್ಕಂತೆ ಕತೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಕಲಾವಿದರು ರಾಮಾಯಣದ ಅತ್ಯಂತ ರೋಚಕ ಹಾಗೂ ಪ್ರಮುಖ ಭಾಗಗಳನ್ನು ಆಯ್ಕೆ ಮಾಡಿ ಪ್ರದರ್ಶನ ನೀಡುತ್ತಾರೆ. ಉದಾಹರಣೆಗೆ ಸೀತಾ- ರಾಮಾ ಕಲ್ಯಾಣ, ಸೀತಾ ಅಪಹರಣ, ರಾಮ – ರಾವಣ ಯುದ್ಧ ಹೀಗೆ ಮುಂತಾದವು.

ಮಲೇಷ್ಯಾದಲ್ಲಿ ರಾಮಾಯಣವು ಹೆಚ್ಚಾಗಿ ಮನೋರಂಜನೆಯ ಹಾಗೂ ಸಾಮಾಜಿಕ ಜ್ಞಾನದ ಭಾಗವಾಗಿ ಉಪಯೋಗಿಸಲಾಗುತ್ತದೆ. ಮಲೇಷ್ಯಾದಲ್ಲಿ ರಾಮನನ್ನು ನೀತಿವಂತ ಮಾನವನ ಮಾದರಿಯೆಂದು ನೋಡಲಾಗುತ್ತದೆ. ಈ ಗುಣದಿಂದಲೇ ಅವನು ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿ ಜಯಿಸಿದನು ಎಂದು ನಂಬಲಾಗುತ್ತದೆ. 1989ರಲ್ಲಿ ಮಲೇಷ್ಯಾದ ಅತೀ ದೊಡ್ಡ ರಾಮನ ದೇಗುಲವನ್ನು ಇಲ್ಲಿನ ಪೆರಾಕ್‌ ರಾಜ್ಯದಲ್ಲಿ ನಿರ್ಮಿಸಲಾಗಿದೆ. ದೇಗುಲವು ರಾಮನ ಕಥೆಗೆ ಸಂಬಂಧಿಸಿದ 1001 ಶಿಲ್ಪಕಲೆ ಹಾಗೂ ಚಿತ್ರಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next