ನವದೆಹಲಿ: 21 ದಿನಗಳ ಲಾಕ್ ಡೌನ್ ಕಾರಣದಿಂದ ಪ್ರೇಕ್ಷಕರ ಒತ್ತಾಯದ ಮೇರೆಗೆ ದೂರದರ್ಶನದಲ್ಲಿ ಮರು ಪ್ರಸಾರ ಆಗುತ್ತಿರುವ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳಿಂದಾಗಿ ಬಹುತೇಕರು ಈಗ ದೂರದರ್ಶನದತ್ತ ಮುಖ ಮಾಡುವಂತಾಗಿದೆ.
ದೂರದರ್ಶನದಲ್ಲಿ ವೀಕ್ಷಕರ ಸಂಖ್ಯೆ ಏರಿಕೆಯಾಗಿರುವ ಕುರಿತು ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹೇಳಿದೆ. ಭಾರತದಲ್ಲಿ ಈ ಎರಡು ಧಾರಾವಾಹಿಗಳನ್ನು ದೂರದರ್ಶನದಲ್ಲಿ ವೀಕ್ಷಿಸುವವರ ಸಂಖ್ಯೆ ಹೆಚ್ಚಿದ್ದು, ಭಾರತೀಯ ಇತಿಹಾಸದಲ್ಲೇ ದೂರದರ್ಶನ ಅತೀ ಹೆಚ್ಚು ವೀಕ್ಷಣೆ ಕಂಡ ಚಾನೆಲ್ ಆಗಿ ಹೊರ ಹೊಮ್ಮಿದೆ.
ಕಳೆದ ವಾರ ಕೂಡ ವೀಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಎಪ್ರಿಲ್ 3 ಕ್ಕೆ ಕೊನೆಗೊಂಡ ವಾರದಲ್ಲಿ ಸಂಜೆ ಮತ್ತು ಬೆಳಗ್ಗೆ ಬ್ಯಾಂಡ್‌ಗಳಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಸುಮಾರು 40 ಸಾವಿರದಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
2020ರ 13ನೇ ವಾರದ ರೇಟಿಂಗ್ಸ್ ನಲ್ಲಿ ದೂರದರ್ಶನದ ವಾರದ ವೀಕ್ಷಕರ ಸಂಖ್ಯೆ 156.48 ಕೋಟಿ ಆಗಿತ್ತು ಎಂದು BAARC ತಿಳಿಸಿದೆ. ಈ ಮೂಲಕ ಒಂದು ಕಾಲದಲ್ಲಿ ವೀಕ್ಷಣೆಯಲ್ಲಿ ಇತಿಹಾಸ ನಿರ್ಮಿಸಿದ್ದ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳು ದೂರದರ್ಶನಕ್ಕೆ ಮತ್ತೊಮ್ಮೆ ಆ ಸುವರ್ಣ ಯುಗವನ್ನು ಮರಳಿಸಿಕೊಟ್ಟಿವೆ ಎಂದರೆ ತಪ್ಪಾಗಲಾರದು.
ಮಾರ್ಚ್ 21ಕ್ಕೆ ಪ್ರಾರಂಭಗೊಂಡ 12ನೇ ವಾರದಲ್ಲಿ ‘ರಾಮಾಯಣ’ ಧಾರಾವಾಹಿ 1.2 ಮಿಲಿಯನ್ ವೀಕ್ಷಕರನ್ನು ದೂರದರ್ಶನಕ್ಕೆ ತಂದುಕೊಟ್ಟಿದ್ದರೆ, ಅದೇ 13ನೇ ವಾರದಲ್ಲಿ ಈ ಗತಿ 545.8 ಮಿಲಿಯನ್ ಗಳಿಗೆ ಏರಿಕೆ ಕಂಡಿತ್ತು. ಈತನ್ಮಧ್ಯೆ ಡಿಡಿಯಲ್ಲಿ ಮರುಪ್ರಸಾರವಾಗುತ್ತಿರುವ ಸರ್ಕಸ್ ಹಾಗೂ ಶಕ್ತಿಮಾನ್ ಧಾರಾವಾಹಿಗಳೂ ಸಹ ಜನಪ್ರಿಯತೆಯಲ್ಲಿ ಹಿಂದೆ ಬಿದ್ದಿಲ್ಲ.